ಸೋಮವಾರಪೇಟೆ,ಫೆ.8: ತಾಲೂಕು ಒಕ್ಕಲಿಗರ ಯುವ ವೇದಿಕೆ ಮತ್ತು ರಾಜ್ಯ ಹಾಗೂ ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ‘ಕಬಡ್ಡಿ ಹಬ್ಬ’ಕ್ಕೆ ಅದ್ಧೂರಿ ಚಾಲನೆ ದೊರೆತಿದ್ದು, ತಾ. 9ರಂದು (ಇಂದು) ರಾಜ್ಯದ ಹೆಸರಾಂತ ಆಟಗಾರರನ್ನು ಒಳಗೊಂಡ ತಂಡಗಳ ನಡುವೆ ಕಬಡ್ಡಿ ಫೈನಲ್ ಸಂಭ್ರಮ ನಡೆಯಲಿದೆ.

ಸ್ಥಳೀಯ ಆಟಗಾರರಿಗೆ ಸ್ಪರ್ಧೆ: ರಾಜ್ಯಮಟ್ಟದ ಆಟಗಾರರೊಂದಿಗೆ ಸ್ಥಳೀಯ ಕಬಡ್ಡಿ ಕ್ರೀಡಾ ಪಟುಗಳಿಗೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ಯುವ ವೇದಿಕೆಯ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಸ್ಪರ್ಧೆಯನ್ನು ಇಂದು ಆಯೋಜಿಸಲಾಗಿತ್ತು.

ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 10 ತಂಡಗಳು ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿ ದ್ದವು. ಇದೇ ಪ್ರಥಮ ಬಾರಿಗೆ ಮ್ಯಾಟ್‍ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಜೆ.ಬಿ.ಎಸ್.ಸಿ. ಕುಶಾಲನಗರ ಮತ್ತು ಟಿ.ಡಿ.ಎಫ್.ಸಿ. ತೊರೆನೂರು ತಂಡಗಳು ಫೈನಲ್ ಪ್ರವೇಶಿಸಿದವು.

ಇದಕ್ಕೂ ಮುನ್ನ ನಡೆದ ಪ್ರಥಮ ಸೆಮಿಫೈನಲ್‍ನಲ್ಲಿ ಟಿಡಿಎಫ್‍ಸಿ ತಂಡವು ಒಕ್ಕಲಿಗರ ಯುವ ವೇದಿಕೆ ಬಿ. ತಂಡವನ್ನು 14-6 ಅಂಕಗಳ ಅಂತರದಿಂದ ಸೋಲಿಸಿತು. 2ನೇ ಸೆಮಿಫೈನಲ್‍ನಲ್ಲಿ ಒಕ್ಕಲಿಗರ ಯುವ ವೇದಿಕೆ ಎ. ತಂಡವು ಜೆಬಿಎಸ್‍ಸಿ ತಂಡದ ವಿರುದ್ಧ 24-12 ಅಂಕ ಗಳೊಂದಿಗೆ ಪರಾಭವಗೊಂಡಿತು.

ಕಬಡ್ಡಿ ಪಂದ್ಯಾಟದ ತೀರ್ಪುಗಾರ ರಾಗಿ ಕೊಡಗು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‍ನ ತೀರ್ಪುಗಾರರಾದ ಗೌಡಳ್ಳಿ ಪ್ರವೀಣ್, ತಾಕೇರಿ ಅಮೃತ್, ಬಳಗುಂದ ರಮೇಶ್, ಶನಿವಾರಸಂತೆ ಆದರ್ಶ್, ಶಿರಂಗಾಲ ಮಧು, ತೊರೆನೂರು ನಿಶಾಂತ್, ಜಿ.ಎಸ್.ಶೈಲ, ಬಿ.ಜಿ. ರಾಗಿಣಿ ಅವರುಗಳು ಕಾರ್ಯನಿರ್ವಹಿಸಿದರು.

ಕಬಡ್ಡಿಗೆ ಚಾಲನೆ: 3ನೇ ವರ್ಷದ ಕಬಡ್ಡಿ ಹಬ್ಬಕ್ಕೆ ಸಂಜೆ ಅತಿಥಿಗಳು ಚಾಲನೆ ನೀಡಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಕಬಡ್ಡಿ ಕ್ರೀಡೆಯು ಅಸ್ಪøಶ್ಯತೆಯ ವಿರುದ್ಧದ ಪ್ರಬಲ ವೇದಿಕೆಯಾಗಿದೆ. ಸ್ವಾತಂತ್ರ್ಯಾ ಪೂರ್ವದಲ್ಲಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಪರಸ್ಪರ ಒಗ್ಗಟ್ಟು, ಸಾಮರಸ್ಯ ಮೂಡಿಸಲು ಕಬಡ್ಡಿಯನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲಾಗಿತ್ತು. ಕಬಡ್ಡಿಯಿಂದ ಪರಸ್ಪರ ಪ್ರೀತಿ, ವಿಶ್ವಾಸ ಮೂಡುತ್ತದೆ ಎಂದರು.

