ಮಡಿಕೇರಿ, ಫೆ. 4: ವೀರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದ ಸರಕಾರಿ ಜಾಗದಲ್ಲಿ ದಲಿತರು, ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ಆದಿವಾಸಿಗಳು, ಹಿಂದುಳಿದ ವರ್ಗದವರು ನಿವೇಶನದ ಹಕ್ಕುಪತ್ರ ಮತ್ತು ಮೂಲಭೂತ ಸೌಲಭ್ಯಕ್ಕಾಗಿ ಒತ್ತಾಯಿಸಿ ಕಳೆದ 28 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಇವರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಅರುಂಧತಿಯರ್ ಮಹಾಸಭಾದ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.

ಈ ಸಂದರ್ಭ ಮಾತನಾಡಿದ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಕೆ. ಪಳನಿ ಪ್ರಕಾಶ್, ವಸತಿ ರಹಿತರಾಗಿರುವ ಸುಮಾರು 70 ಕುಟುಂಬಗಳು ಕಳೆದ 25 ವರ್ಷಗಳಿಂದ ಲೈನ್ ಮನೆ ಸೇರಿದಂತೆ ಇತರೆಡೆ ಅತಂತ್ರ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಇವರುಗಳ ಜೀವನಕ್ಕೆ ಭದ್ರತೆ ಇಲ್ಲದಾಗಿದ್ದು, ಕನಿಷ್ಟ ನಿವೇಶನ ವನ್ನಾದರು ಸರ್ಕಾರ ಮಂಜೂರು ಮಾಡಬೇಕಾಗಿದೆ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಎ. ಮಹದೇವ್, ತಾ.ಪಂ. ಮಾಜಿ ಸದಸ್ಯ ಹೆಚ್.ವಿ. ರಾಮ್‍ದಾಸ್, ಪ್ರಮುಖರಾದ ಹೆಚ್.ಆರ್. ತಮ್ಮಯ್ಯ, ಹೆಚ್.ಕೆ. ಮಣಿ, ಹೆಚ್. ರಾಜ, ಹೆಚ್.ಪಿ. ಧರ್ಮ, ಟಿ.ಪಿ. ಸೌಮ್ಯ, ಹೆಚ್. ಸುಜಾತ, ಹೆಚ್.ಕೆ. ಚೆನ್ನಮ್ಮ ಹಾಗೂ ಮಹಾಸಭಾದ ಪದಾಧಿಕಾರಿಗಳು, ಸದಸ್ಯರು ಜಿಲ್ಲಾಧಿಕಾರಿಗಳನ್ನು ಭೇಟಿಯಾದರು.