ಕರ್ನಾಟಕದ ಜಾನಪದ ಸಂಸ್ಕøತಿಯು ಭಾರತದೇಶದಲ್ಲೇ ಅತಿ ಶ್ರೀಮಂತವಾದ ಸಂಸ್ಕøತಿ ಯಾಗಿದೆ. ಇದು ಕೇವಲ ಸಾಹಿತ್ಯ ಕ್ಷೇತ್ರಕ್ಕಷ್ಟೇ ಸೀಮಿತವಾಗಿರದೆ ಆ ಚೌಕಟ್ಟನ್ನೂ ಮೀರಿ ನೃತ್ಯ, ಬಯಲಾಟಗಳನ್ನೂ ಒಳಗೊಂಡಿದ್ದು, ಅಭ್ಯಸಿಸಿದಷ್ಟೂ ಮತ್ತಷ್ಟು ಚಿತ್ರಣಗಳನ್ನು ನಮ್ಮ ಮುಂದೆ ಇರಿಸುತ್ತದೆ. ಡೊಳ್ಳು ಕುಣಿತ, ಕರಡಿಮಜಲು, ವೀರಗಾಸೆ, ನಂದಿಕೋಲು, ಬಾಳೋಪಾಟ್, ಉಮ್ಮತ್ತಾಟ್,ಯಕ್ಷಗಾನ, ಶ್ರೀಕೃಷ್ಣ ಪಾರಿಜಾತ ಹೀಗೆ ಹತ್ತು ಹಲವು ಸಾಂಸ್ಕøತಿಕ ವಿಭಾಗಗಳನ್ನು ತನ್ನ ಮಡಿಲಿನಲ್ಲಿ ತುಂಬಿಕೊಂಡಿದೆ. ಇದರಲ್ಲಿ, ಕನ್ನಡ ಗಾದೆಗಳು ಎಂಬ ನಿತ್ಯಬಳಕೆಯ ನುಡಿಗಟ್ಟುಗಳು ಸಹ ತನ್ನ ಶ್ರೀಮಂತಿಕೆಯನ್ನು ಮೆರೆದಿವೆ, ಮೆರೆಯುತ್ತಿವೆ.
“ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್” ಇದ್ದ ಕಾಲಕ್ಕಿಂತಲೂ ಮೊದಲೇ ಗಾದೆಗಳು ಕನ್ನಡ ನೆಲದಲ್ಲಿ ಹುಟ್ಟಿಕೊಂಡಿರಬೇಕೆಂದು ತೋರುತ್ತದೆ. ಇಂತಹ ಗಾದೆಗಳು ಅಂದಿನ ಜನರ ಅನುಭವದ ಕುಲುಮೆಯಲ್ಲಿ ಜನಿಸಿ, ಬದುಕಿನ ಎಲ್ಲ ರಂಗಗಳಲ್ಲೂ ಹಾಸುಹೊಕ್ಕಾಗಿ ಬೆಳೆದು,ಸಂದರ್ಭಗಳಿಗೆ ಅನುಗುಣವಾಗಿ ಹೇಳಲ್ಪಟ್ಟಿವೆ, ಬಳಸಲ್ಪಟ್ಟಿವೆ. ಈ ಗಾದೆಗಳ ಸಂಖ್ಯೆಯು ಇಂತಿಷ್ಟೇ ಎಂದು ನಿಖರವಾಗಿ ಹೇಳಲಂತೂ ಸಾಧ್ಯವಾಗದು. ಹತ್ತು ಕಟ್ಟುವ ಕಡೆಯಲ್ಲಿ ಇಂತಹ ಗಾದೆಯೆಂಬ ಒಂದು ಮುತ್ತನ್ನು ಕಟ್ಟಿ, ಹೇಳುವ ವಿಷಯವು ಮನದಾಳದಲ್ಲಿ ಸ್ಪಷ್ಟವಾಗಿ ಉಳಿಯುವಂತೆ ಮಾಡುವ ಜಾನಪದದ ತಂತ್ರವು ನಿಜಕ್ಕೂ ಪ್ರಶಂಸನೀಯವಾದುದಾಗಿದೆ. ಗಾದೆಯ ಮಾತು ವೇದಕ್ಕೆ ಸಮ ಎಂದು ಭಾವಿಸಿದ್ದ ಆಗಿನ ಕಾಲದಲ್ಲಿ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದು ಮತ್ತೊಮ್ಮೆ ಹೇಳಿದಾಗ ಗಾದೆಗೆ ನಮ್ಮ ಹಿರಿಯರು