ಅಗಸ್ತ್ಯರ ಚರಿತ್ರೆ ಮತ್ತೆ ಮುಂದುವರಿಯುತ್ತದೆ. ಅಗಸ್ತ್ಯರು ಲೋಕಕಲ್ಯಾಣ ಕಾರ್ಯಕ್ರಮದಲ್ಲಿ ತಮ್ಮ ಧರ್ಮಪತ್ನಿ ಲೋಪಾಮುದ್ರೆ ಯನ್ನು ತೊಡಗಿಸಿ ಕೊಳ್ಳುತ್ತಿದ್ದರು. ಅವರು ಧರ್ಮಸ್ಥಾಪನೆ ಸಂದರ್ಭ ಲೋಪಾಮುದ್ರೆ ಸಹಿತರಾಗಿಯೇ ಯಾತ್ರೆ ಕೈಗೊಳ್ಳುತಿದ್ದರು. ಅದೇ ರೀತಿ ವಿಂಧ್ಯ ಪರ್ವತನ ನಿಯಂತ್ರಣದ ಸಂದರ್ಭವೂ ಅವರು ಪತ್ನಿ ಲೋಪಾಮುದ್ರೆಯೊಂದಿಗೇ ತೆರಳುವದು ಮಹಾಭಾರತ ಕತೆಯಲ್ಲಿ ಉಕ್ತವಾದ ವಿಚಾರ. ಅಗಸ್ತ್ಯರ ಮಹಿಮೆಯನ್ನು ಸಾರುತ್ತ ಲೋಮಶ ಮಹರ್ಷಿಗಳು ಪಾಂಡವರಿಗೆ ಅಗಸ್ತ್ಯರಿಂದ ವಿಂಧ್ಯ ಪರ್ವತ ನಿಯಂತ್ರಣದ ಚರಿತ್ರೆಯನ್ನು ವರ್ಣಿಸುತ್ತಾರೆ.
“ಯುಧಿಷ್ಠಿರ, ಸೂರ್ಯನು ಉದಯಿಸಿದ ನಂತರದಲ್ಲಿ ಭೂಮಿಯು ಸುತ್ತುವಾಗ ಸೂರ್ಯನೂ ತನ್ನ ಪರಿಧಿಯಲ್ಲಿ ಸುತ್ತುವಾಗ ಮೇರು ಪರ್ವತಕ್ಕೆ ಪ್ರದಕ್ಷ್ಷಿಣೆ ಬರುತ್ತಾನೆ. ಸೂರ್ಯನು ಮೇರು ಪರ್ವತಕ್ಕೆ ಅಪಾರ ಗೌರವ ನೀಡುತ್ತಾನೆ. ಆತನ ದಿನಚರಿಯಲ್ಲಿ ಇದೂ ಒಂದಾಗಿಬಿಟ್ಟಿದೆ. ಮಹಾತ್ಮನಾದ ಸೂರ್ಯನೇ ಮೇರು ಪರ್ವತನಿಗೆ ಕೊಡುವ ಗೌರವ, ಮಾನ್ಯತೆಗಳನ್ನು ವಿಂಧ್ಯ ಪರ್ವತನಿಗೆ ನೋಡಿ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ್ಲ. ಅವನಿಗೆ ಖೇದವಾಗುತ್ತಿತ್ತು. ಒಮ್ಮೆ ಸೂರ್ಯನನ್ನೇ ವಿಂಧ್ಯನು ಕೇಳಿದ;”ನೀನು ಮೇರು ಪರ್ವತ ವನ್ನು ಪ್ರದಕ್ಷಿಣೆ ಮಾಡಿ ಗೌರವಿಸುವಂತೆ ನನ್ನನ್ನೂ ಪ್ರದಕ್ಷಿಣೆ ಮಾಡಿ ಗೌರವಿಸು” ಎಂದು ಕೋರುತ್ತಾನೆ. ಇದಕ್ಕೆ ಸೂರ್ಯನ ಉತ್ತರ ಹೀಗಿದೆ:-”ನಾಹ ಮಾತ್ಮೇಚ್ಛಯಾ ಶೈಲಂ ಕರೋಮ್ಯೇನಂ ಪ್ರದಕ್ಷಿಣಂ, ಏಷ ಮಾರ್ಗ: ಪ್ರದಿಷ್ಟೋ ಮೇ ಯೈರಿದಂ ನಿರ್ಮಿತಂ ಜಗತ್” ಅಂದರೆ, ವಿಂಧ್ಯನೇ, ನನ್ನ ಸ್ವ ಇಚ್ಛೆಯಿಂದ ನಾನು ಮೇರು ಪರ್ವತ ವನ್ನು ಪ್ರದಕ್ಷಿಣೆ ಮಾಡುತ್ತಲೂ ಇಲ್ಲ, ಗೌರವಿಸುತ್ತಲೂ ಇಲ್ಲ. ಈ ಪ್ರಪಂಚದ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣರಾದವರು ನನ್ನ ಚಲನೆಗೆ ಈ ಮಾರ್ಗವನ್ನು ನಿರ್ಣಯಿಸಿಬಿಟ್ಟಿದ್ದಾರೆ. ಇದರ ವಿವರಾಣಾರ್ಥ ಹೀಗಿದೆ:- ಅವರು ನಿರ್ಣಯಿಸಿರುವ ಈ ಮಾರ್ಗವನ್ನು ಬಿಟ್ಟು ನನ್ನ ಸ್ವೇಚ್ಛೆಯಿಂದ ಒಂದು ಹೆಜ್ಜೆ ಮುಂದಿಡಲು, ಹಿಂದಿಡಲು ಅಥವ ಪಕ್ಕದಲ್ಲಿಡಲು ನಾನು ಸ್ವತಂತ್ರನಲ್ಲ. ವಿಶ್ವವು ಯಾವ ರೀತಿಯಲ್ಲಿ ನಿರ್ವಹಣೆಗೊಳ್ಳುತ್ತಿದೆ. ಒಂದಕ್ಕೊಂದು ತತ್ಸಂಬಂಧೀ ಅವಲಂಬನೆಗಳು, ಶಿಸ್ತುಬದ್ಧ ನಿತ್ಯ ವಹಿವಾಟುಗಳು ಮಾನವನ ಕಲ್ಪನೆಗೂ ಮೀರಿ ನಡೆಯುತ್ತಿವೆ ಎಂಬದಕ್ಕೆ ಸೂರ್ಯನ ಈ ಮಾತುಗಳೇ ನಿದರ್ಶನವೆನ್ನ ಬಹುದು.
ಲೋಮಶರು ಚರಿತ್ರೆಯನ್ನು ಮುಂದುವರಿಸುತ್ತ ಹೇಳುತ್ತಾರೆ:- ಧರ್ಮರಾಯ, ಸೂರ್ಯನು ಕ್ಷಿಪ್ರವಾಗಿ ಹೀಗೆ ಉತ್ತರಿಸಿದೊಡ ನೆಯೇ ವಿಂಧ್ಯನಿಗೆ ಮಹಾಕೋಪ ವುಂಟಾಯಿತು. ಸೂರ್ಯಚಂದ್ರರ ಗತಿಯನ್ನೇ ತಡೆದು ಬಿಡುವೆ ನೆಂದು ಆತ ನಿಶ್ಚಯಿಸುತ್ತಾನೆ. ಎತ್ತರವಾಗಿ ಬೆಳೆಯಲು ಪ್ರಾರಂಭಿಸುತ್ತಾನೆ. ವಿಂಧ್ಯನು ತನ್ನ ಮೇರೆಯನ್ನು ಮೀರಿ ಅಗಾಧ ವಾಗಿ ಬೆಳೆಯುತ್ತಿರುವದನ್ನು