ಚೆಟ್ಟಳ್ಳಿ, ಫೆ. 9: ಗುಜರಾತ್‍ನ ವಡೋಧರದಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಮೂರನೇ ಮಾಸ್ಟರ್ ಗೇಮ್ಸ್‍ನ ಸೀನಿಯರ್ ವಿಭಾಗದ ಕಾಲ್ಚೆಂಡು ಪಂದ್ಯಾಟದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ಕೊಡಗು ಜಿಲ್ಲೆಯ ಆಟಗಾರರು ಬಲಿಷ್ಠ ತಂಡವಾದ ಛತ್ತೀಸ್‍ಘಡ ವಿರುದ್ಧ ಫೈನಲ್ ಪಂದ್ಯದಲ್ಲಿ ವೀರೊಚಿತ ಸೋಲು ಕಂಡು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಛತ್ತೀಸ್‍ಘಡ ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿತು. ಕರ್ನಾಟಕ ತಂಡದ ಪರವಾಗಿ ಅಮ್ಮತ್ತಿಯ ಸಿರಾಜ್ ಒಂದು ಗೋಲು ದಾಖಲಿಸಿದರು. ಪೆನಾಲ್ಟಿ ಶೂಟೌಟ್‍ನಲ್ಲಿ ಕರ್ನಾಟಕ ತಂಡವು ಛತ್ತೀಸ್‍ಘಡ ತಂಡದ ವಿರುದ್ಧ ಸೋಲು ಕಂಡಿತು. ಇದಕ್ಕೂ ಮೊದಲು ಕರ್ನಾಟಕ ತಂಡವು ಸೆಮಿಫೈನಲ್ ಪಂದ್ಯದಲ್ಲಿ ಚಂಡಿಘಡ ತಂಡವನ್ನು ತಂಡದ ನಾಯಕ ಎಂ.ಇಬ್ರಾಹಿಂ ಅವರ ಏಕೈಕ ಗೋಲಿನÀ ನೆರವಿನಿಂದ ಗೆದ್ದು ಫೈನಲ್‍ಗೆ ಲಗ್ಗೆಯಿಟ್ಟಿತು.

ಕರ್ನಾಟಕ ತಂಡದಲ್ಲಿ ಎಲ್ಲಾ ಆಟಗಾರರು ಕೊಡಗು ಜಿಲ್ಲೆಯವರೇ ಸ್ಥಾನ ಪಡೆದು ಪ್ರಶಸ್ತಿ ಜಯಿಸಿದ್ದಾರೆ. ಕರ್ನಾಟಕ ತಂಡದ ಪರವಾಗಿ (ನಾಯಕ) ಎಂ. ಇಬ್ರಾಹಿಂ, ರಾಕೇಶ್, ಹೆಚ್.ಎ. ದಿನೇಶ್, ಪುನಿತ್ ಗಾಂಧಿ, ಟಿ.ಡಿ. ರದೀಶ್ ವಿ.ಪಿ. ಶ್ರೀನಿವಾಸ್, ರೆಹಮತ್, ಕೆ.ಆರ್. ಶಿವಕುಮಾರ್, ಸಿರಾಜುದ್ದೀನ್, ಬಷೀರ್ ಆರ್., ರಷೀದ್, ಶಿವ ಕುಮಾರ್ ಆರ್., ಅಬ್ದುಲ್ ಜಬ್ಬಾರ್, ಜಗದೀಶ್ ಪಾಣತ್ತಲೆ, ವಿಜು, ಮತ್ತು ಶೇಖರ್ ಆಡಿದರು.

-ಕೆ.ಎಂ ಇಸ್ಮಾಯಿಲ್ ಕಂಡಕರೆ