ಮಡಿಕೇರಿ, ಫೆ. 9: ಚೀನಾ ಸೇರಿದಂತೆ ಹತ್ತಿರದ ರಾಷ್ಟ್ರಗಳಿಂದ ಬರುವ ಪ್ರವಾಸಿಗರ ಬಗ್ಗೆ ನಿಗಾ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ತಿಳಿಸಿದ್ದಾರೆ.
ನಗರದ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿತರ ನಿರ್ವಹಣೆ ಮತ್ತು ಚಿಕಿತ್ಸೆ ನೀಡುವ ಸಂದರ್ಭ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚೀನಾ ದೇಶದಲ್ಲಿ ಕೊರೊನಾ ವೈರಸ್ ಸಾಕಷ್ಟು ಜೀವಹಾನಿ ಯನ್ನುಂಟು ಮಾಡಿದೆ. ಕೇರಳ ರಾಜ್ಯದಲ್ಲಿಯೂ ಸಹ 3 ಜನ ಸೋಂಕಿತರಿರುವುದು ಈಗಾಗಲೇ ದೃಢಪಟ್ಟಿದೆ. ಈ ನಿಟ್ಟಿನಲ್ಲಿ ಕೇರಳ ಗಡಿಗೆ ಹೊಂದಿಕೊಂಡಂತೆ ಕೊಡಗು ಜಿಲ್ಲೆಯೂ ಸಹ ಇರುವುದರಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದರು.
ಯಾವುದೇ ಹಂತದಲ್ಲಿ ಯಾವುದೇ ವ್ಯಕ್ತಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟರೆ, ಅವರ ಬಗ್ಗೆ ಗೌಪ್ಯತೆ ಕಾಪಾಡಬೇಕು. ಹಿರಿಯ ಅಧಿಕಾರಿಗಳ ಬಳಿಯಲ್ಲಿ ಮಾತ್ರವೇ ಈ ವಿಚಾರವನ್ನು ಪ್ರಸ್ತಾಪಿಸಬೇಕು ಎಂದರು.
ಚಿಕಿತ್ಸೆ ನೀಡುವ ಸಂದರ್ಭದಲ್ಲಿಯೂ ಸಹ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸೋಂಕಿತ ವ್ಯಕ್ತಿಯಿಂದ ಕನಿಷ್ಟ 6 ಅಡಿ ದೂರದಲ್ಲಿ ನಿಂತು ಮಾತನಾಡಬೇಕು. ಸೋಂಕಿತರನ್ನು ಸ್ಪರ್ಶಿಸಿದ ಬಳಿಕ ಸಾಬೂನಿನಲ್ಲಿ ಕೈಯನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಂಡು ನಂತರ ನಿಮ್ಮ ಕಣ್ಣು ಮತ್ತು ಬಾಯಿಯನ್ನು ಸ್ಪರ್ಶಿಸಬೇಕು. ಯಾರಾದರು ತೀವ್ರ ರೀತಿಯಲ್ಲಿ ಕೆಮ್ಮುತ್ತಿದ್ದರೆ. ಅವರಿಗೆ ಕೆಮ್ಮುವ ಸಂದರ್ಭ ಕರವಸ್ತ್ರವನ್ನು ಅಡ್ಡ ಹಿಡಿಯುವಂತೆ ಸಲಹೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಆರ್.ಸಿ.ಹೆಚ್. ಅಧಿಕಾರಿ ಡಾ. ಗೋಪಿನಾಥ್, ಮಡಿಕೇರಿ ತಾಲೂಕು ಮಟ್ಟದ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಭಾಗಿಯಾಗಿದ್ದರು.