ಮಡಿಕೇರಿ, ಫೆ. 9 : ನಗರದ ಗಾಂಧಿಮಂಟಪ ಇರುವ ಪ್ರದೇಶದಲ್ಲೇ ಗಾಂಧಿ ಸ್ಮಾರಕವನ್ನು ನಿರ್ಮಿಸಿ ಗಾಂಧಿ ಚಿತಾಭಸ್ಮವನ್ನಿಟ್ಟು ಗೌರವ ತೋರುವಂತಾಗಬೇಕು.
ಸುದ್ದಿಗೋಷ್ಠಿಯಲ್ಲಿ ಸರ್ವೋದಯ ಸಮಿತಿಯ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಒತ್ತಾಯಿಸಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ 1934 ರಲ್ಲಿ ಜಿಲ್ಲೆಗೆ ಭೇಟಿ ನೀಡಿ ಈಗ ಇರುವ ಗಾಂಧಿ ಮಂಟಪದ ಪ್ರದೇಶದಲ್ಲಿ ನಿಂತು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ದರು. ಈ ನೆನಪಿಗಾಗಿ ಆ ಸ್ಥಳದಲ್ಲಿ ಗಾಂಧಿ ಮಂಟಪವನ್ನು ನಿರ್ಮಾಣ ಮಾಡಲಾಗಿದೆ. ಕೆಲವು ವರ್ಷಗಳ ಹಿಂದೆ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾಗಿದ್ದ ಬಲದೇವಕೃಷ್ಣ ಅವರು ಗಾಂಧಿ ಚಿತಾಭಸ್ಮಕ್ಕೆ ಗೌರವ ಸೂಚಿಸುವ ಸಲುವಾಗಿ ದೆಹಲಿಯ ರಾಜ್ ಘಾಟ್ ಮಾದರಿಯಲ್ಲಿ ಮಡಿಕೇರಿಯಲ್ಲೊಂದು ಗಾಂಧಿ ಸ್ಮಾರಕ ನಿರ್ಮಿಸಲು ನೀಲಿನಕ್ಷೆ ಸಿದ್ದಪಡಿಸಿದ್ದರು ಎಂದು ಟಿ.ಪಿ.ರಮೇಶ್ ನೆನಪಿಸಿದರು.
ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸರ್ವೋದಯ ಸಮಿತಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಾ ಬಂದಿದೆ. ಜ.28 ರಂದು ಸರ್ವೋದಯ ಸಮಿತಿಯ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಗಾಂಧಿ ಸ್ಮಾರಕ ನಿರ್ಮಿಸಲು ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಅಂತಿಮ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು. ಮಹಾತ್ಮಾಗಾಂಧಿ ಬಗ್ಗೆ ಸಂಸದ ಅನಂತಕುಮಾರ್ ಹೆಗ್ಡೆ ಅವರ ವಿವಾದಾತ್ಮಕ ಹೇಳಿಕೆಯನ್ನು ಸರ್ವೋದಯ ಸಮಿತಿ ಖಂಡಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ಹಾಗೂ ಖಜಾಂಚಿ ಕೋಡಿ ಚಂದ್ರಶೇಖರ್ ಉಪಸ್ಥಿತರಿದ್ದರು.