ವೀರಾಜಪೇಟೆ, ಫೆ. 4: ತಿತಿಮತಿ ಬಳಿಯ ನೋಕ್ಯದ ಕರಡಿಕೊಪ್ಪಲಿನಲ್ಲಿ ಒಂದು ವರ್ಷದ ಹಿಂದೆ ಅಕ್ಕನ ಶೀಲ ಶಂಕಿಸಿ ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪದ ಮೇರೆ ಪಣಿ ಎರವರ ಪುಟ್ಟ ಎಂಬಾತನಿಗೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಹತ್ತು ವರ್ಷಗಳ ಕಠಿಣ ಸಜೆ ಹಾಗೂ ರೂ. 30,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಕಳೆದ ತಾ. 10-2-19 ರಂದು ರಾತ್ರಿ 9 ಗಂಟೆಯ ಸಮಯದಲ್ಲಿ ಕರಡಿಕೊಪ್ಪದ ಲೈನು ಮನೆಯಲ್ಲಿದ್ದ ವಿಧವೆ ಪಾರ್ವತಿಯೊಂದಿಗೆ ಆಕೆಯ ತಮ್ಮ ಪುಟ್ಟ ಜಗಳವಾಡಿ ರಾತ್ರಿ 9 ಗಂಟೆಯ ತನಕ ನೀನು ಎಲ್ಲಿಗೆ ಹೋಗಿದ್ದೆ ಎಂದು ಪ್ರಶ್ನಿಸಿದಲ್ಲದೆ ಆಕೆಯ ಶೀಲ ಶಂಕಿಸಿ ಮನೆಯ ಅಡುಗೆ ಕೋಣೆಯಲ್ಲಿದ್ದ ಕತ್ತಿಯಿಂದ ಆಕೆಯ ಮೇಲೆ ಪ್ರಹಾರ ಮಾಡಿದಾಗ ಪಾರ್ವತಿ ಸಾವನ್ನಪ್ಪಿದ್ದಳೆಂದು ಆಕೆಯ ತಂದೆ ಪಣಿ ಎರವರ ಬೆಳ್ಳಿ ಗೋಣಿಕೊಪ್ಪ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪೊಲೀಸರು ಪುಟ್ಟನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಆತನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು.