ಸೋಮವಾರಪೇಟೆ, ಫೆ. 3: ಬ್ಯಾಂಕಿನಿಂದ ಸಾಲ ಪಡೆದು ಕಾರನ್ನು ಖರೀದಿಸಿ ಸ್ವ ಉದ್ಯೋಗದಲ್ಲಿ ತೊಡಗಿದ್ದ ತಾಲೂಕಿನ ಸುಂಟಿಕೊಪ್ಪದ ಯುವಕನನ್ನು ಶ್ರೀರಂಗಪಟ್ಟಣದ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು, ಹಣ, ಮೊಬೈಲ್ನೊಂದಿಗೆ ಕಾರನ್ನೂ ದರೋಡೆಗೈದಿರುವ ಘಟನೆ ನಡೆದಿದ್ದು, ಗುಂಪಿನಿಂದ ನಡೆದ ಕೃತ್ಯದ ಬಗ್ಗೆ ಯುವಕ ಶ್ರೀರಂಗ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.ತಾಲೂಕಿನ ಸುಂಟಿಕೊಪ್ಪದ ಗಿರಿಯಪ್ಪಮನೆ ಬಡಾವಣೆ ನಿವಾಸಿ ಪ್ಯಾಟ್ರಿಕ್ ಅವರ ಮಗ ರೈಮಂಡ್ ಡಿಸೋಜ ಎಂಬಾತ, ಕಳೆದ ಮೂರು ತಿಂಗಳ ಹಿಂದೆ ಸುಂಟಿಕೊಪ್ಪದ ಕರ್ನಾಟಕ ಬ್ಯಾಂಕ್ನಲ್ಲಿ ರೂ. 4.50 ಲಕ್ಷ ಸಾಲ ಮಾಡಿ, ಮಾರುತಿ ಸ್ವಿಫ್ಟ್ (ಕೆ.ಎ.12 ಬಿ.7987) ಕಾರು ಖರೀದಿಸಿದ್ದ.ಈ ಕಾರನ್ನು ಬೆಂಗಳೂರಿನ ಓಲೋ ಸಂಸ್ಥೆಗೆ ಒಡಂಬಡಿಕೆ ಮಾಡಿಕೊಂಡು ಬಾಡಿಗೆ ಆಧಾರದಲ್ಲಿ ಚಾಲಿಸಿಕೊಂಡಿದ್ದ. ಮೊನ್ನೆ ದಿನ ಸುಂಟಿಕೊಪ್ಪಕ್ಕೆ ತನ್ನದೇ ಕಾರಿನಲ್ಲಿ ಆಗಮಿಸಿದ್ದ ರೈಮಂಡ್, ನಿನ್ನೆ ನಸುಕಿನ ಜಾವ ಮರಳಿ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಒಳಗಾಗಿದ್ದಾನೆ.ಶ್ರೀರಂಗಪಟ್ಟಣ ಸಮೀಪದ ಗೌರಿಪುರದಿಂದ 10 ಕಿ.ಮೀ. ದೂರವಿರುವ ಕೋಡಿಶೆಟ್ಟಿಪುರ ಎಂಬಲ್ಲಿ ನಸುಕಿನ ಜಾವ 5.45ಕ್ಕೆ ತೆರಳುತ್ತಿದ್ದಂತೆ ರಸ್ತೆಯಲ್ಲಿ ಅಡ್ಡಲಾಗಿ ಬಿದ್ದ ಬೈಕ್ ಮತ್ತು ಅದರ ಸನಿಹವೇ ಬಿದ್ದಿದ್ದ ಯುವಕನನ್ನು ಕಂಡಿದ್ದಾನೆ.
ಯಾರೋ ಅಪಘಾತಕ್ಕೀಡಾಗಿ ದ್ದಾರೆ ಎಂದು ಭಾವಿಸಿ, ಸಹಾಯ ಮಾಡಲೆಂದು ತನ್ನ ಕಾರನ್ನು ನಿಲ್ಲಿಸಿ, ಅಪಘಾತ ನಡೆದಂತೆ ಕಂಡುಬಂದ ಸ್ಥಳಕ್ಕೆ ರೈಮಂಡ್ ಡಿಸೋಜ ತೆರಳುತ್ತಿದ್ದ ಸಂದರ್ಭ, ಬೈಕ್ನ
ಬಳಿ ಬಿದ್ದಿದ್ದ ಯುವಕ ಎದ್ದು ನಿಂತಿದ್ದಾನೆ.
(ಮೊದಲ ಪುಟದಿಂದ) ಇದೇ ಸಂದರ್ಭ ಕತ್ತಲಲ್ಲಿ ಮರೆಯಾಗಿ ನಿಂತಿದ್ದ ಇತರ ನಾಲ್ವರು ಯುವಕರು ಡಿಸೋಜಾನನ್ನು ಸುತ್ತುವರಿದು ಹಲ್ಲೆ ನಡೆಸಿ, ಆತನ ಬಳಿಯಿದ್ದ ಮೊಬೈಲ್, 1500 ರೂಪಾಯಿ ನಗದು ಸೇರಿದಂತೆ ಸಾಲ ಮಾಡಿ ಖರೀದಿಸಿದ್ದ ಕಾರನ್ನೂ ಅಪಹರಿಸಿದ್ದಾರೆ.