ನೀಡುತ್ತಿದ್ದ ಮಹತ್ವವನ್ನು ಗುರುತಿಕೊಳ್ಳಬಹುದು. ಬದುಕನ್ನು ಹೇಗೆ ರೂಢಿಸಿಕೊಳ್ಳಬಹುದು ಎಂದು ವೇದಗಳು ತಿಳಿಸಿದರೆ, ರೂಢಿಸಿಕೊಂಡ ಬದುಕಿನ ಆಳಕ್ಕೆ ಹೊಕ್ಕು ಅಲ್ಲಿನ ಘಟನೆಗಳನ್ನು ಅತಿ ಸರಳವಾದ ರೀತಿಯಲ್ಲಿ ಶ್ರೀಸಾಮಾನ್ಯರಿಗೂ ತಲುಪುವಂತೆ ಗಾದೆಗಳು ಹೊರಬರತೊಡಗಿದವು. ಹೀಗಾಗಿ, ಯಾವುದೇ ಘಟನೆಗಳನ್ನು ವರ್ಣಿಸುವಾಗ, ಆ ಘಟನೆಗಳನ್ನು ಇನ್ನಷ್ಟು ಅಲಂಕಾರಿಕವಾಗಿ ಇಂತಹ ಗಾದೆಗಳು ಜನರಿಗೆ ಮುಟ್ಟಿಸುತ್ತವೆ.
“ಅಕ್ಕ ಬಾರದಿದ್ದರೆ ಅಮಾವಾಸ್ಯೆಯು ನಿಲ್ಲುತ್ತದೆಯೇ” ಎನ್ನುವ ಒಂದು ಸಾಮಾನ್ಯವಾದ ಗಾದೆಯ ಆಳಕ್ಕೆ ಹೊಕ್ಕು ಅದರಲ್ಲಿರುವ ಚಿಂತನೆಯನ್ನು ಗಮನಿಸಿದರೆ, ಕಾಲವು ಯಾರನ್ನೂ ತಡೆಯದು ಎಂಬುದು ಗೋಚರವಾಗುತ್ತದೆ. ಅಕ್ಕ ಎಂಬುದನ್ನು ವಸ್ತುವಾಗಿರಿಸಿ, ಅಮಾವಾಸ್ಯೆ ಎಂಬುದನ್ನು ಅದರ ಪ್ರಭಾವವನ್ನಾಗಿಸಿ ಇಂತಹ ಅತಿಸಮೀಪದ, ಆತ್ಮೀಯವಾದ ವ್ಯಕ್ತಿಗಿಂತಲೂ ಕಾಲವೆನ್ನುವ ನಿರ್ಣಾಯಕ ಘಟ್ಟಕ್ಕೆ ಮಹತ್ವವನ್ನು ನೀಡಿದ್ದಾರೆ. ಯಾರು ಯಾರನ್ನೂ ಕಾಯುವುದಿಲ್ಲ, ಎಲ್ಲರೂ ಅವರವರ ಕರ್ತವ್ಯದಲ್ಲಿಯೇ ತೊಡಗಿಸಿಕೊಳ್ಳಬೇಕು ಎಂಬ ಅರಿವು ಈ ಗಾದೆಯಲ್ಲಿ ಹುದುಗಿದೆ. ಒಬ್ಬ ವ್ಯಕ್ತಿಗಿಂತಲೂ ಸಮಯದ ಮೇಲಿನ ಮಹತ್ವವನ್ನು ಈ ಗಾದೆಯಲ್ಲಿ ಬಿಂಬಿಸಿ, ಸಮಯವನ್ನು ಹಾಳು ಮಾಡಬಾರದು ಎಂಬ ಆಶಯವನ್ನು ಇಲ್ಲಿ ಜನಸಾಮಾನ್ಯರಿಗೆ ತಿಳಿಸಲಾಗಿದೆ. ಆದರೆ, ಈ ದಿನಗಳಲ್ಲಿ ಸಭೆಸಮಾರಂಭಗಳಿಗೆ ಬರಲಿರುವ ಅತಿಥಿಗಳೋ, ಉದ್ಘಾಟಕರೋ ತಡಮಾಡಿದಾಗ ಅವರನ್ನು ಕಾಯುತ್ತಾ ಸಭಿಕರೊಂದಿಗೆ ನಿರ್ವಾಹಕರೂ ಸಮಯವನ್ನು ಹಾಳುಮಾಡುತ್ತಿರುವುದನ್ನು ನೋಡುವಾಗ ಅಂದಿನ ಪೀಳಿಗೆಯವರಿಗಿದ್ದಷ್ಟೂ ತಿಳಿವಳಿಕೆಯು ಈಗಿನವರಿಗೆ ಇಲ್ಲವೇನೋ ಎಂದು ಅನ್ನಿಸಿಬಿಡುತ್ತದೆ.
