ಸೋಮವಾರಪೇಟೆ,ಫೆ.9: ಪ್ರತಿಷ್ಠಿತ ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹುಲ್ಲೂರಿಕೊಪ್ಪ ಮಾದಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬಿ.ಎಂ. ಈಶ್ವರ್ ನೇಮಕ ಗೊಂಡಿದ್ದಾರೆ.
ಸಂಘದ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಕೆ. ಮಾದಪ್ಪ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಎಂ. ಈಶ್ವರ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಚುನಾವಣಾಧಿಕಾರಿ ಗಳು ಈರ್ವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವದಾಗಿ ಪ್ರಕಟಿಸಿದರು.
ಕಳೆದ 3 ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಬಿ.ಡಿ. ಮಂಜುನಾಥ್ ಅವರ ಬಣ ಮತ್ತು ಕಳೆದ ಸಾಲಿನಲ್ಲಿ ಎರಡೂವರೆ ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಹೆಚ್.ಕೆ. ಮಾದಪ್ಪ ಅವರ ಬಣಗಳ ನಡುವೆ ಬಿರುಸಿನ ಚುನಾವಣೆ ನಡೆದಿದ್ದು, 13 ಸ್ಥಾನಗಳ ಪೈಕಿ 10 ಸ್ಥಾನಗಳನ್ನು ಹೆಚ್.ಕೆ. ಮಾದಪ್ಪ ಬಣದವರು ಗೆಲುವು ಸಾಧಿಸಿದ್ದರು.
ನೂತನ ಆಡಳಿತ ಮಂಡಳಿ ರಚನೆಯಾಗಿ, ಮಾದಪ್ಪ ಅವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಬೆಂಬಲಿಗರು ಪಟ್ಟಣದ ಜೇಸೀ ವೇದಿಕೆ ಬಳಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ನಿರ್ದೇಶಕರುಗಳಾದ ಜಿ.ಬಿ. ಸೋಮಯ್ಯ, ಕೆ.ಕೆ. ಚಂದ್ರಿಕಾ, ಬಿ.ಡಿ. ಮಂಜುನಾಥ್, ಪಿ.ಡಿ. ಮೋಹನ್ದಾಸ್, ಹೆಚ್.ಕೆ. ಚಂದ್ರಶೇಖರ್, ಬಿ.ಎಂ. ಸುರೇಶ್, ರೂಪ ಸತೀಶ್, ಪಿ.ಎ. ಅನಿತ, ಬಿ. ಶಿವಪ್ಪ, ಎಂ.ವಿ. ದೇವರಾಜು, ಬಿ.ಪಿ. ದಿವಾನ್ ಅವರುಗಳು ಉಪಸ್ಥಿತರಿದ್ದರು.