ದಿಢೀರ್ ಎದುರಾದ ಆಘಾತದಿಂದ ಸಾವರಿಸಿಕೊಳ್ಳುವಷ್ಟರಲ್ಲಿ ಐವರು ದರೋಡೆಕೋರರ ತಂಡ ಕಾರು ಮತ್ತು ಬೈಕಿನಲ್ಲಿ ಪರಾರಿಯಾಗಿದ್ದಾರೆ. ನಂತರ ಡಿಸೋಜ ಸ್ಥಳೀಯರ ಸಹಕಾರದೊಂದಿಗೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಹೆದ್ದಾರಿಯಲ್ಲಿ ದರೋಡೆ ನಡೆದ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ದರೋಡೆಕೋರರು ಬೆಂಗಳೂರು ಮಾರ್ಗದಲ್ಲಿ ತೆರಳಿದ ಬಗ್ಗೆ ಮಾಹಿತಿ ಪಡೆದ ತಕ್ಷಣ ಮಂಡ್ಯ ಮತ್ತು ಮದ್ದೂರು ಪೊಲೀಸ್ ಠಾಣೆಗೆ ವೈರ್ಲೆಸ್ ಮೂಲಕ ಮಾಹಿತಿ ರವಾನಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅವರ ಮಾರ್ಗದರ್ಶನ ದಲ್ಲಿ ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರಿನಲ್ಲಿ ನಾಕಾಬಂದಿ ರಚಿಸಿ ದರೋಡೆಕೋರರ ಬಂಧನಕ್ಕೆ ಪ್ರಯತ್ನಿಸಿದರೂ ಯಾವದೇ ಯಶಕಾಣಲಿಲ್ಲ. ದರೋಡೆಕೋರರು ಹೆದ್ದಾರಿಯ ಬದಲಿಗೆ ಗ್ರಾಮೀಣ ರಸ್ತೆಗಳ ಮೂಲಕ ತೆರಳಿ ತಪ್ಪಿಸಿಕೊಂಡಿರಬಹುದು ಎಂದು ಪೊಲೀಸರು ಸಂಶಯಿಸಿದ್ದು, ಖತರ್ನಾಕ್ ಗುಂಪಿನ ಬಂಧನಕ್ಕೆ ಇನ್ನಿತರ ಮಾರ್ಗದಲ್ಲಿ ಬಲೆ ಬೀಸಿದ್ದಾರೆ.
ಸುಂಟಿಕೊಪ್ಪದ ಯುವಕನನ್ನು ದರೋಡೆಗೈಯುವ 15 ನಿಮಿಷಕ್ಕೂ ಮೊದಲೇ ಈ ತಂಡ ಮತ್ತೊಂದು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದುದು ತಿಳಿದುಬಂದಿದೆ. 5.30ರ ಸುಮಾರಿಗೆ ಶ್ರೀರಂಗಪಟ್ಟಣದ ನಿವಾಸಿ, ಟಿಪ್ಪರ್ ಚಾಲಕ ಮಣಿಕುಮಾರ್ ಎಂಬವರ ಫ್ಯಾಷನ್ ಪ್ರೋ ಬೈಕನ್ನು ತಡೆದು, ಮಾರಕಾಸ್ತ್ರಗಳನ್ನು ತೋರಿಸಿ, ಹಲ್ಲೆ ನಡೆಸಿ, 500 ನಗದು, ಮೊಬೈಲ್ ಮತ್ತು ಬೈಕನ್ನು ದರೋಡೆಗೈದು ಪರಾರಿಯಾಗಿದ್ದಾರೆ. ಈ ಬಗ್ಗೆ ಮಣಿಕುಮಾರ್ ಅವರೂ ಸಹ ಪೊಲೀಸರಿಗೆ ದೂರು ನೀಡಿದ್ದಾರೆ.
ಒಟ್ಟಾರೆ ಹೆದ್ದಾರಿಯಲ್ಲಿ ರಾತ್ರಿ ಮತ್ತು ನಸುಕಿನ ವೇಳೆ ದರೋಡೆ ಪ್ರಕರಣಗಳು ನಡೆಯುತ್ತಿರುವದರಿಂದ, ಈ ಸಮಯದಲ್ಲಿ ಸಂಚರಿಸುವವರು ಜಾಗ್ರತೆ ವಹಿಸಬೇಕಿದೆ. ಕಾರಿನ ಗಾಜಿಗೆ ಮೊಟ್ಟೆ ಒಡೆಯುವದು, ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಕಾರನ್ನು ಪಂಕ್ಚರ್ ಮಾಡುವದು, ಅವಘಡಕ್ಕೀಡಾದಂತೆ ನಟಿಸಿ, ಸಹಾಯಕ್ಕೆ ಆಗಮಿಸುವವರನ್ನು ದರೋಡೆಗೈಯುವ ಘಟನೆಗಳು ಆಗಿದ್ದಾಗ್ಗೆ ನಡೆಯುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಚಾಲಕರು ಹೆಚ್ಚಿನ ನಿಗಾವಹಿಸಬೇಕಿದೆ.