ಸುಂಟಿಕೊಪ್ಪ, ಫೆ. 3: ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎನ್.ಸಿ. ಪೊನ್ನಪ್ಪ (ಕ್ಲೈವಾ) ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ.
ಜಿಲ್ಲೆಯ ಪ್ರತಿಷ್ಠಿತ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸುಂಟಿಕೊಪ್ಪ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಸಹಕಾರ ಇಲಾಖೆಯ ಉಪನಿಬಂಧಕರಿಗೆ, ರಾಜ್ಯ ಸಹಕಾರ ಇಲಾಖೆ ಆಯುಕ್ತರಿಗೆ ಲಿಖಿತ ದೂರು ಸಲ್ಲಿಸಲಾಗಿದೆ.
ದೂರಿನಲ್ಲಿ ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ತಾ. 25.5.2019ರ ಪತ್ರಿಕೆಯಲ್ಲಿ ಚಿನ್ನಾಭರಣ ಅಡವಿಟ್ಟ ಗ್ರಾಹಕರ ಚಿನ್ನವನ್ನು ಅವಧಿ ಮೀರಿದರೂ ಬಿಡಿಸಿಕೊಳ್ಳದೆ ಇರುವ 53 ಮಂದಿಯ ಹೆಸರು ಪ್ರಕಟವಾಗಿತ್ತು. ಆದರೆ 35 ಗ್ರಾಹಕರ ಚಿನ್ನ ಹರಾಜಾಗಿದ್ದು, ಉಳಿದ 18 ಮಂದಿಯ ಚಿನ್ನಾಭರಣವನ್ನು ಹರಾಜು ಮಾಡದೆ. ಅಧ್ಯಕ್ಷರು ಸಿಇಒ ಹಾಗೂ 3 ಸಿಬ್ಬಂದಿ ಒಳ ವ್ಯವಹಾರ ಮಾಡಿಕೊಂಡಿದ್ದಾರೆ. ಇದರ ಮೌಲ್ಯ 3,50,000 ರೂ. ಆಗಿದೆ ಎಂದು ಕಳೆದ ಮಹಾಸಭೆಯಲ್ಲೂ ಸದಸ್ಯರುಗಳು ಪ್ರಸ್ತಾಪಿಸಿ ಆಡಳಿತ ಮಂಡಳಿ ಕಾರ್ಯವೈಖರಿ ವಿರುದ್ಧ ಹರಿಹಾಯ್ದಿದ್ದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಿಂದ ಅಟೆಂಡರ್ ಮೂಲಕ ಸಂಘಕ್ಕೆ ತರಿಸಿಕೊಂಡ 2 ಲಕ್ಷ ರೂ. ನಗದು ಗುಮಾಸ್ತರಿಗೆ ತಲುಪಿದರೂ ಈ ಹಣದ ಲೆಕ್ಕ ಸಂಘಕ್ಕೆ ಸಿಗದೆ ಹಣ ಕಳುವಾಗಿದೆ ಎಂಬ ಹಾರಿಕೆ ಉತ್ತರ ನೀಡಲಾಗುತ್ತಿದೆ.
ಸಂಘದ ಗೋದಾಮಿನಲ್ಲಿಟ್ಟಿದ್ದ ಗೊಬ್ಬರವನ್ನು 30 ಗ್ರಾಹಕರಿಂದ ಚೆಕ್ ಪಡೆದು ವಿಲೇವಾರಿ ಮಾಡಲಾಗಿದೆ. ಇದರ ಮೊತ್ತ 14 ಲಕ್ಷ ಹಣವನ್ನು ಡ್ರಾ ಮಾಡಲಾಗಿದ್ದು, ಸಂಘದ ಖಾತೆಗೆ ಜಮಾ ಮಾಡದೆ ವಂಚಿಸಲಾಗಿದೆ.
2017-18ನೇ ಸಾಲಿನ ಕೃಷಿ ಸಾಲದಲ್ಲಿ ರಿಯಾಯಿತಿ ಹಣ (ಸಾಲಮನ್ನಾ) 50,000 ರೂ.ಗಳನ್ನು 20 ಮಂದಿಗೆ ಕೊಡದೆ ತಮ್ಮಲ್ಲೇ ಹಂಚಿಕೆ ಮಾಡಿಕೊಳ್ಳಲಾಗಿದೆ.
ನಿತ್ಯನಿಧಿ ಠೇವಣಿ ಖಾತೆ ಮುಕ್ತಾಯಗೊಂಡರೂ ಅದನ್ನು ಮರು ಚಾಲನೆ ಮಾಡಿ ಹೆಚ್ಚಿನ ಪ್ರಮಾಣದ ಬಡ್ಡಿಯನ್ನು ಪಡೆದು ದುರುಪಯೋಗ ಪಡಿಸಿಕೊಳ್ಳಲಾಗಿದೆ.
ನಿತ್ಯ ನಿಧಿ ಪಿಗ್ಮಿ ಠೇವಣಿಯಲ್ಲಿಯೂ ಅವ್ಯವಹಾರ ನಡೆದಿದÀ್ದು, ಒಬ್ಬ ನಿತ್ಯನಿಧಿ ಖಾತೆದಾರರ ಹೆಸರಿನಲ್ಲಿ 1 ಬಾರಿ ಠೇವಣಿ ಪೂರ್ಣ 1 ಲಕ್ಷ ಅಮಾನತ್ತು ಸಾಲ ಕೊಟ್ಟ ನಂತರ ಅದೇ ವ್ಯಕ್ತಿಯ ಹೆಸರಿನಲ್ಲಿ ಅಥವಾ ಬೇರೆಯವರ ಹೆಸರಿನಲ್ಲಿ ಖಾತೆಯನ್ನು ಸೃಷ್ಠಿ ಮಾಡಿ ಸಾಲವನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಹಲವು ವರ್ಷಗಳಿಂದ ವಾರ್ಷಿಕ ಆಯವ್ಯಯ ಪಟ್ಟಿಯಲ್ಲಿ 32 ಲಕ್ಷ ಆಜು ಜಾಜು ಲಾಭಾಂಶ ತೋರಿಸಲಾಗುತ್ತಿದೆ. ಇಲ್ಲಿನ 7 ಶಾಖೆ ಮುಖ್ಯ ಕಚೇರಿ ವ್ಯವಹಾರ ಸೇರಿದರೆ 1 ಕೋಟಿ ರೂ. ಅಧಿಕ ಲಾಭ ಬರಬೇಕಾಗಿದೆ. ಸಂಘದ ವಾಣಿಜ್ಯ ಕಟ್ಟಡ ಬಾಡಿಗೆ ವಸೂಲಾತಿ ಪಾರದರ್ಶಕವಾಗಿರದೆ ಇದರಲ್ಲೂ ಅವ್ಯವಹಾರದ ಶಂಕೆ ಕಂಡು ಬರುತ್ತಿದೆ ಎಂದು ಕೊಡಗು ಜಿಲ್ಲಾ ಸಹಕಾರ ಇಲಾಖೆಯ ಉಪನಿಬಂಧಕರು ಹಾಗೂ ರಾಜ್ಯ ಸಹಕಾರ ಇಲಾಖೆಯ ಆಯುಕ್ತರಿಗೆ ಸಂಘದ ನೊಂದ ಗುಮಾಸ್ತರೊಬ್ಬರು ಲಿಖಿತದೂರು ಸಲ್ಲಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.