ಸೋಮವಾರಪೇಟೆ, ಫೆ. 3: ಕಳೆದ ನಾಲ್ಕೈದು ವರ್ಷಗಳಿಂದ ಅಕಾಲಿಕ ವಾಗಿ ಸುರಿಯುತ್ತಿರುವ ಮಳೆಯಿಂದ ಫಸಲು ನಷ್ಟವಾಗಿ ಕಾಫಿ ಬೆಳೆಗಾರರು ಸಂಕಷ್ಟದಲ್ಲಿ ರುವಾಗಲೆ ಸೆಸ್ಕ್ ಇಲಾಖೆಯಿಂದ ಮಾನಸಿಕ ಕಿರುಕುಳ ಪ್ರಾರಂಭವಾಗಿದೆ ಎಂದು ರೈತ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಲಿಂಗೇರಿ ರಾಜೇಶ್ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರು ವಿದ್ಯುತ್ ಬಿಲ್ ಪಾವತಿಸುತ್ತಿಲ್ಲ ಎಂಬ ಕಾರಣವೊಡ್ಡಿ, ಕಾಫಿ ಬೆಳೆಗಾರರು ಪಂಪ್‍ಸೆಟ್‍ಗಳಿಗೆ ಪಡೆದಿರುವ ವಿದ್ಯುತ್ ಸಂಪರ್ಕವನ್ನು ಕಡಿತ ಗೊಳಿಸುವ ಭಯವನ್ನು ಹುಟ್ಟಿಸುತ್ತಿದ್ದಾರೆ. ಈ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸಿದರೆ ಕಾಫಿ ಬೆಳೆಗಾರರು ವಿಷ ಕುಡಿಯ ಬೇಕಾಗುತ್ತದೆ ಎಂದು ಅಸಹಾಯಕತೆ ತೋಡಿಕೊಂಡರು.

ಕಾಫಿ ಬೆಳೆಗಾರರರಿಗೆ 10 ಹೆಚ್.ಪಿ.ವರೆಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಸರ್ಕಾರದಿಂದ ಯಾವದೇ ಆದೇಶ ಬಂದಿಲ್ಲ ಎಂದು ಸೆಸ್ಕ್ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಣ್ಣ ಅವರು ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಒದಗಿಸುವ ಭರವಸೆಯನ್ನು ಈ ಹಿಂದೆಯೇ ನೀಡಿದ್ದಾರೆ. ಭರವಸೆ ಕೂಡಲೆ ಈಡೇರಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಎಲ್ಲಾ ರೈತರಿಗೆ 50 ಸಾವಿರ ರೂ. ಸಾಲ ಮನ್ನಾ ಮಾಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರದಿಂದ 1 ಲಕ್ಷ ರೂ.ಗಳ ಸಾಲಮನ್ನಾ ಆಗಿದೆ. ಆದರೆ ಕೆಲ ಕಾರಣಗಳಿಂದ ಶೇ.20ರಷ್ಟು ಬಡ ರೈತರ ಸಾಲ ಮನ್ನಾ ಆಗಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಬಡರೈತರ ಸಾಲಮನ್ನಾಕ್ಕೆ ಹಣ ಬಿಡುಗಡೆಗೊಳಿಸಬೇಕು ಎಂದು ಐಗೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಡಿ.ಎಸ್.ಚಂಗಪ್ಪ ಮನವಿ ಮಾಡಿದರು.

ರಾಸಾಯನಿಕ ಗೊಬ್ಬರ ಮೇಲಿನ ಸಬ್ಸಿಡಿಯನ್ನು ತೆಗೆದರೆ ಕಾಫಿ ಉದ್ಯಮ ನಾಶವಾಗಲಿದೆ. ಯಾವುದೇ ಸರ್ಕಾರಗಳು ರೈತವಿರೋಧಿ ನೀತಿಯನ್ನು ಅನುಸರಿಸಬಾರದು ಎಂದು ಚೌಡ್ಲು ಸಹಕಾರ ಸಂಘದ ನಿರ್ದೇಶಕ ವೈ.ಎಂ.ನಾಗರಾಜು ಹೇಳಿದರು.

ಕಾಫಿ ಬೆಳೆಗಾರರಿಗೂ ಎಲ್‍ಟಿ 4(ಎ) ಯಡಿ ವಿದ್ಯುತ್ ನೀಡಬೇಕು. ಕಾಫಿ ಕೃಷಿಯಿಂದ ಜಿಲ್ಲೆಯ ಜನರ ಜೀವನ ನಡೆಯಬೇಕು. ಉಚಿತ ವಿದ್ಯುತ್ ನೀಡುವ ಬಗ್ಗೆ ಉಸ್ತುವಾರಿ ಸಚಿವರು ಹೇಳಿದ್ದಾರೆ. ಕೂಡಲೆ ಜಿಲ್ಲೆಯ ಇಬ್ಬರು ಶಾಸಕರುಗಳು ಹೋರಾಟ ಮಾಡಿಯಾದರೂ ಸರ್ಕಾರದಿಂದ ಉಚಿತ ವಿದ್ಯುತ್ ಕೊಡಿಸಬೇಕೆಂದು ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಆಗ್ರಹಿಸಿದರು. ಗೋಷ್ಠಿಯಲ್ಲಿ ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ. ಮುದ್ದಪ್ಪ ಉಪಸ್ಥಿತರಿದ್ದರು.