ಮಡಿಕೇರಿ, ಫೆ. 9: ಅಗ್ನಿ ಅನಾಹುತ ಸಂದರ್ಭಗಳಲ್ಲಿ ಹೇಗೆ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂಬ ಬಗ್ಗೆ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಅಣಕು ಪ್ರದರ್ಶನ (ತೆರವು) ಕಾರ್ಯಕ್ರಮ ನಡೆಯಿತು.

ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ. ಚಂದನ್ ಅವರ ನೇತೃತ್ವದಲ್ಲಿ ಅಣಕು ಪ್ರದರ್ಶನ ತೆರವು ಕಾರ್ಯಾಚರಣೆ ನಡೆಯಿತು.

ಆಕಸ್ಮಿಕವಾಗಿ ಸಂಭವಿಸುವ ತುರ್ತು ಸಂದರ್ಭಗಳಾದ ಭೂಕಂಪನ, ಅಗ್ನಿ ಅನಾಹುತ, ಇತರೆ ಸನ್ನಿವೇಶಗಳಲ್ಲಿ, ಶಾಲೆಗಳಲ್ಲಿ ತಂಡವನ್ನು ರಚಿಸಿಕೊಂಡು ನಿಗದಿತ ಅವಧಿಯೊಳಗೆ ಹಾಗೂ ಕನಿಷ್ಠ ಅವಧಿಯಲ್ಲಿ ಸುರಕ್ಷಿತವಾಗಿ ರಕ್ಷಿಸಿಕೊಳ್ಳುವ ವಿಧಾನದ ಬಗ್ಗೆ ಮಾಹಿತಿ ನೀಡಲಾಯಿತು.

ಇದರನ್ವಯ ಶಾಲಾ ಅವರಣದಲ್ಲಿ ಹುಸಿ ಅಗ್ನಿಕರೆ ಸೃಷ್ಟಿಸಿ ಶಿಕ್ಷಕರು ಹಾಗೂ ಮಕ್ಕಳು ರಚಿಸಿಕೊಂಡಿದ್ದ ತೆರವು ತಂಡ, ರಕ್ಷಣಾ ತಂಡ ಇದರೊಂದಿಗೆ ಅಗ್ನಿಶಾಮಕ ಮತ್ತು ಪ್ರಥಮ ಚಿಕಿತ್ಸಾ ತಂಡಗಳನ್ನು ಒಳಗೊಂಡಂತೆ 10 ತಂಡಗಳಲ್ಲಿ ಕಾರ್ಯನಿರ್ವಹಿಸಿ ಮಕ್ಕಳು ಮತ್ತು ಶಿಕ್ಷಕರನ್ನು 2 ನಿಮಿಷ 15 ಸೆಕೆಂಡುಗಳಲ್ಲಿ ಶಾಲೆಯಿಂದ ಸುರಕ್ಷಿತವಾಗಿ ತೆರವುಗೊಳಿಸುವ ಬಗ್ಗೆ ಅಣಕು ಪ್ರದರ್ಶನ ನಡೆಯಿತು.

ಶಿಸ್ತುಬದ್ಧ ಕಾರ್ಯಾಚರಣೆ ನಡೆಸಿದ ಶಾಲಾ ತಂಡದ ಬಗ್ಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಣಕು ಪ್ರದರ್ಶನದಲ್ಲಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಭಾಗಿಯಾಗಿದ್ದರು.