ಮಡಿಕೇರಿ, ಫೆ. 9: ಮೂರ್ನಾಡು ಪದವಿ ಕಾಲೇಜಿನ ವಿದ್ಯಾರ್ಥಿಗಳು ಮೈಸೂರಿನ ಇನ್ಫೋಸಿಸ್ ಆವರಣಕ್ಕೆ ಭೇಟಿ ಕೊಟ್ಟು, ಅಲ್ಲಿಯ ಕಾರ್ಯ ವಿಧಾನ ತಿಳಿದುಕೊಂಡರು.
ಇನ್ಫೋಸಿಸ್ನ ಸಿಬ್ಬಂದಿಗಳು, ವಿದ್ಯಾರ್ಥಿಗಳಿಗೆ ಸಂಸ್ಥೆ ಬೆಳೆದು ಬಂದ ಕುರಿತು ಚಿತ್ರದ ಮೂಲಕ ತೋರಿಸಿಕೊಟ್ಟರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂತಹ ಕೈಗಾರಿಕಾ ಭೇಟಿ ಮುಖ್ಯವಾದದ್ದು, ಶಿಕ್ಷಣದ ಜೊತೆಗೆ ಬೃಹತ್ ಉದ್ದಿಮೆಯ ತಿಳುವಳಿಕೆಯು ಮಕ್ಕಳಲ್ಲಿ ಇನ್ನಷ್ಟು ಜ್ಞಾನವನ್ನು ಹೆಚ್ಚಿಸಲು ಅನುವುಮಾಡಿ ಕೊಟ್ಟಂತಾಗಿದೆ.
ಪ್ರಥಮ ಬಿಕಾಂನ ವಿದ್ಯಾರ್ಥಿಗಳು ಮೊದಲು ಮೈಸೂರಿನ ಕರ್ನಾಟಕ ಸಿಲ್ಕ್ ಕಾರ್ಖಾನೆಗೆ ಭೇಟಿ ನೀಡಿ ಮೈಸೂರು ಸಿಲ್ಕ್ ಸೀರೆಗಳು ಉತ್ಪಾದನೆಯಾಗುವ ಹಂತವನ್ನು ವೀಕ್ಷಿಸಿದರು. ನಂತರ ಮೈಸೂರಿನ ಹಾಲಿನ ಡೈರಿಗೆ ಭೇಟಿ ನೀಡಿ, ಹಾಲಿನ ಉತ್ಪನ್ನಗಳ ಉತ್ಪಾದನೆಯ ಬಗ್ಗೆ ವೀಕ್ಷಿಸಿದರು. ಹಾಗೆ ವ್ಯಾಕ್ಸ್ ಮ್ಯೂಸಿಯಂಗೆ ಭೇಟಿ ನೀಡಿ 1104 ರಿಂದ ಇಲ್ಲಿಯವರೆಗಿನ ಎಲ್ಲಾ ಸಂಗೀತ ವಾದ್ಯಗಳ ಸಂಗ್ರಹಾಲಯಕ್ಕೆ ಭೇಟಿ ನೀಡಿದರು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.