ಮಡಿಕೇರಿ, ಫೆ. 4: ಪಡಿತರ ವ್ಯವಸ್ಥೆಯಲ್ಲಿ ಕಂಡು ಬಂದಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ ಜಿಲ್ಲಾಧಿಕಾರಿಗಳ ಕಚೇರಿ ಎದುರು ಇತ್ತೀಚೆಗೆ ಪ್ರತಿಭಟನೆ ನಡೆಸಿತು.

ಈ ಸಂದರ್ಭ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಲಾಯಿತು.

ಇ-ಕೆವೈಸಿ ಕಾರ್ಯಕ್ರಮವನ್ನು ಪಡಿತರ ಅಂಗಡಿಗಳಲ್ಲಿಯೇ ನಡೆಸಬೇಕು, ಮೊದಲು ಸರ್ವರ್ ವ್ಯವಸ್ಥೆಯನ್ನು ಸರಿಪಡಿಸಿ ಅನಂತರ ಕಾರ್ಯಕ್ರಮ ನಡೆಸಬೇಕು. ಗ್ರಾಹಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಬಳಲುವ ಸ್ಥಿತಿ ಸೃಷ್ಟಿಸಬಾರದು. ಇಡೀ ವ್ಯವಸ್ಥೆಯನ್ನು ಸರಳೀಕರಿಸಿ ಬೇಗ ಬೇಗನೇ ಕಾರ್ಯಕ್ರಮ ಮುಗಿಸಿ ಗ್ರಾಹಕರು ಹೋಗಲು ಸಾಧ್ಯವಾಗ ಬೇಕು. ಸರಕಾರ ಕೊಡುವ ಎಲ್ಲಾ ಸರಕುಗಳು ಎಲ್ಲಾ ಅಂಗಡಿಗಳಲ್ಲೂ ಏಕರೂಪದಲ್ಲಿ ಸಿಂಗುವಂತಾಗಬೇಕು. ಘೋಷಿತ ದರಕ್ಕಿಂತ ಹೆಚ್ಚು ದರ ಸಂಗ್ರಹಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.

ಬೆರಳಚ್ಚು ಮುದ್ರೆಯನ್ನು ಪಡೆಯಲು ವ್ಯವಸ್ಥೆಯನ್ನು ಸರಳೀಕರಿಸಬೇಕು. ಕೊಡಗಿಗಾಗಿ ಒಂದು ಸರ್ವರ್ ಅಳವಡಿಸಬೇಕು. ಹೀಗೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಲಾಗಿದೆ.