ಸೋಮವಾರಪೇಟೆ, ಫೆ. 3: ತಾಲೂಕು ಒಕ್ಕಲಿಗರ ಯುವ ವೇದಿಕೆ ಮತ್ತು ರಾಜ್ಯ ಹಾಗೂ ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ತಾ. 8 ಮತ್ತು 9 ರಂದು ಪಟ್ಟಣದಲ್ಲಿ ಕಬಡ್ಡಿ ಹಬ್ಬ ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷ ಬಿ.ಜೆ.ದೀಪಕ್ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ 3ನೇ ವರ್ಷದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ತಾ. 8 ರಂದು ಸಂಜೆ 3 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಪ್ರೋ ಕಬಡ್ಡಿ ಪಂದ್ಯಾವಳಿ ಮಾದರಿಯಲ್ಲಿ ಸುಸಜ್ಜಿತ ಅಂಕಣದಲ್ಲಿ ಪಂದ್ಯಾಟಗಳು ನಡೆಯಲಿವೆ. ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‍ನಲ್ಲಿ ನೊಂದಾವಣೆಗೊಂಡಿರುವ 15 ತಂಡಗಳು ಭಾಗವಹಿಸಲಿವೆ. ಪ್ರೋ ಕಬಡ್ಡಿಯ ಆಟಗಾರರಾದ ಸುಖೇಶ್ ಹೆಗ್ಡೆ, ಪ್ರಶಾಂತ್ ರೈ, ಪವನ್ ಶೆರಾವತ್ ಮತ್ತಿತರ ಸೇರಿದಂತೆ 20ಕ್ಕೂ ಅಧಿಕ ಪ್ರೋ ಕಬಡ್ಡಿ ಆಟಗಾರರು ಆಗಮಿಸಿ, ಕಬಡ್ಡಿ ಪ್ರಿಯರಿಗೆ ಆಟದ ರಸದೌತಣ ನೀಡಲಿದ್ದಾರೆ ಎಂದರು.
ಪ್ರಥಮ ಬಹುಮಾನವಾಗಿ 1 ಲಕ್ಷ ರೂ., ದ್ವಿತೀಯ ಬಹುಮಾನ 60 ಸಾವಿರ ರೂ., ತೃತೀಯ ಬಹುಮಾನ 30 ಸಾವಿರ, ಚತುರ್ಥ ಬಹುಮಾನ ವಾಗಿ 30 ಸಾವಿರ ರೂ. ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವದು. ಸ್ಥಳೀಯ ಕಬಡ್ಡಿ ಪ್ರತಿಭೆಗಳನ್ನು ಗುರುತಿಸಲು ತಾ.8ರಂದು ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಜಿಲ್ಲೆಯ ತಂಡಗಳ ನಡುವಿನ ಪಂದ್ಯಾಟಗಳು ಇದೇ ಮೈದಾನದಲ್ಲಿ ನಡೆಯಲಿದ್ದು, ನೋಂದಾಯಿಸಿಕೊಳ್ಳಲು ತಾ. 6ರಂದು ಸಂಜೆ 5 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ತಾ. 7ರಂದು ಟೈಸ್ ಬಿಡುಗಡೆ ಮಾಡಲಾಗುವದು ಎಂದರು.
ಈ ಪಂದ್ಯಾಟದಲ್ಲಿ ವಿಜೇತವಾಗುವ ತಂಡಗಳಿಗೆ ಪ್ರಥಮ ಬಹುಮಾನವಾಗಿ 10 ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನವಾಗಿ 5 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವದು. ಫೈನಲ್ ಪ್ರವೇಶಿಸಿದ ತಂಡಗಳೊಂದಿಗೆ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶ ಮಾಡಿದ ತಂಡದೊಂದಿಗೆ ಪ್ರದರ್ಶನ ಪಂದ್ಯ ನಡೆಯಲಿದೆ. ಎಲ್ಲಾ ಆಟಗಾರರಿಗೂ ಸಮವಸ್ತ್ರ ಮತ್ತು ಶೂ ಕಡ್ಡಾಯವಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ ತಾ. 8 ರಂದು ಸಂಜೆ 3 ಗಂಟೆಗೆ ಪ್ರಾರಂಭವಾಗಲಿದ್ದು, ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವ ಸದಾನಂದಗೌಡ, ಆದಿಚುಂಚನಗಿರಿ ಮಹಾಸಂಸ್ಥಾನ ಮಠಾಧೀಶರಾದ ಶ್ರೀನಿರ್ಮಲಾ ನಂದನಾಥ ಸ್ವಾಮೀಜಿ, ಹಾಸನದ ಸಂಸದ ಪ್ರಜ್ವಲ್ ರೇವಣ್ಣ, ಮಾಜೀ ಸಚಿವ ಎಂ. ಕೃಷ್ಣಪ್ಪ ಸೇರಿದಂತೆ ಇತರರು ಆಗಮಿಸಲಿದ್ದು, ಅಧ್ಯಕ್ಷತೆ ಯನ್ನು ವೇದಿಕೆಯ ಅಧ್ಯಕ್ಷ ಬಿ.ಜೆ. ದೀಪಕ್ ವಹಿಸಲಿದ್ದಾರೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಹೆಚ್.ಕೆ. ಪ್ರಸಿ (ಮೊ:9448401922) ಕೆ.ಬಿ. ಸುರೇಶ್ (ಮೊ:9448433294) ಅವರುಗಳನ್ನು ಸಂಪರ್ಕಿಸಬಹುದು ಎಂದರು. ಗೋಷ್ಠಿಯಲ್ಲಿ ವೇದಿಕೆಯ ಕಾರ್ಯದರ್ಶಿ ದಯಾನಂದ್, ಉಪಾಧ್ಯಕ್ಷ ನತೀಶ್ ಮಂದಣ್ಣ, ಸಂಘಟನಾ ಕಾರ್ಯದರ್ಶಿ ಹೆಚ್.ಕೆ. ಪ್ರಸಿ, ಪದಾಧಿಕಾರಿಗಳಾದ ಕೆ.ಬಿ. ಸುರೇಶ್ ಉಪಸ್ಥಿತರಿದ್ದರು.