ಸಿದ್ದಾಪುರ, ಫೆ.3: ಸಿದ್ದಾಪುರದಲ್ಲಿ ತಣಲ್ ಸಂಸ್ಥೆಯಿಂದ ಉಚಿತ ಡಯಾಲಿಸಿಸ್ ಕೇಂದ್ರವನ್ನು ಅಮ್ಮತ್ತಿಯ ಆರ್.ಐ.ಹೆಚ್.ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಚಂದ್ರು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಪ್ರಸ್ತುತ ಕಾಲದಲ್ಲಿ ಕಿಡ್ನಿ ರೋಗಗಳು ಹೆಚ್ಚಾಗುತ್ತಿದೆ ಈ ಹಿನ್ನೆಲೆಯಲ್ಲಿ ರೋಗಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಡಯಾಲಿಸಿಸ್‍ಗಾಗಿ ದೂರದ ಊರುಗಳಿಗೆ ತೆರಳುತ್ತಿದ್ದರು. ಬಡ ರೋಗಿಗಳಿಗೆ ಡಯಾಲಿಸಿಸ್ ಅನ್ನು ಉಚಿತವಾಗಿ ನೀಡುತ್ತಿರುವ ತಣಲ್ ಸಂಸ್ಥೆಯ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಣಲ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಡಾ.ಇದ್ರೀಸ್ ಮಾತನಾಡಿ, ತಣಲ್ ಸಂಸ್ಥೆಯಿಂದ 33 ನೇ ಕೇಂದ್ರವನ್ನು ಸಿದ್ದಾಪುರದಲ್ಲಿ ಪ್ರಾರಂಭಿಸಲಾಗಿದ್ದು, ಈ ಭಾಗದ ಜನರು ಎರಡು ವರ್ಷಗಳ ಹಿಂದೆ ಡಯಾಲಿಸಿಸ್ ಕೇಂದ್ರ ಪ್ರಾರಂಭಿಸುವಂತೆ ಮನವಿ ಮಾಡಿಕೊಂಡಿದ್ದರು. ಇದೀಗ ಉಚಿತ ಡಯಾಲಿಸಿಸ್ ಕೇಂದ್ರ ಪ್ರಾರಂಭಿಸಲಾಗಿದೆ ಎಂದರು. ಯಾವುದೇ ಪ್ರಚಾರವಿಲ್ಲದೇ ಸಾರ್ವಜನಿಕ ಸೇವೆಯನ್ನು ಜಾತಿ, ಭೇದ, ರಾಜಕೀಯವಿಲ್ಲದೇ ಮುಂದುವರೆಸಿಕೊಂಡು ಹೋಗಲಾಗುತ್ತಿದ್ದು, ಸಾರ್ವಜನಿಕರ ಸಹಕಾರವೂ ಅಗತ್ಯ ಎಂದರು. ಬಡವರ ಸಮಸ್ಯೆಗಳಿಗೆ ತಣಲ್ ಸಂಸ್ಥೆಯು ಸ್ಪಂದಿಸುತ್ತಿದೆ ಎಂದರು.
ಎಸ್.ಎನ್.ಡಿ.ಪಿ ಕೊಡಗು ಜಿಲ್ಲಾ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಹಿಂದಿನ ಕಾಲದಲ್ಲಿ ಮಾರಕ ರೋಗಗಳಿಗೆ ರೋಗಿಗಳು ಬಲಿಯಾಗುತ್ತಿದ್ದರು. ಆದರೇ ಇದೀಗ ಆಧುನಿಕ ತಂತ್ರಜ್ಞಾನ ಬೆಳೆದಿದ್ದು, ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತಿದೆ. ಆಹಾರ ಪದ್ಧತಿಗಳು ಬದಲಾಗುತ್ತಿದ್ದು, ರೋಗಗಳು ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ತಣಲ್ ಸಂಸ್ಥೆಯ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ದಾಪುರ ಸಂತ ಜೋಸೆಫರ ಚರ್ಚ್‍ನ ಫಾ.ಪಿ ಜೋನಾಸ್ ಮಾತನಾಡಿ, ಸಿದ್ದಾಪುರದಲ್ಲಿ ಉಚಿತವಾಗಿ ಡಯಾಲಿಸಿಸ್ ಕೇಂದ್ರ ಆರಂಭಿಸಿರುವುದು ಈ ಬಾಗದ ಜನರ ಭಾಗ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮನುಷ್ಯನಿಗೆ ಆಶ್ರಯ, ಆರೋಗ್ಯ, ಉದ್ಯೋಗ ಮುಖ್ಯವಾಗಿದ್ದು, ಈ ಬಗ್ಗೆ ತಣಲ್ ಸಂಸ್ತೆಯು ಬಡವರಿಗಾಗಿ ಜಾತಿ ಬೇದವಿಲ್ಲದೇ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದರು.