“ಅತಿಯಾದರೆ ಅಮೃತವೂ ವಿಷವಾಗುತ್ತದೆ” ಎಂಬದು ಮತ್ತೊಂದು ತೀರ ಸರಳವಾದ ಗಾದೆಯಾಗಿದೆ. ಯಾವುದೂ ಅಗತ್ಯಕ್ಕಿಂತಲೂ ಹೆಚ್ಚಾದಾಗ ಅದು ನಮ್ಮನ್ನು ಕೆಡಿಸಿಬಿಡುತ್ತದೆ ಎಂಬುದು ಈ ಗಾದೆಯ ಸಾರಾಂಶವಾಗಿದೆ. ಅತಿಯಾಗುವುದು ಹಣವಾಗಿರಬಹುದು, ಅಧಿಕಾರವಾಗಿರಬಹುದು ಅಥವಾ ಕೀರ್ತಿಯೂ ಆಗಿರಬಹುದು. ಹಣವು ಹೆಚ್ಚಾದಾಗ ಮನಸ್ಸು ಇಲ್ಲದ ವಿಷಯಗಳಲ್ಲಿ, ಬೇಡದ ವಿಷಯಗಳಲ್ಲಿ ಆಸಕ್ತಿಯನ್ನು ತೋರಿಸುತ್ತದೆ. ಭೋಗಜೀವನಕ್ಕೆ ಕಾಲಿರಿಸಿದಾಗ ದೇಹದ ಮಾಡಲೇಬೇಕಾದ ಹಲವಾರು ಚಟುವಟಿಕೆಗಳು ನಿಂತುಹೋಗುತ್ತವೆ. ದೇಹ ಹಾಗೂ ಮನಸ್ಸಿನ ಕ್ರಿಯಾಶೀಲತೆಯು ಕುಂಠಿತಗೊಳ್ಳುತ್ತದೆ. ಆಗ, ದೇಹದೊಳಗೆ ನಮ್ಮ ಅರಿವಿಗೆ ಬಾರದಂತೆಯೇ ವಿಷವು ತುಂಬತೊಡಗುತ್ತದೆ. ಮಧುಮೇಹ, ರಕ್ತದೊತ್ತಡದಲ್ಲಿ ಏರುಪೇರು ಮುಂತಾದವು ಕಾಣಿಸಿಕೊಂಡು ಬದುಕು ಬರ್ಬರವಾಗುತ್ತದೆ.ಅಧಿಕಾರವು ಹೆಚ್ಚಾದಾಗ ಅಲ್ಲಿ ಸೌಜನ್ಯವು ಮರೆಯಾಗಿ ಅಹಂಕಾರವು ತುಂಬಿಕೊಳ್ಳುತ್ತದೆ. ಈ ಹಿಂದೆ ಪರಿಚಿತರೂ ಆತ್ಮೀಯರೂ ಆಗಿದ್ದವರು ಅಪರಿಚಿತರಾಗಿಬಿಡುತ್ತಾರೆ. ನಮ್ಮನ್ನು ಈ ಹಿಂದೆ ಎತ್ತಿ ಬೆಳೆಸಿದವರು ಕಾಣದಂತೆ ಕಣ್ಣಿಗೆ ಪೊರೆಯು ಬೆಳೆದುಬಿಡುತ್ತದೆ. ಇನ್ನು ಕೀರ್ತಿ ಎಂಬುದು ಹೆಚ್ಚಾದಾಗ, ತಲೆಯಲ್ಲಿ ಕೋಡು ಬೆಳೆಯುತ್ತದೆ,ತನ್ನಿಂದಲೇ ಈ ಸಮಾಜವು ನಡೆಯುತ್ತಿದೆ ಎಂಬ ಭ್ರಮೆಯೂ ಆವರಿಸುತ್ತದೆ. ಹೀಗೆ ಅತಿ ಸರಳವಾದ ಗಾದೆಯಲ್ಲಿ ಜೀವನದ ರಹಸ್ಯವನ್ನೂ ಹಿರಿಯರು ಹುದುಗಿಸಿ ಜನರಿಗೆ ತಲುಪಿಸಿದ್ದಾರೆ. ಆದರೆ. ಈಗಿನ ಪೀಳಿಗೆಯು