ಮಡಿಕೇರಿ, ಫೆ. 8: ಜಿಲ್ಲೆಯ ಪ್ರಾಥಮಿಕ, ಸಮುದಾಯ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆ ಗಳಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಸಮರ್ಪಕ ವಾಗಿ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.

ಆಸ್ಪತ್ರೆಗಳಲ್ಲಿನ ವೈದ್ಯಕೀಯ ತ್ಯಾಜ್ಯವನ್ನು ಸಕಾಲದಲ್ಲಿ ವಿಲೇವಾರಿ ಮಾಡಬೇಕು. ಯಾವುದೇ ಕಾರಣಕ್ಕೂ ಆಸ್ಪತ್ರೆಯಲ್ಲಿ ತ್ಯಾಜ್ಯ ಇಟ್ಟುಕೊಳ್ಳ ಬಾರದು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಉಪ ಪರಿಸರ ಅಧಿಕಾರಿ ಡಾ. ಎಂ.ಕೆ. ಸುಧಾ ಮಾತನಾಡಿ, ವೈದ್ಯಕೀಯ ತ್ಯಾಜ್ಯವನ್ನು ಪರಿಸರ ನಿಯಮ ಪ್ರಕಾರ 48 ಗಂಟೆಯೊಳಗೆ ವಿಲೇವಾರಿ ಮಾಡಬೇಕಿದೆ. ಆದರೆ ವಾರದಲ್ಲಿ ಎರಡು ದಿನ ಮಾತ್ರ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.

ಸಕಾಲದಲ್ಲಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡದಿದ್ದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಆದ್ದರಿಂದ ಕಾಲ ಕಾಲಕ್ಕೆ ಆಸ್ಪತ್ರೆಯ ತ್ಯಾಜ್ಯ ವಿಲೇವಾರಿ ಮಾಡುವಂತಾಗಬೇಕು ಎಂದು ಉಪ ಪರಿಸರ ಅಧಿಕಾರಿ ಡಾ.ಎಂ.ಕೆ.ಸುಧಾ ಅವರು ಸಲಹೆ ಮಾಡಿದರು. ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ತಿಳಿಸಿದರು.

ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಆನಂದ್ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ 2018 ಜನವರಿ ಯಿಂದ ಡಿಸೆಂಬರ್ ಅಂತ್ಯದವರೆಗೆ 302 ಮಂದಿ ಕ್ಷಯ ರೋಗಿಗಳು ದಾಖಲಾಗಿದ್ದು, ಇವರಲ್ಲಿ 255 ಮಂದಿ ಗುಣಮುಖ ರಾಗಿದ್ದಾರೆ ಎಂದು ಅವರು ತಿಳಿಸಿದರು.

ತಾಯಿ ಮತ್ತು ಶಿಶು ಮರಣ ತಡೆಯುವ ನಿಟ್ಟಿನಲ್ಲಿ ಹಾಡಿಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸೂಚಿಸಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನ ಇಂದ್ರಧನುಷ್ ಕಾರ್ಯಕ್ರಮ ಮತ್ತಿತರ ಕಾರ್ಯ ಕ್ರಮ ಸಂಬಂಧ ಮಾಹಿತಿ ಪಡೆದರು.

ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿ ಡಾ.ಶಿವಕುಮಾರ್, ಆರ್‍ಸಿಹೆಚ್ ಅಧಿಕಾರಿ ಡಾ. ಗೋಪಿನಾಥ್, ವೈದ್ಯಕೀಯ ಕಾಲೇಜಿನ ಅಧೀಕ್ಷಕ ಡಾ. ಲೋಕೇಶ್, ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಡಾ. ಶ್ಯಾಮ್, ಡಾ. ಕೃಷ್ಣಾನಂದ, ಪೌರಾಯುಕ್ತ ಎಂ.ಎಲ್. ರಮೇಶ್ ಇತರರು ಇದ್ದರು.