ಕೂಡಿಗೆ, ಫೆ. 9: ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿತಗೊಳ್ಳುತ್ತಿದೆ. ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡುಗಳಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಕೆ.ವೈ. ರವಿ, ರಾಮಚಂದ್ರ, ಕೆ.ಜೆ. ಮೋಹಿನಿ ಸಭೆಯಲ್ಲಿ ಚರ್ಚಿಸಿದರು.

ಈಗಾಗಲೇ ಹೊಸದಾಗಿ ಪೈಪ್‍ಲೈನ್ ಅಳವಡಿಸುವ ಕಾಮಗಾರಿ ಮುಗಿದಿದ್ದು, ಅದರ ಮೂಲಕ ಉಪಬೀದಿಗಳಿಗೆ ನೀರನ್ನು ಒದಗಿಸುವ ಯೋಜನೆಯು ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಲಾಯಿತು. ನಂತರ ಹುದುಗೂರು ಗ್ರಾಮದಲ್ಲಿ ಕಾದಿರಿಸಿರುವ ನಿವೇಶನ ಜಾಗದ ಸರ್ವೆ ನಂಬರ್ ಅದಲು-ಬದಲಾಗಿದ್ದು, ಈ ಜಾಗವು ಈಗಾಗಲೇ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದು, ಒಂದು ಸರ್ವೆ ನಂಬರ್‍ನ ಜಾಗವು ಗಿರಿಜನ ಕುಟುಂಬದವರು ಬೇಸಾಯ ಮಾಡುವ ಜಾಗಕ್ಕೆ ಸೇರಿಕೊಂಡಿದೆ. ಗ್ರಾಮ ಪಂಚಾಯಿತಿ ವತಿಯಿಂದ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ, ಸಮರ್ಪಕವಾಗಿ ಸರ್ವೆ ನಡೆಸಿ ನಿವೇಶನಕ್ಕೆ ಕಾದಿರಿಸಿರುವ ಜಾಗದಲ್ಲಿ ನಿವೇಶನ ಹಂಚಲು ಮುಂದಾಗಬೇಕು ಎಂದು ಸದಸ್ಯರಾದ ಹೆಚ್.ಎಸ್. ರವಿ, ಪುಷ್ಪ, ಚಂದ್ರಿಕಾ, ಕಲ್ಪನ ಒತ್ತಾಯಿಸಿದರು.

14ನೇ ಹಣಕಾಸಿನ ಯೋಜನೆಯಡಿಯ ವಿವಿಧ ಕಾಮಗಾರಿಗಳ ಆಯಾ ವಾರ್ಡಿನ ಸದಸ್ಯರ ಅಭಿಪ್ರಾಯದಂತೆ ಕ್ರಿಯಾಯೋಜನೆಯ ಪಟ್ಟಿಯನ್ನು ತಯಾರಿಸಲಾಯಿತು. ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರೇಮಲೀಲಾ ಮಾತನಾಡಿ, ಸದಸ್ಯರ ಅಭಿಪ್ರಾಯದಂತೆ ವಿವಿಧ ಕಾಮಗಾರಿಗಳನ್ನು 14ನೇ ಹಣಕಾಸಿನ ಯೋಜನೆಯ ಕಾಮಗಾರಿಗಳ ಪಟ್ಟಿಗೆ ಸೇರಿಸಲಾಗಿದ್ದು, ಅದರಂತೆ ಕಾಮಗಾರಿಗಳನ್ನು ಹಂತ ಹಂತವಾಗಿ ನಡೆಸಲಾಗುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಶುಚಿತ್ವಕ್ಕೆ ಹೆಚ್ಚಿನ ಆಧ್ಯತೆ ನೀಡುವುದರ ಜೊತೆಗೆ ಕಸ ವಿಲೇವಾರಿ ಘಟಕವನ್ನು ಬ್ಯಾಡಗೊಟ್ಟದಲ್ಲಿ ಪ್ರಾರಂಭಿಸಲು ಕಾರ್ಯೋನ್ಮುಖರಾಗಿದ್ದೇವೆ ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷ ಗಿರೀಶ್‍ಕುಮಾರ್, ಸದಸ್ಯರು ಹಾಗೂ ಗ್ರಾ.ಪಂ. ಕಾರ್ಯದರ್ಶಿ ಶಿಲ್ಪ ಇದ್ದರು.