ಇಂತಹ ಗಾದೆಗಳಿಗೆ ಮಹತ್ವವನ್ನು ನೀಡಿದೆಯೇ ಅಥವಾ ಅವಗಣಿಸಿದೆಯೇ ಎಂಬುದನ್ನು ಬರಲಿರುವ ಭವಿಷ್ಯವೇ ತಿಳಿಸಬೇಕಷ್ಟೆ. “ಆರು ಕೊಟ್ಟರೆ ಅತ್ತೆಯ ಕಡೆಗೆ, ಮೂರು ಕೊಟ್ಟರೆ ಸೊಸೆಯ ಕಡೆಗೆ” ಎನ್ನುವುದು ಜಾನಪದ ಬದುಕಿನಲ್ಲಿ ಬಹಳಷ್ಟು ಬಳಸಲಾಗಿರುವ ಗಾದೆಯಾಗಿದೆ. ಯಾರು ಹೆಚ್ಚು ಕೊಟ್ಟು ಓಲೈಕೆಗೆ ಇಳಿಯುತ್ತಾರೋ ಅಂತಹವರ ಕಡೆಗೆ ವಾಲುವವರಿಗಾಗಿ ಬಂದಿರುವ ಈ ಗಾದೆಯು ಎಲ್ಲ ಕಾಲಗಳಲ್ಲೂ ಎಲ್ಲ ಸಮಾಜದಲ್ಲೂ ಅನ್ವಯಗೊಳ್ಳುವುದಾಗಿದೆ. ಹಣದಾಸೆಗಾಗಿ ತಮ್ಮ ವ್ಯಕ್ತಿತ್ವವನ್ನು ಮಾರಿಕೊಳ್ಳುವ ಮತದಾರರಿಗಾಗಿ , ಅಧಿಕಾರದಾಸೆಗಾಗಿ ಪಕ್ಷಾಂತರಗೊಳ್ಳುವ ರಾಜಕಾರಣಿಗಳಿಗಾಗಿ ಈ ಗಾದೆಯನ್ನು ರಚಿಸಿದ್ದಾರೋ ಎಂಬಂತಿದೆ ಈ ಗಾದೆ. ಹೀಗೆ, ಜಾನಪದದ ಸಾಹಿತ್ಯವಾದ ಗಾದೆಗಳು ನಮ್ಮ ಬದುಕಿಗೆ ತೀರ ಹತ್ತಿರವಾಗಿದ್ದು, ಯಾವುದೇ ಕಬ್ಬಿಣದ ಕಡಲೆ ಎನ್ನುವ ಗ್ರಂಥಗಳನ್ನು ಓದಿ ಅರಗಿಸಿಕೊಳ್ಳುವುದಕ್ಕಿಂತ, ಇವನ್ನೇ ನಮ್ಮ ಬದುಕಿನಲ್ಲಿ ಅನುಷ್ಠಾನಕ್ಕಿಳಿಸಿಕೊಂಡರೆ ಬದುಕು ಹಗುರವಾದೀತು, ಆನಂದದಾಯಕವೂ ಆದೀತು. ಬಹುಷÀಃ ಬದುಕಿನ ಎಲ್ಲ ರಂಗಗಳಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ಈ ಗಾದೆಗಳಲ್ಲಿ ಅಂತಃಸತ್ವವಿದೆ, ಅಗೆದಷ್ಟೂ ಮೊಗೆದು ಹಲವಾರು ವಿಚಾರಗಳನ್ನು ಇದು ಹೊರಹಾಕುತ್ತದೆ. ಇಂತಹ ಗಾದೆಗಳ ಸಂಪತ್ತು ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವುದರಲ್ಲಿ ಎರಡು ಮಾತಿಲ್ಲ.
-ಕಿಗ್ಗಾಲು ಎಸ್ ಗಿರೀಶ್,
ಮೂರ್ನಾಡು