ಕಂಡು ದೇವತೆಗಳು ಭೀತರಾಗು ತ್ತಾರೆ. ಏಕೆಂದರೆ, ವಿಶ್ವವು ಸಮತೋಲನದಲ್ಲಿ ನಿರ್ವಹಣೆ ಗೊಂಡಿದ್ದರೆ ಮಾತ್ರ ಸಹಜ ಸ್ಥಿತಿಯಲ್ಲಿರುತ್ತದೆ. ಯಾವದಾದರೂ ಒಂದೆಡೆ ಅಸಮತೋಲನವಾದರೂ ಇಡೀ ವಿಶ್ವದ ಎಲ್ಲ ಚರಾಚರ ಪ್ರಾಣಿಗಳು ಅಲ್ಲೋಲ್ಲಕಲ್ಲೋಲ್ಲಗೊಳ್ಳುತ್ತವೆ. ಭಯಗೊಂಡ ದೇವತೆಗಳೆಲ್ಲ ವಿಂಧ್ಯನ ಬಳಿ ತೆರಳುತ್ತಾರೆ. ಪ್ರಪಂಚದ ಸೃಷ್ಟಿಕ್ರಮದ ವ್ಯವಸ್ಥೆಯನ್ನು ಅವ್ಯವಸ್ಥೆಗೊಳಿಸಲು ಯತ್ನಿಸಬಾರದೆಂದು ಪರಿ ಪರಿಯಾಗಿ ಕೇಳಿಕೊಳ್ಳ್ಳುತ್ತಾರೆ. ಆದರೆ,ವಿಂಧ್ಯನು ದೇವತೆಗಳ ಮಾತಿಗೆ ಮಣಿಯಲಿಲ್ಲ. ಬಳಿಕ ದೆವತೆಗಳೆಲ್ಲ ತಮ್ಮ ತಮ್ಮಲ್ಲಿಯೇ ಸಮಾಲೋಚಿಸಿ ತಮಗೆ ಆಪದ್ಬಾಂಧವರಾಗಿ ಅಗಸ್ತ್ಯ ಮಹರ್ಷಿಗಳಲ್ಲದೆ ಬೇರಾರೂ ರಕ್ಷಕರಿಲ್ಲ ಎಂದು ಮನಗಾಣುತ್ತಾರೆ. ತಕ್ಷಣವೇ ಅವರನ್ನು ದರ್ಶಿಸಬೇಕು ಎನ್ನುವ ಏಕೈಕ ನಿರ್ಧಾರ ಕೈಗೊಳ್ಳುತ್ತಾರೆ. ಆಶ್ರಮಸ್ಥರಾಗಿದ್ದ, ತಪಸ್ವಿಗಳಾದ, ಧರ್ಮಾತ್ಮರುಗಳಲ್ಲಿ ಶ್ರೇಷ್ಠರಾದ, ಅದ್ಭುತವಾದ ವೀರ್ಯದಿಂದ ಕೂಡಿದ, ಮಹಾತೇಜಸ್ವಿಗಳಾದ ಅಗಸ್ತ್ಯರನ್ನು ಸಂದರ್ಶಿಸುತ್ತಾರೆ. ಅವರನ್ನು ಕುರಿತು ಅಂಜಲಿಬದ್ಧರಾಗಿ ಈ ಮಾತುಗಳನ್ನು ಹೇಳಿದರು:-
ಸೂರ್ಯಾ ಚಂದ್ರ ಮಸೋರ್ಮಾರ್ಗಂ ನಕ್ಷತ್ರಾಣಾಂ ಗತಿಂ ತಥಾ, ಶೈಲರಾಜೋ ವೃಣೋತ್ಯೇಷ ವಿಂಧ್ಯ: ಕ್ರೋಧವಶಾನುಗ:, ತಂ ನಿವಾರಯಿತುಂ ಶಕ್ತೋ ನಾನ್ಯ: ಕಶ್ಚಿದ್ವ್ವಿಜೋತ್ತಮ, ಯತೇ ತ್ವಾಂ ಹಿ ಮಹಾಭಾಗ ತಸ್ಮಾದೇನಂ ನಿವಾರಯ”ಅಂದರೆ, ಮಹರ್ಷೆ, ಕ್ರೋಧ ಮೂರ್ಛಿತನಾಗಿರುವ ಪರ್ವತರಾಜನಾದ ವಿಂಧ್ಯನು ಸೂರ್ಯ ಚಂದ್ರರ ಮತ್ತು ನಕ್ಷತ್ರಗಳ ಮಾರ್ಗವನ್ನೇ ತಡೆದು ಬಿಡುವದರಲ್ಲಿದ್ದಾನೆ. ಮಹಾತ್ಮ, ನಿಮ್ಮೊಬ್ಬರನ್ನುಳಿದು ಮತ್ತಾರೂ ಸಹ ಅವನನ್ನು ಈ ದು:ಸ್ಸಾಹಸ ದಿಂದ ವಿಮುಖರನ್ನಾಗಿ ಮಾಡಲಾರರು. ಆದುದರಿಂದ ನೀವು ದಯಮಾಡಿ ಅವನ ಈ ಕಾರ್ಯವನ್ನು ಪ್ರತಿಬಂಧಿಸಿರಿ.
ದೇವತೆಗಳ ಪ್ರಾರ್ಥನೆಯನ್ನು ಕೇಳಿ ಕರುಣಾಮಯರಾದ ಅಗಸ್ತ್ಯರು ವಿಂಧ್ಯಪರ್ವತದ ಸಮೀಪ ತೆರಳಿದರು. ಪತ್ನಿ ಲೋಪಾಮುದ್ರೆಯೊಡನೆ ಆಗಮಿಸಿದ ಅಗಸ್ತ್ಯರು ವಿಂಧ್ಯನನ್ನು ಕುರಿತು ಈ ಮಾತುಗಳನ್ನು ಹೇಳಿದರು: ‘‘ಮಾರ್ಗಮಿಚ್ಛಾಮ್ಯಹಂ ದತ್ತಂ ಭವತಾ ಪರ್ವತೋತ್ತಮ, ದಕ್ಷಿಣಾಭಿಗನ್ತಾಸ್ಮಿ ದಿಶಂ ಕಾರ್ಯೇಣ ಕೇನಚಿತ್, ಯಾವದಾಗಮನಂ ಮಹ್ಯಂ ತಾವತ್ತ್ವ್ವಂ ಪ್ರತಿಪಾಲಯ, ನಿವೃತ್ತೇ ಮಯಿ ಶೈಲೇಂದ್ರ ತತೋ ವರ್ಧಸ್ವ ಕಾಮತ:” ಅಂದರೆ, ಪರ್ವತರಾಜ, ನಾನು ಒಂದು ಕಾರ್ಯಾರ್ಥವಾಗಿ ದಕ್ಷಿಣದ ಕಡೆಗೆ ಹೋಗಬೇಕಾಗಿದೆ. ಆದುದರಿಂದ, ದಕ್ಷಿಣ ದೇಶಕ್ಕೆ ಪ್ರಯಾಣ ಮಾಡಲು ನನಗೆ ಮಾರ್ಗ ಮಾಡಿಕೊಡು. ಅಂದರೆ, ನಿನ್ನನ್ನು ಹತ್ತಿಹೋಗಲು ಅವಕಾಶವನ್ನು ಕಲ್ಪಿಸಿಕೊಡು. ಮತ್ತೊಂದು ವಿಷಯವೇನೆಂದರೆ ನಾನು ಪುನ: ಬರುವವರೆಗೂ ನೀನು ಈಗಿರುವಂತೆಯೇ ಇರಬೇಕು.ನೀನು ಅಗಾಧವಾಗಿ ಬೆಳೆದು ಬಿಟ್ಟರೆ ನಾನು ಪುನ: ಉತ್ತರಕ್ಕೆ ಹಿಂತಿರುಗಲೂ ಸಹ ಆಗದಿರಬಹುದು. ನಾನು ಉತ್ತರಕ್ಕೆ ಹಿಂತಿರುಗಿದ ನಂತರ ನಿನ್ನ ಇಚ್ಛೆಯಂತೆ ನೀನು ಬೆಳೆಯಬಹುದಾಗಿದೆ.”
