ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಲ್ಲಿ ನಮ್ಮ ಸರ್ಕಾರಿ ಶಾಲೆಗಳೇನು ಹಿಂದೆ ಬಿದ್ದಿಲ್ಲವೆಂಬುದಕ್ಕೆ ಸೋಮವಾರಪೇಟೆ ಸಮೀಪದ ನೇರುಗಳಲೆ ಸರ್ಕಾರಿ ಪ್ರೌಢಶಾಲೆ ಒಂದು ಉದಾಹರಣೆಯಾಗಿದೆ. ನೇರುಗಳಲೆ ಶಾಲೆ ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯದ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ ಸುಸಜ್ಜಿತ ಗ್ರಂಥಾಲಯದ ಮೂಲಕ ಇತರ ಶಾಲೆಗಳಿಗೆ ಮಾದರಿಯಾಗಿದೆ. ನೇರುಗಳಲೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅತೀ ಹೆಚ್ಚು ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈಗಿನ ಕಾಲದಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನ ಕಾಣುವುದೇ ಬಹಳ ವಿರಳವಾಗಿದೆ. ಶಾಲೆಗಳಲ್ಲಿ ಐದಾರು ವರ್ಷಗಳ ಹಿಂದೆ ಗ್ರಂಥಾಲಯ ಶಿಕ್ಷಣ ಪ್ರತ್ಯೇಕವಾಗಿ ನೀಡುತ್ತಿದ್ದು, ಇದೀಗ ಇದು ಇಲ್ಲವಾಗಿದೆ. ಆದರೆ ನೇರುಗಳಲೆ ಸರ್ಕಾರಿ ಪ್ರೌಢ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ, ಹಾಗೂ ಶಿಕ್ಷಕರಿಗೆ ಬೇಕಾದ ಎಲ್ಲಾ ಭಾಷೆಯ ಪುಸ್ತಕಗಳು ಇಲ್ಲಿನ ಗ್ರಂಥಾಲಯದಲ್ಲಿದೆ. ಗ್ರಂಥಾಲಯದ ಗೋಡೆಗಳಿಗೆ ಭವ್ಯ ಭಾರತದ ಗತಕಾಲದ ಹಾಗೂ ವರ್ತಮಾನದ ಶ್ರೇಷ್ಠತೆಯನ್ನು ಬಿಂಬಿಸುವ ಇನ್ನೂರಕ್ಕಿಂತಲೂ ಹೆಚ್ಚಿನ ಅತ್ಯಾಕರ್ಷಕವಾದ ಚಾರ್ಟ್ಗಳನ್ನು ಜೋಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಪುಸ್ತಕಗಳು ಸುಲಭವಾಗಿ ದೊರೆಯುವಂತೆ ಕೆಟಲಾಗ್ ಮಾಡಿ ಜೋಡಿಸಲಾಗಿದೆ.
ಮಾದರಿ ಶಿಕ್ಷಕನ ಮತ್ತೊಂದು ಯಶಸ್ಸು: ನೇರುಗಳಲೆ ಸರ್ಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಇಬ್ರಾಹಿಂ ಅವರು ರಾಜ್ಯದಲ್ಲೇ ಯಾವುದೇ ಶಾಲೆಯಲ್ಲಿ ಇಲ್ಲದ ಆಧುನಿಕ ವಿಜ್ಞಾನ ಪ್ರಯೋಗಾಲಯವನ್ನು ನಿರ್ಮಿಸುವುದರ ಮೂಲಕ ಮಾದರಿಯಾಗಿದ್ದರು. ಇದೀಗ ಸುಸಜ್ಜಿತವಾದ ಗ್ರಂಥಾಲಯವನ್ನು ವಿನ್ಯಾಸಗೊಳಿಸಿ ಮತ್ತೊಮ್ಮೆ ಇತರ ಶಾಲೆಗಳ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ಅದ್ಭುತ ಕ್ರಿಯಾಶೀಲತೆಯನ್ನು ಹೊಂದಿರುವ ವಿಜ್ಞಾನ ಶಿಕ್ಷಕ ಇಬ್ರಾಹಿಂ ಅವರ ಸತತ ಪರಿಶ್ರಮದಿಂದ ಈ ಗ್ರಂಥಾಲಯ ರೂಪು ಗೊಂಡಿದೆ. ಕಳೆದ ಎರಡು ವರ್ಷಗಳ ಕಾಲ, ತನ್ನ ಬಿಡುವಿನ ಸಮಯವನ್ನು ಸದುಪಯೋಗ ಪಡಿಸಿಕೊಂಡು, ಇತರ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸಹಾಯದೊಂದಿಗೆ ಗ್ರಂಥಾಲಯವನ್ನು ಅತ್ಯಾಕರ್ಷಕವಾಗಿ ವಿನ್ಯಾಸಗೊಳಿಸಿ ದ್ದಾರೆ. ನೇರುಗಳಲೆ ಸರ್ಕಾರಿ ಪ್ರೌಢ ಶಾಲೆಯಲ್ಲಿನ ಮಾದರಿ ಗ್ರಂಥಾಲಯದಲ್ಲಿ ಸಮಾಜ ವಿಜ್ಞಾನ, ವಿಜ್ಞಾನ, ಗಣಿತ ,ಇಂಗ್ಲಿಷ್, ಕನ್ನಡ, ಹಿಂದಿ ಹಾಗೂ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದ ಹಲವಾರು ಚಾರ್ಟ್ಗಳನ್ನು ಗೋಡೆಗಳಿಗೆ ಜೋಡಿಸಲಾಗಿದೆ. ಜಿಲ್ಲೆಯ ಶಿಕ್ಷಣಾಧಿಕಾರಿಗಳು ನೇರುಗಳಲೆ ಶಾಲೆಯ ಗ್ರಂಥಾಲಯಕ್ಕೆ ಭೇಟಿ ನೀಡಿ ವಿಜ್ಞಾನ ಶಿಕ್ಷಕ ಇಬ್ರಾಹಿಂ ಹಾಗೂ ಶಾಲೆಯ ಶಿಕ್ಷಕರ ಈ ಸಾಧನೆಯನ್ನು ಶ್ಲಾಘಿಸಿದ್ದರು.
