ಸೋಮವಾರಪೇಟೆ, ಫೆ. 8: ವಿಷ ಸೇವಿಸಿ ಕೃಷಿಕರೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ತೋಳೂರುಶೆಟ್ಟಳ್ಳಿಯ ನಡ್ಲಕೊಪ್ಪದಲ್ಲಿ ನಡೆದಿದೆ.

ತೋಳೂರುಶೆಟ್ಟಳ್ಳಿ ನಿವಾಸಿ ಹರೀಶ್ (50) ಎಂಬವರೇ ಆತ್ಮಹತ್ಯೆಗೆ ಶರಣಾದವರಾಗಿದ್ದು, ಇಂದು ಬೆಳಿಗ್ಗೆ ತಮ್ಮ ಮನೆಯಲ್ಲಿ ವಿಷ ಸೇವಿಸಿದ್ದಾರೆ.

ಅಸ್ವಸ್ಥಗೊಂಡ ಹರೀಶ್ ಅವರನ್ನು ತಕ್ಷಣ ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ, ಐಗೂರು ಗ್ರಾಮದ ಬಳಿ ಅಸುನೀಗಿದ್ದಾರೆ.

ಮೃತ ಹರೀಶ್ ಅವರು ಕಳೆದ ಕೆಲ ವರ್ಷಗಳಿಂದ ತೀವ್ರ ಸೊಂಟ ನೋವಿನಿಂದ ಬಳಲುತ್ತಿದ್ದರು. ಇದರೊಂದಿಗೆ ಕೈಸಾಲವನ್ನೂ ಪಡೆದಿದ್ದು, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು ಎನ್ನಲಾಗಿದೆ. ಘಟನೆಯ ಬಗ್ಗೆ ಮೃತರ ಪತ್ನಿ ಅನಿತಾ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.