ಗೋಣಿಕೊಪ್ಪ ವರದಿ, 8; ಮಳೆ ಹಾನಿ ಪರಿಹಾರ ಅನುದಾನದಲ್ಲಿ ಶಾಲೆಗಳ ದುರಸ್ತಿಗೆ ಹಣದ ಬಳಕೆಗೆ ಶಾಲಾಭಿವೃಧ್ಧಿ ಸಮಿತಿಯ ಸಲಹೆ ಪಡೆದು ಮುಂದುವರಿಯುವಂತೆ ಪೊನ್ನಂಪೇಟೆ ಸಾಮಥ್ರ್ಯಸೌಧ ಸಭಾಂಗಣದಲ್ಲಿ ಆಯೋಜಿಸಿದ್ದ ವೀರಾಜಪೇಟೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಲಾಯಿತು.

ಸದಸ್ಯೆ ಆಶಾಜೇಮ್ಸ್ ಮಾತನಾಡಿ, ಮಳೆ ಪರಿಹಾರ ನಿಧಿಯಲ್ಲಿ ಪ್ರತೀ ಶಾಲೆಗೆ ತಲಾ ರೂ. 2 ಲಕ್ಷ ಬಿಡುಗಡೆಗೊಂಡಿದೆ. ಆದರೆ, ಕೇವಲ ಸುಣ್ಣ, ಬಣ್ಣ ಬಳಿದು ದುರಸ್ತಿ ಕಾಮಗಾರಿ ಮುಗಿಸಲಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲನ್‍ಕುಮಾರ್, ಶಾಲಾಭಿವೃಧ್ಧಿ ಸಮಿತಿ ಸಲಹೆ ಪಡೆದು, ಕಾಮಗಾರಿ ಗುಣಮಟ್ಟದ ಬಗ್ಗೆ ಪತ್ರ ನೀಡಿ ಹಣ ಪಡೆದುಕೊಳ್ಳುವಂತೆ ಸೂಚಿಸಿದರು.

ಕೃಷಿ ಇಲಾಖೆ ವತಿಯಿಂದ ಕೆದಮುಳ್ಳೂರು ವ್ಯಾಪ್ತಿಯಲ್ಲಿ ನಡೆಯುತ್ತಿರುವ ನೀರು ಗುಂಡಿ ತೋಡುವ ಕಾಮಗಾರಿಯ ಹಣವನ್ನು ಫಲಾನುಭವಿಗಳಿಗೆ ನೀಡದೆ ಗುತ್ತಿಗೆದಾರನಿಗೆ ನೀಡುತ್ತಿರುವುದರಿಂದ ನೈಜ ಫಲಾನುಭವಿಗಳಿಗೆ ಸವಲತ್ತು ಸಿಗುತ್ತಿಲ್ಲ ಎಂದು ಸದಸ್ಯ ಮಾಳೇಟೀರ ಪ್ರಶಾಂತ್ ಆರೋಪಿಸಿದರು. ಕೃಷಿ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡುವಂತೆ ಸಭೆ ಸೂಚಿಸಿತು.

ಬಿರುನಾಣಿ ವ್ಯಾಪ್ತಿಯಲ್ಲಿ ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟ ನಿಯಂತ್ರಿಸುವಲ್ಲಿ ಶ್ರೀಮಂಗಲ ಪೊಲೀಸ್ ಅಧಿಕಾರಿಗಳು ಎಡವಿದ್ದಾರೆ ಎಂದು ಉಪಾಧ್ಯಕ್ಷ ಚಲನ್‍ಕುಮಾರ್ ಆರೋಪಿಸಿದರು. ಈ ವಿಚಾರದಲ್ಲಿ ಅವರನ್ನು ಸಭೆಗೆ ಆಹ್ವಾನಿಸಿದ್ದರೂ ಸಭೆಗೆ ಬಾರದೆ ನುಣುಚಿಕೊಂಡಿದ್ದಾರೆ. ಜಾನುವಾರು ಸಾಗಾಟ ತಡೆಗೆ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳನ್ನು ಒತ್ತಾಯಿಸಬೇಕು ಎಂದು ಹೇಳಿದರು.

ಬಾಡಗ-ಬಾಣಂಗಾಲ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ವತಿಯಿಂದ ಜನರಿಗೆ ತೊಂದರೆ ಯಾಗುತ್ತಿದೆ. ಅಲ್ಲಿನ ಕೆಲವೊಂದು ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಸದಸ್ಯೆ ಚಿಣ್ಣಮ್ಮ ಆರೋಪಿಸಿ ದರು. ಸಭೆಯಲ್ಲಿ ಇಒ ಷಣ್ಮುಗ, ಹಾಗೂ ಸದಸ್ಯರು ಉಪಸ್ಥಿತರಿದ್ದರು.