ಇದೇ ನೇರುಗಳಲೆ ಕನ್ನಡ ಶಿಕ್ಷಕ ರತ್ನಕುಮಾರ್ ಅವರ ವಿಶೇಷ ಆಸಕ್ತಿ ಮತ್ತು ಪ್ರಯತ್ನದಿಂದ ಶಾಲಾ ಗೋಡೆಗಳು ವರ್ಲಿ ಕಲೆಯ ಚಿತ್ತಾರದಿಂದ ಕಂಗೊಳಿಸುತ್ತಿದೆ. ಶಾಲೆಯ ಸುತ್ತಮುತ್ತಲಿನ ಪರಿಸರವು ಸುಂದರವಾಗಿದ್ದು, ಮುಂಭಾಗದಲ್ಲಿರುವ ಗಾರ್ಡನ್ ಆಕರ್ಷಕವಾಗಿದೆ. ನೇರುಗಳಲೆ ಸರ್ಕಾರಿ ಪ್ರೌಢ ಶಾಲೆಗೆ ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ಹಲವಾರು ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಒಂದುವರೆ ಲಕ್ಷ ರೂ ದಾನ ನೀಡಿದ ಅನಿಲ್ ಮೊಂತೆರೋ : ಬೆಂಗಳೂರಿನ ಪ್ರತಿಷ್ ಕಂಪನಿಗಳಲ್ಲಿ ಒಂದಾದ ಟೆಕ್ನೋ ಟ್ರೀ ಕಂಪನಿಯ ಉಪಾಧ್ಯಕ್ಷರಾದ ಅನಿಲ್ ಮೊಂತೆರೋ ರವರು ನೇರುಗಳಲೆ ಸರ್ಕಾರಿ ಪ್ರೌಢ ಶಾಲೆಯಲ್ಲಿನ ವಿಜ್ಞಾನ ಪ್ರಯೋಗಾಲಯ, ಹಾಗೂ ಗ್ರಂಥಾಲಯಕ್ಕೆ 1.50 ಲಕ್ಷ ರೂ ದಾನ ನೀಡುವುದರ ಮೂಲಕ ನೇರುಗಳಲೆ ಶಾಲೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದಾರೆ. ಶಿಕ್ಷಕ ಇಬ್ರಾಹಿಂ ಅವರು ದಾನಿಗಳ ಸಹಾಯ ಪಡೆದು ತಾವೇ 04 ಪುಸ್ತಕಗಳನ್ನು ಬರೆದು, ನೇರುಗಳಲೆ ಗ್ರಂಥಾಲಯದಲ್ಲಿ ಗಣ್ಯರಿಂದ ಬಿಡುಗಡೆ ಮಾಡಿದ್ದರು. ಸ್ವಾಮಿ ವಿವೇಕಾನಂದ, ಎ.ಪಿ.ಜೆ ಅಬ್ದುಲ್ ಕಲಾಂ, ಶ್ರೀ ಶಿವಕುಮಾರ್ ಸ್ವಾಮೀಜಿ ಹಾಗೂ ವಿಜ್ಞಾನ ಪ್ರಯೋಗ ಇವೇ ಇವರ ಕೃತಿಗಳು.
ನಮ್ಮ ಶಾಲೆಯು ಜಿಲ್ಲೆಯಲ್ಲೇ ಒಂದು ಮಾದರಿ ಶಾಲೆಯಾಗಿ ಬೆಳೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇದರ ಹಿಂದೆ ವಿಜ್ಞಾನ ಶಿಕ್ಷಕರೊಂದಿಗೆ ಇತರ ಎಲ್ಲಾ ಶಿಕ್ಷಕರೂ ಶ್ರಮಿಸಿದ್ದಾರೆ. ಎಸ್ ಡಿ.ಎಂ.ಸಿ ಯವರೂ ಸಾಥ್ ನೀಡಿದ್ದಾರೆ, ಎಂದು ನೇರುಗಳಲೆ ಸರ್ಕಾರಿ ಪ್ರೌಢ ಶಾಲೆ ಪ್ರಭಾರ ಮುಖ್ಯೋಪಾಧ್ಯಾಯ ಹೆಚ್. ಕೆ. ಉಮೇಶ್ ತಿಳಿಸಿದ್ದಾರೆ. ಶಾಲೆಯ ಎಸ್.ಡಿ.ಎಂ.ಸಿ ಊರಿನ ಸಮಸ್ತ ನಾಗರಿಕರು, ಮುಖ್ಯ ಶಿಕ್ಷಕರು, ಶಾಲೆಯ ಎಲ್ಲಾ ಶಿಕ್ಷಕ ಮಿತ್ರರ ನಿರಂತರ ಪ್ರೋತ್ಸಾಹ ದಿಂದಾಗಿ, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯವನ್ನು ಮಾದರಿಯಾಗಿ ವಿನ್ಯಾಸ ಗೊಳಿಸಲು ಸಾಧ್ಯವಾಯಿತು ಎಂದು ಶಿಕ್ಷಕ ಇಬ್ರಾಹಿಂ ಅಭಿಪ್ರಾಯಪಟ್ಟರು.
-ಕೆ. ಎಂ. ಇಸ್ಮಾಯಿಲ್ ಕಂಡಕರೆ