ದೇವಾನುದೇವತೆಗಳ ಮಾತಿಗೂ ಮನ್ನಣೆ ನೀಡದೆ, ಈ ಹಿಂದೆ ಅವರೆಲ್ಲರ ಕೋರಿಕೆಗಳನ್ನು ತಿರಸ್ಕರಿಸಿದ್ದ ವಿಂಧ್ಯನು ಮಹರ್ಷಿ ಅಗಸ್ತ್ಯರ ಸಲಹೆಗೆ ಪೂರ್ಣ ಮನ್ನಣೆ ನೀಡುತ್ತಾನೆ. ತನ್ನ ಮೇಲೆ ಹತ್ತಿಹೋಗಲು ಲೋಪಾಮುದ್ರಾ ಸಮೇತರಾದ ಅಗಸ್ತ್ಯರಿಗೆ ತನ್ನನ್ನು ಕುಗ್ಗಿಸಿಕೊಂಡು ಮಾರ್ಗ ಮಾಡಿಕೊಡುತ್ತಾನೆ. ಅಗಸ್ತ್ಯರ ಮಾತಿಗೆ ಗೌರವ ನೀಡಿ ತನ್ನ ಬೆಳವಣಿಗೆಯನ್ನು ಸ್ಥಗಿತಗೊಳಿಸುತ್ತಾನೆ. ಆಶ್ಚರ್ಯವೆಂದರೆ ಮುಂದೆ ಅಗಸ್ತ್ಯರು ದಕ್ಷಿಣದಿಂದ ಉತ್ತರಕ್ಕೆ ಎಂದಿಗೂ ಹಿಂತಿರುಗಲೇ ಇಲ್ಲ! ವಿಂಧ್ಯನು ಸೂರ್ಯ ಚಂದ್ರರ ಗತಿಯನ್ನು ನಿಯಂತ್ರಿಸಲು ಪುನ: ಬೆಳೆಯಲೂ ಇಲ್ಲ. ಎಂತಹ ಅದ್ಭುತವಿದು! ಲೋಕವೇ ಅಲ್ಲೋಲ್ಲಕಲ್ಲೋಲ್ಲವಾಗುವಂತಹ ಪ್ರಾಕೃತಿಕ ಅಸಮತೋಲನದ ಗಂಭೀರ ಸಮಸ್ಯೆಯು ಅಗಸ್ತ್ಯರಿಂದ ಕ್ಷಣ ಮಾತ್ರ ದಲ್ಲಿ ಉಪಾಯ ಮಾರ್ಗದಿಂದ ನೀಗಲ್ಪಟ್ಟಿತು. ಆ ಮೂಲಕ ಅಗಸ್ತ್ಯರು ತಮ್ಮ ಪತ್ನಿ ಲೋಪಾಮುದ್ರೆ ಯೊಡಗೂಡಿ ವಿಶ್ವ ರಕ್ಷಣೆಯ ಮತ್ತೊಂದು ಅವಿಸ್ಮರಣೀಯ ಮಹತ್ಕಾರ್ಯ ವನ್ನು ಸಾಧಿಸಿ ಸರ್ವ ದೇವತೆಗಳಿಂದಲೂ ಸ್ತುತಿಸಲ್ಪಟ್ಟರು.
(ಮುಂದಿನ ವಾರ; ದುರಹಂಕಾರ ತೋರಿದ ನಹುಷನಿಗೆ ಅಗಸ್ತ್ಯರ ಶಾಪ)