ವಕೀಲ ಎಂ.ಎಸ್. ವೆಂಕಟೇಶ್, ತಣಲ್ ಸಂಸ್ಥೆಯು ಬಡ ರೋಗಿಗಳಿಗೆ ಚಿಕಿತ್ಸೆ ಸಹಕಾರದೊಂದಿಗೆ ಪ್ರವಾಹದ ಸಂದರ್ಭ ಸಿಲುಕಿಕೊಂಡಿದ್ದ ಸಂತ್ರಸ್ತರ ನೆರವಿಗೆ ಕೂಡ ಸಹಕಾರ ನೀಡಿರುವುದು ಉತ್ತಮ ಬೆಳವಣಿಗೆ ಎಂದರು. ತಣಲ್ ಸಂಸ್ಥೆಗೆ ಸಂಘ ಸಂಸ್ಥೆಗಳು ಸಹಾಯ ಮಾಡಬೇಕೆಂದು ಕರೆ ನೀಡಿದರು.
ಸೇಕ್ರೆಡ್ ಹಾರ್ಟ್ ಆಸ್ಪತ್ರೆಯ ಆಡಳಿತ ಅಧಿಕಾರಿ ಟೆಜ್ಲಿನ್ ಥೋಮಸ್ ಮಾತನಾಡಿ, ರೋಗಿಗಳು ಡಯಾಲಿಸಿಸ್‍ಗಾಗಿ ಅಧಿಕ ಹಣ ಖರ್ಚುಮಾಡಿ ದೂರದ ಊರುಗಳಿಗೆ ತೆರಳುತ್ತಿದ್ದರು. ಬಡವರು ನೋವಿನಿಂದ ಸಂಪಾದಿಸಿದ ಹಣವನ್ನು ಚಿಕಿತ್ಸೆಗಾಗಿ ವೆಚ್ಚ ಮಾಡುತ್ತಿದ್ದು, ಇದನ್ನರಿತ ತಣಲ್ ಸಂಸ್ಥೆಯು ಬಡ ರೋಗಿಗಳ ನೆರವಿಗೆ ಬಂದಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿದ್ದಾಪುರದ ತಣಲ್ ಸಂಸ್ಥೆಯ ಕಾರ್ಯದರ್ಶಿ ಟಿ.ಎ ಬಷೀರ್, ಸಂಸ್ಥೆಯು ಸಿದ್ದಾಪುರದಲ್ಲಿ ಆರಂಭಿಸಿರುವ ಡಯಾಲಿಸಿಸ್ ಕೇಂದ್ರದಲ್ಲಿ ಇದೀಗ 4 ಯಂತ್ರಗಳಿಂದ ಪ್ರತಿದಿನ 8 ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಪ್ರತಿ ತಿಂಗಳು ಸುಮಾರು ರೂ. 1.50 ಲಕ್ಷ ವೆಚ್ಚವಾಗುತ್ತಿದೆ. ದಾನಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭ ಉದ್ಯಮಿಗಳಾದ ಸಿ.ಕೆ ಬಷೀರ್, ಅಹಮ್ಮದ್, ಡಾ.ಕ್ರಿಸ್ಟಿ ಮೇರಿ ಸೇರಿದಂತೆ ಇನ್ನಿತರರು ಇದ್ದರು. ಟಿ.ಎ ಬಷೀರ್ ಸ್ವಾಗತಿಸಿ, ಎ.ಕೆ ಅಬ್ದುಲ್ಲ ವಂದಿಸಿದರು.
-ಚಿತ್ರ, ವರದಿ: ವಾಸು