ಸಿದ್ದಾಪುರ, ಫೆ. 8: ಕಾಡಾನೆ ದಾಳಿಗೆ ಸಿಲುಕಿ ಕೃಷಿಕರೋರ್ವರು ದಾರುಣವಾಗಿ ಮೃತಪಟ್ಟಿರುವ ಘಟನೆ ಮಾಲ್ದಾರೆ ಗ್ರಾಮದ ಅಸ್ತಾನದ ಹಾಡಿಯಲ್ಲಿ ನಡೆದಿದೆ. ಸಿದ್ದಾಪುರದ ಸಮೀಪದ ಅವರೆಗುಂದ ಹಾಡಿಯ ನಿವಾಸಿ ಎಸ್.ಆರ್. ಪೆಮ್ಮಯ್ಯ (ಪಾಪು-69) ಎಂಬವರು ನಿನ್ನೆ ಅಪರಾಹ್ನ ತಮ್ಮ ಮನೆಯಿಂದ ಮಾಲ್ದಾರೆ ಪಟ್ಟಣಕ್ಕೆ ಮನೆ ಸಾಮಗ್ರಿಗಳನ್ನು ತರಲೆಂದು ಹೋಗಿದ್ದರು ಎನ್ನಲಾಗಿದೆ. ಸಂಜೆ ಹಿಂತಿರುಗಿ ಬರುವ ಸಂದರ್ಭ ಕಾಡಾನೆ ದಾಳಿಗೆ ಸಿಲುಕಿ ಪೆಮ್ಮಯ್ಯ ಮೃತಪಟ್ಟಿದ್ದಾರೆ. ಮಾಲ್ದಾರೆ ಪಟ್ಟಣಕ್ಕೆ ಹೋಗಿದ್ದ ಪೆಮ್ಮಯ್ಯ ಅವರು ರಾತ್ರಿಯಾದರೂ ಹಿಂತಿರುಗಿ ಬಾರದಿರುವ ಬಗ್ಗೆ ಅವರ ಮಗ ಮಹೇಶ್, ಗ್ರಾಮಸ್ಥರು ತಮ್ಮ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭಿಸಲಿಲ್ಲ. ರಾತ್ರಿ ಸಮಯದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿರುವು ದರಿಂದ ಹುಡುಕಲು ಸಾಧ್ಯವಾಗಲಿಲ್ಲ. ಬಳಿಕ ಶನಿವಾರದಂದು ಪೆಮ್ಮಯ್ಯ ಅವರ ಪುತ್ರ ಹಾಗೂ ಗ್ರಾಮಸ್ಥರು ಸೇರಿ ಬೆಳಗ್ಗಿನಿಂದಲೇ ಹುಡುಕಾಡಿ ದಾಗ ಮಾಲ್ದಾರೆ ಅಸ್ತಾನ ಹಾಡಿಯ ರಸ್ತೆ ಬದಿ ಪೆಮ್ಮಯ್ಯ ಅವರ ಮೃತದೇಹ ಪತ್ತೆಯಾಗಿದೆ. (ಮೊದಲ ಪುಟದಿಂದ) ಪೆಮ್ಮಯ್ಯ ಅವರು ಮಾಲ್ದಾರೆ ಪಟ್ಟಣದಿಂದ ತಮ್ಮ ಮನೆ ಅವರೆಗುಂದಕ್ಕೆ ಕಾಲ್ನಡಿಗೆಯಲ್ಲಿ ಸಂಜೆ ತೆರಳುತ್ತಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ. ಕಾಡಾನೆಯು ಪೆಮ್ಮಯ್ಯ ನವರನ್ನು ಅಟ್ಟಾಡಿಸಿ ಸಾಯಿಸಿರುವ ಗುರುತುಗಳು ಸ್ಥಳದಲ್ಲಿ ಗೋಚರಿಸಿತು. ಕಾಡಾನೆಗೆ ಪೆಮ್ಮಯ್ಯ ಅವರ ಎದೆ ಹಾಗೂ ತಲೆಯ ಭಾಗ ಹಾಗೂ ಕಾಲಿನ ಭಾಗಕ್ಕೆ ತುಳಿದು ಸಾಯಿಸಿದೆ.

