ವೀರಾಜಪೇಟೆ, ಫೆ. 8: ಇಂದಿನ ಯುವ ಜನತೆಯಲ್ಲಿರುವ ಕೌಶಲ್ಯವನ್ನು ಹೊರ ತರುವ ಮೂಲಕ ಅವರ ಮುಂದಿನ ಭವಿಷ್ಯವನ್ನು ರೂಪಿಸುವುದರೊಂದಿಗೆ ದೇಶವನ್ನು ಸದೃಢಗೊಳಿಸುವ ಪ್ರಯತ್ನವಾಗಬೇಕು. ಯುವ ಜನತೆ ಅನಾವಶ್ಯಕವಾಗಿ ಮುಂದಿನ ಜೀವನದ ಬಗ್ಗೆ ಚಿಂತಿಸಿ ದುಶ್ಚಟ ಹಾಗೂ ಆತ್ಮಹತ್ಯೆಯಂತಹ ಹಾದಿ ಹಿಡಿಯದೆ ಸವಾಲುಗಳನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸಾ ಕೋಶ, ಉದ್ಯೋಗ ಮಾಹಿತಿ ಹಾಗೂ ಯುವ ಸಬಲೀಕರಣ ಕೇಂದ್ರ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಮಡಿಕೇರಿಯ ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಇವರ ಸಹಯೋಗದಲ್ಲಿ ಯುವ ಕೌಶಲ್ಯ-ಮೃದು ಕೌಶಲ್ಯ ತರಬೇತಿ ಮತ್ತು ಮೌಲ್ಯ ಮಾಪನ ಕುರಿತ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿದ ಬೋಪಯ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ವ್ಯವಸ್ಥೆಯಲ್ಲಿ ದೇಶ ಕಟ್ಟುವ ಜವಾಬ್ದಾರಿ ಯುವ ಶಕ್ತಿಯ ಮೇಲಿದೆ. ಅದಕ್ಕಾಗಿ ಯುವಕರು ಪದವಿಯ ಬಳಿಕ ಮುಂದೇನು ಎಂದು ಚಿಂತಿಸುವ ಕಾಲ ಈಗಿಲ್ಲ. ಇದಕ್ಕಾಗಿ ಕೇಂದ್ರ ಸರಕಾರ ಕೌಶಲ್ಯ ತರಬೇತಿ ಕೇಂದ್ರವನ್ನು ತೆರೆದಿದೆ. ವಿದ್ಯಾರ್ಥಿಗಳು ತಮ್ಮ ಮುಂದಿನ ಸವಾಲನ್ನು ಎದುರಿಸಲು ಇದನ್ನು ಬಳಸಿಕೊಳ್ಳಬೇಕು. ಪ್ರತಿಭೆ ಹುಟ್ಟಿನಿಂದಲೆ ಬರುತ್ತದೆ. ಅದಕ್ಕೆ ಅವಕಾಶ ನೀಡಲು ಇಂತಹ ಕಾರ್ಯಕ್ರಮ ಅಗತ್ಯ. ನಿರುದ್ಯೋಗದ ಯುವಕರಿಗಾಗಿ ಪ್ರಧಾನಿ ಅಗತ್ಯ ಹಾಗೂ ಆಯ್ದ ಸ್ಥಳಗಳಲ್ಲಿ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಇದನ್ನು ಯುವಕರು ಬಳಸಿಕೊಂಡು ಹಿರಿಯರ ಆಶಯದಂತೆ ನಮ್ಮ ದೇಶ, ಇತರ ದೇಶಕ್ಕೆ ಮಾರ್ಗದರ್ಶಕ ದೇಶವಾಗುವಂತೆ ಮಾಡಬೇಕು ಎಂದು ಬೋಪಯ್ಯ ಹೇಳಿದರು. ಸಮಾರಂಭದಲ್ಲಿ ಪೊನ್ನಂಪೇಟೆ ಐಟಿಐ ಕಾಲೇಜಿನ ಪ್ರಾಂಶುಪಾಲ ಸಿ.ಜಿ. ಚೆರಿಯನ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರಾರಂಭದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಜಗನ್ನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉಪನ್ಯಾಸಕ ಮಂಜುನಾಥ್, ನಾಗರಾಜು ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಹೊರ ತಂದಿರುವ ಕೌಶಲ್ಯ ಮಾಹಿತಿ ಕೈಪಿಡಿಯನ್ನು ಶಾಸಕ ಬೋಪಯ್ಯ ಬಿಡುಗಡೆ ಮಾಡಿದರು.