ಮಡಿಕೇರಿ, ಫೆ. 4: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕೊಡಗಿನ ಯುವಕನೋರ್ವ ಕಳೆದ ಶನಿವಾರ ರಾತ್ರಿಯಿಂದ ನಾಪತ್ತೆ ಯಾಗಿದ್ದು, ಎರಡು ದಿನಗಳ ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಅಲ್ಲಿನ ಚರಂಡಿಯೊಂದರಲ್ಲಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.ಬೈಕ್ ಸಹಿತವಾಗಿ ಅಲ್ಲಿನ ಸುಮಾರು 15 ರಿಂದ 20 ಅಡಿ ಆಳದ ಚರಂಡಿಯಲ್ಲಿ ಈತ ಪತ್ತೆಯಾಗಿದ್ದು, ಅವಘಡಕ್ಕೀಡಾಗಿರುವ ಶಂಕೆ ವ್ಯಕ್ತಗೊಂಡಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.ಜಿಲ್ಲೆಯ ಬೊಳ್ಳುಮಾಡುವಿನ ನಿವಾಸಿ ಕಾರ್ಯಪ್ಪ ಎಂಬವರ ಪುತ್ರ ಪೂಣಚ್ಚ (22) ಕನಕಪುರ ರಸ್ತೆಯಲ್ಲಿರುವ ನಂದಿ ಟೊಯೊಟೋ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಶನಿವಾರ ರಾತ್ರಿ 10 ಗಂಟೆಯ ಬಳಿಕ ಇವರು ಕಾಣೆಯಾಗಿದ್ದು, ಸುಳಿವು ಲಭ್ಯವಾಗಿರಲಿಲ್ಲ. ಭಾನುವಾರ ಬೆಳಿಗ್ಗೆ 9 ಗಂಟೆಯ ತನಕ ಮೊಬೈಲ್ ರಿಂಗಾಗುತ್ತಿದ್ದರೂ, ಪ್ರತಿಕ್ರಿಯಿಸುತ್ತಿರ ಲಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಿಕರು ಹುಡುಕಾಟ ನಡೆಸಿ ವ್ಯಾಟ್ಸಾಪ್ ಮೂಲಕವೂ ಸಂದೇಶ ರವಾನಿಸಿದ್ದು ತಲಗಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೀಗ ಇಂದು ಬೆಳಿಗ್ಗೆ ಕನಕಪುರ ರಸ್ತೆಯ (ರಿಂಗ್ ರಸ್ತೆ) ಸನಿಹ ಇವರ ಮನೆಗೆ ತೆರಳುವ ಹಾದಿಯಲ್ಲಿ ಸುಮಾರು 20 ಅಡಿ ಆಳದ ಚರಂಡಿಯಲ್ಲಿ ಪೂಣಚ್ಚ ಅವರ ಬೈಕ್ ಸಹಿತ ಬಿದ್ದಿರುವುದನ್ನು ಆಟೋ ಚಾಲಕರೊಬ್ಬರು ಗಮನಿಸಿದ್ದಾರೆ. ನಿತ್ರಾಣಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದ ಈತನನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದು ಸ್ವಯಂ ಅವಘಡಗೊಂಡು ನಡೆದ ಘಟನೆಯೋ ಅಥವಾ ಯಾವುದಾದರೂ ವಾಹನಡಿಕ್ಕಿಯಾಗಿ ಈ ಘಟನೆ ನಡೆದಿದೆಯೋ ಎಂಬದು ತಿಳಿದು ಬಂದಿಲ್ಲ. ತನಿಖೆ ಮುಂದು ವರಿದಿದ್ದು, ಯುವಕ ಪೂಣಚ್ಚ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.