ಕಾಡಾನೆ ದಾಳಿಗೆ ಸಿಲುಕಿದ ಪೆಮ್ಮಯ್ಯ ಅವರು ರಾತ್ರಿಯಾದರೂ ತಮ್ಮ ಮನೆಗೆ ಬಾರದ ಹಿನ್ನೆಲೆಯಲ್ಲಿ ಪುತ್ರ ಮಹೇಶ್ ತನ್ನ ತಂದೆಯ ಮೊಬೈಲಿಗೆ ಹಲವಾರು ಬಾರಿ ಕರೆ ಮಾಡಿದ್ದರೂ ಕೂಡ ಕರೆ ಸ್ವೀಕಾರವಾಗಲಿಲ್ಲ. ಶನಿವಾರದಂದು ತನ್ನ ತಂದೆಯನ್ನು ಹುಡುಕಿಕೊಂಡು ಹೋದಾಗ ತಂದೆ ಮೃತಪಟ್ಟಿರುವು ದನ್ನು ಕಂಡ ಪುತ್ರ ಮರುಗಿದರÀು.

ಮೃತದೇಹದ ಬಳಿಗೆ ಗ್ರಾಮಸ್ಥರು ತೆರಳುವ ವೇಳೆ ಮೃತದೇಹದ ಸಮೀಪದಲ್ಲಿ 3 ಕಾಡಾನೆಗಳು ಘೀಳಿಡುತ್ತಾ ರಸ್ತೆ ಬದಿಯಲ್ಲಿ ಕಂಡು ಬಂದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಸಾಧು ಸ್ವಭಾವದ ವ್ಯಕ್ತಿಯಾಗಿದ್ದ ಪೆಮ್ಮಯ್ಯ ಅವರು ಈ ಹಿಂದೆ ಸಿದ್ದಾಪುರ ಗುಹ್ಯ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಅಟೆಂಡರ್ ಆಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಮೃತರ ಪತ್ನಿ ಈ ಹಿಂದೆ ನಿಧನ ಹೊಂದಿದ್ದು, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಸ್ಥಳಕ್ಕೆ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಹೆಚ್.ಎಸ್. ಬೋಜಪ್ಪ ಹಾಗೂ ಕುಶಾಲನಗರ ವಲಯ ಎ.ಸಿ.ಎಫ್. ನೆಹರು, ವಲಯಾರಣ್ಯಾಧಿಕಾರಿ ಅನನ್ಯ ಕುಮಾರ್ ಭೇಟಿ ನೀಡಿದರು. ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೆಮ್ಮಯ್ಯ ಅವರ ಮೃತದೇಹವನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಪೆಮ್ಮಯ್ಯ ಅವರ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ ಮಡಿಕೇರಿ ವಿಭಾಗದ ಡಿ.ಸಿ.ಎಫ್. ಪ್ರಭಾಕರನ್ ಅವರು ಮೃತರ ನಿವಾಸಕ್ಕೆ ತೆರಳಿ ಅವರ ಪುತ್ರ ಮಹೇಶ್ ಅವರಿಗೆ ರೂ. 5 ಲಕ್ಷದ ಪರಿಹಾರ ಚೆಕ್‍ನ್ನು ನೀಡಿದರು. ಈ ಸಂದರ್ಭ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಮಿತಿಮೀರಿದ ಕಾಡಾನೆ ಹಾವಳಿ

ಸಿದ್ದಾಪುರ ಸುತ್ತಮುತ್ತಲಿನ ಕರಡಿಗೋಡು, ಇಂಜಿಲಗೆರೆ, ಕಣ್ಣಂಗಾಲ, ಹೊಸೂರು, ಬೆಟ್ಟಗೇರಿ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕೂಡಲೇ ಅರಣ್ಯಕ್ಕೆ ಅಟ್ಟಬೇಕೆಂದು ಹಾಗೂ ಸರಕಾರ ಕಾಡಾನೆ ಹಾವಳಿ ತಡೆಗೆ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಮಾಲ್ದಾರೆಯ ಹಿರಿಯ ಕಾಫಿ ಬೆಳೆಗಾರರಾದ ಅಜ್ಜಿನಿಕಂಡ ರಾಜು ಅಪ್ಪಯ್ಯ ಒತ್ತಾಯಿಸಿದ್ದಾರೆ.

-ವಾಸು