ಪಂದ್ಯಾಟವನ್ನು ಉದ್ಘಾಟಿಸಿದ ಎಂಬೆಸ್ಸಿ ಗ್ರೂಪ್‍ನ ಉಪಾಧ್ಯಕ್ಷ ಹರಪಳ್ಳಿ ರವೀಂದ್ರ ಮಾತನಾಡಿ, ಕಠಿಣ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ. ಕ್ರೀಡೆಯೂ ಹೀಗೆಯೇ ಎಂದು ವ್ಯಾಖ್ಯಾನಿಸಿ ದರಲ್ಲದೇ, ಪ್ರತಿಯೋರ್ವರೂ ಜೀವನದಲ್ಲಿ ಪರಿಶ್ರಮದಿಂದ ಮುಂದೆ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸೇರಿದಂತೆ ಇತರರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್ ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಸ್ಟಾರ್ ಆಟಗಾರರನ್ನು ಆಹ್ವಾನಿಸಿ ಸ್ಥಳೀಯವಾಗಿ ಕಬಡ್ಡಿ ಕ್ರೀಡೆಯ ಬಗ್ಗೆ ಒಲವು ಮೂಡಿಸುವ ಯತ್ನ ನಡೆಯುತ್ತಿದೆ. ಇದರೊಂದಿಗೆ ಸ್ಥಳೀಯ ಕಬಡ್ಡಿ ಆಟಗಾರರಿಗೂ ಸ್ಪರ್ಧೆ ಆಯೋಜಿಸುವ ಮೂಲಕ ಪ್ರೋತ್ಸಾಹ ತುಂಬಲಾಗುತ್ತಿದೆ. ಯುವ ವೇದಿಕೆಯಿಂದ ಈಗಾಗಲೇ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಿ ಸಮಾಜದಲ್ಲಿ ಕ್ರೀಡಾ ಸ್ಪೂರ್ತಿ ತುಂಬುವ ಕೆಲಸ ನಡೆಯುತ್ತಿದ್ದು, ಇದರೊಂದಿಗೆ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ತುಂಬಲು ಕಳೆದ 3 ವರ್ಷಗಳಿಂದ ಪಂದ್ಯಾಟ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಬೆಂಗಳೂರಿನ ವೈದ್ಯರಾದ ಡಾ. ಮಂಜುನಾಥ್, ಉದ್ಯಮಿ ಹಾಗೂ ಯುವ ವೇದಿಕೆಯ ನಿರ್ದೇಶಕ ಅರುಣ್ ಕಾಳಪ್ಪ, ಒಕ್ಕಲಿಗರ ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಗಿರೀಶ್ ಮಲ್ಲಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯೆ ತಂಗಮ್ಮ, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ರಮ್ಯ ಕರುಣಾಕರ್, ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ, ಚೌಡ್ಲು ಗ್ರಾ.ಪಂ. ಸದಸ್ಯ ನತೀಶ್ ಮಂದಣ್ಣ, ನಗರ ಗೌಡ ಒಕ್ಕೂಟದ ಅಧ್ಯಕ್ಷ ಪ್ರಕಾಶ್, ಚೌಡ್ಲು ವಿಎಸ್‍ಎಸ್‍ಎನ್ ಅಧ್ಯಕ್ಷ ಕೆ.ಟಿ. ಪರಮೇಶ್, ಒಕ್ಕಲಿಗರ ಸಂಘದ ಯಶ್ವಂತ್ ಬೆಳ್ಳಿಗೌಡ, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಉಪಾಧ್ಯಕ್ಷ ಮಂಜೂರು ತಮ್ಮಣ್ಣಿ, ಒಕ್ಕಲಿಗರ ಸಂಘದ ಕಾರ್ಯದರ್ಶಿ ಗಣಪತಿ, ಪಿಡಬ್ಲ್ಯೂಡಿ ಎಇಇ ಮೋಹನ್‍ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಭರ್ಜರಿ ಬಹುಮಾನ: ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾಟಕ್ಕೆ ತಾ. 8ರಂದು ಸಂಜೆ ಚಾಲನೆ ನೀಡಲಾಗಿದ್ದು, ತಾ. 9ರಂದು (ಇಂದು) ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ 1 ಲಕ್ಷ ರೂ., ದ್ವಿತೀಯ ಬಹುಮಾನ 60 ಸಾವಿರ ರೂ., ತೃತೀಯ ಬಹುಮಾನ 30 ಸಾವಿರ, ಚತುರ್ಥ ಬಹುಮಾನವಾಗಿ 30 ಸಾವಿರ ರೂ. ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವದು.

- ವಿಜಯ್ ಹಾನಗಲ್