ಭಾಗಮಂಡಲ, ಜ. 8: ದಿನೇ ದಿನೇ ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತಿದ್ದಂತೆ ಭಾಗಮಂಡಲದಲ್ಲಿ ಕಸದ ರಾಶಿ ತುಂಬಿತುಳುಕುತ್ತಿದ್ದು ಕಸ ವಿಲೇವಾರಿ ಮಾಡಲು ಜಾಗವಿಲ್ಲದೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ತಲೆನೋವಾಗಿ ಪರಿಣಮಿಸಿದೆ. ಪುಣ್ಯಕ್ಷೇತ್ರ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ದಿನೇದಿನೇ ತುಂಬಿದ ಕಸದ ರಾಶಿಯನ್ನು ಗ್ರಾಮ ಪಂಚಾಯಿತಿ ಸಂಗ್ರಹಿಸಿ ಘನ ತ್ಯಾಜ್ಯವನ್ನು ಹಾಕಲು ಒಂದೆಡೆ ದನದ ದೊಡ್ಡಿಯ ಬಳಕೆ ಮಾಡುತ್ತಿದೆ. ಉಳಿದುದನ್ನು ಖಾಸಗಿ ವ್ಯಕ್ತಿಯೊಬ್ಬರ ಜಾಗದಲ್ಲಿ ಹಾಕುತ್ತಿದೆ. ತ್ಯಾಜ್ಯ ಹಾಕಲು ಖಾಸಗಿ ವ್ಯಕ್ತಿ ಕೂಡ ತಡೆಯೊಡ್ಡಿದ್ದು ಕಸ ವಿಲೇವಾರಿಗೆ ಸರ್ಕಾರವು ಜಾಗ ಗುರುತಿಸದೇ ಇರುವುದು ಗ್ರಾಮ ಪಂಚಾಯಿತಿಗೆ ಸಮಸ್ಯೆಯಾಗಿದೆ. ಈ ಹಿಂದೆ ಖಾಸಗಿ ವ್ಯಕ್ತಿಯ ಜಾಗದಲ್ಲಿ ಸುರಿಯುತ್ತಿದ್ದ ಕಸದ ರಾಶಿ ಸದ್ದಿಲ್ಲದೆ ಕನ್ನಿಕೆ ಸೇರಿ ಕಾವೇರಿ ಒಡಲು ಸೇರುತಿತ್ತು.
ಈ ಬಗ್ಗೆ ‘ಶಕ್ತಿ’ ವಿಸ್ತøತ ವರದಿ ಮಾಡಿತ್ತು. ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿಯು ಕೂಡಲೇ ಘಟಕ ನಿರ್ಮಾಣಕ್ಕೆ ಮುಂದಾಗಿ ಭಾಗಮಂಡಲ - ಕರಿಕೆ ರಸ್ತೆಯ ತಣ್ಣಿಮಾನಿಯಲ್ಲಿ ಘಟಕ ನಿರ್ಮಾಣಕ್ಕೆ ಜಾಗ ಗುರುತಿಸಿಕೊಂಡು ಟೆಂಡರ್ ಪ್ರಕ್ರಿಯೆ ನಡೆಸಿದ್ದು, ಗುದ್ದಲಿ ಪೂಜೆಯನ್ನು ಶಾಸಕರು ಸೇರಿದಂತೆ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಪಂಚಾಯಿತಿ ಸದಸ್ಯರು ನೆರವೇರಿಸಿದ್ದರು. ಕೆಲಸ ಆರಂಭವಾಗುತ್ತಿದ್ದಂತೆ ಅರಣ್ಯ ಇಲಾಖೆ ಇದಕ್ಕೆ ತಡೆಯೊಡ್ಡಿತ್ತು. ಈ ಜಾಗದಲ್ಲಿ ಕಸವಿಲೇವಾರಿ ಘಟಕವಾದರೆ ವನ್ಯ ಜೀವಿಗಳಿಗೆ ತೊಂದರೆಯಾಗುತ್ತದೆ ಎಂದು ತಡೆ ಒಡ್ಡಿ ನೋಟಿಸ್ ಜಾರಿ ಮಾಡಿತ್ತು. ನಂತರ ಅರಣ್ಯ ಇಲಾಖೆ ಜಾಗ ಗುರುತಿಸುವಂತೆ ಸಭೆ ನಡೆಸಿ ನಾಪೋಕ್ಲು ಭಾಗಮಂಡಲ ರಸ್ತೆಯ ಕೋರಂಗಾಲದಲ್ಲಿ ರಸ್ತೆ ಬದಿ ಜಾಗ ಗುರುತಿಸಿತು. ಆದರೆ ಕಾವೇರಿ ನದಿ ಪಕ್ಕದಲ್ಲಿ ಇದ್ದುದರಿಂದ ಗ್ರಾಮಸ್ಥರು ಇದಕ್ಕೆ ತಡೆ ಒಡ್ಡಿದ್ದು ಮತ್ತೆ ಗ್ರಾಮ ಪಂಚಾಯಿತಿಗೆ ತಲೆ ನೋವಾಗಿದ್ದು ಜಿಲ್ಲಾಡಳಿತ ಕೋರಂಗಾಲದಲ್ಲಿ ಜಾಗ ಗುರುತಿಸುವಂತೆ ನಿರ್ದೇಶನ ನೀಡಿತು. ಅಂತೆಯೇ ಸರ್ವೆ ಕಾರ್ಯ ಮುಗಿದು ಕೋರಂಗಾಲದಲ್ಲಿ ಸರ್ವೆ ನಂ. 27/2 ರಲ್ಲಿ ಸರ್ವೆ ಕಾರ್ಯ ಮುಗಿಸಿ ಕೆಲಸ ಆರಂಭಿಸುವಷ್ಟರಲ್ಲಿ ಅಯ್ಯಂಗೇರಿ ಗ್ರಾಮ ಪಂಚಾಯಿತಿ ಇದು ಸರ್ವೆ ನಂ. 78/2 ಎಂದು ತಡೆ ಒಡ್ಡಿತು. ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತೆ ಎಲ್ಲೂ ಜಾಗವಿಲ್ಲದ ಪರಿಸ್ಥಿತಿ ಗ್ರಾಮ ಪಂಚಾಯಿತಿಗೆ ನಿರ್ಮಾಣವಾಗಿದೆ. ಇತ್ತ ಸರ್ವೇ ಇಲಾಖೆ ಮಾಡಿದ 27/2 ಸರ್ವೆ ಅಯ್ಯಂಗೇರಿಯ 28/2 ಎಂದು ಆಗಿದ್ದು ಸರ್ವೇ ಇಲಾಖೆ ಲೋಪವಾಗಿದೆ.
ಒಟ್ಟಾರೆ ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಶುಚಿತ್ವಕ್ಕಾಗಿ ತಿಂಗಳಿಗೆ ರೂ. 35000 ದಂತೆ ಟೆಂಡರ್ ನೀಡಿದ್ದು ಮೂರರಿಂದ ನಾಲ್ಕು ಸಾವಿರ ರೂಪಾಯಿ ಘನತ್ಯಾಜ್ಯ ವಿಲೇವಾರಿಗೆ ಖರ್ಚಾಗುತ್ತಿದೆ. ಇತ್ತ ಪಟ್ಟಣದ ಶುಚಿಗಾಗಿ ಗ್ರಾಮ ಪಂಚಾಯಿತಿ ಶ್ರಮವಹಿಸಿದ್ದು ತುಂಬಿದ ಕಸವನ್ನು ವಿಲೇವಾರಿ ಮಾಡಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದು ಆದಷ್ಟು ಬೇಗ ಕಸ ವಿಲೇವಾರಿಗೆ ಜಾಗ ಗುರುತಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಗ್ರಾಮ ಪಂಚಾಯಿತಿ ಪ್ರತಿವರ್ಷದ ಜಾತ್ರೆ ಸೇರಿದಂತೆ ಹೆಚ್ಚಿನ ಹಣ ಹೋಗುತ್ತಿದ್ದು ವಿಶೇಷವಾಗಿ ಜಾತ್ರೆ ಖರ್ಚಿಗೆ ರೂ. 20 ಲಕ್ಷ ಅನುದಾನ ಕೊಡಬೇಕು ಎಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಕಳೆದ ವರ್ಷ ರೂ. 20 ಲಕ್ಷ ಕೊಡುವುದಾಗಿ ಸರ್ಕಾರ ಭರವಸೆ ನೀಡಿತ್ತಾದರೂ ಇದುವರೆಗೆ ಗ್ರಾಮ ಪಂಚಾಯಿತಿಗೆ ಯಾವುದೇ ಹಣ ಬಾರದೆ ಪಂಚಾಯಿತಿಗೆ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಆರೋಪಿಸಿದ್ದಾರೆ.
-ಕುಯ್ಯಮುಡಿ ಸುನಿಲ್