ಸೋಮವಾರಪೇಟೆ,ಫೆ.9: ಕೊಡಗಿನ ಕಾಫಿ ಬೆಳೆಗಾರರಿಗೆ ಅನುಕೂ ಕಲ್ಪಿಸುವ ನಿಟ್ಟಿನಲ್ಲಿ 10 ಹೆಚ್.ಪಿ.ವರೆಗೆ ಉಚಿತ ವಿದ್ಯುತ್ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ಆ ಮೇರೆಗೆ ಕ್ರಮ ವಹಿಸುವಂತೆ ಕೆ.ಆರ್.ಇ.ಸಿ. ವಿಭಾಗಕ್ಕೆ ಸರ್ಕಾರದಿಂದ ಪತ್ರ ಬರೆಯಲಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.

ತಾಲೂಕಿನ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಭೇಟಿ ನೀಡಿದ ಶಾಸಕರು, ಅಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

ರೈತರಿಗೆ 10 ಹೆಚ್.ಪಿ.ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಕೊಡಗಿನ ಕಾಫಿ ಬೆಳೆಗಾರರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕಾಫಿಯನ್ನು ವಾಣಿಜ್ಯ ಬೆಳೆ ಎಂದು ಪರಿಗಣಿಸಿರುವದೇ ಇದಕ್ಕೆ ಕಾರಣವಾಗಿದೆ. ಈ ಬಗ್ಗೆ ತಾವು ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದು, ಇತರ ಜಿಲ್ಲೆಗಳಲ್ಲಿ ಇರುವಂತೆ ಕೊಡಗಿನ ಬೆಳೆಗಾರರಿಗೂ 10 ಹೆಚ್.ಪಿ. ವರೆಗೆ ಉಚಿತ ವಿದ್ಯುತ್ ಒದಗಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ ಎಂದು ರಂಜನ್ ತಿಳಿಸಿದರು.

ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದ್ದು, ಸರ್ಕಾರದ ಮಟ್ಟದಿಂದ ಕೆಆರ್‍ಇಸಿ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ಅದರ ನಿಯಮಗಳಿಗೆ ತಿದ್ದುಪಡಿ ತಂದ ನಂತರ ಉಚಿತ ವಿದ್ಯುತ್ ಒದಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ತಾನೂ ಸಹ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.

ಹಂಡ್ಲಿ ವಿಎಸ್‍ಎಸ್‍ಎನ್‍ಗೆ ಸಂಬಂಧಿಸಿದಂತೆ 581 ಮಂದಿಗೆ ಮಾತ್ರ ಸಾಲಮನ್ನಾದ ಪ್ರಯೋಜನ ಲಭಿಸಿದ್ದು, ಉಳಿದವರು ಯೋಜನೆಯಿಂದ ವಂಚಿತರಾಗಿರುವ ಬಗ್ಗೆ ಸದಸ್ಯರು ಶಾಸಕರು ಗಮನ ಸೆಳೆದ ಸಂದರ್ಭ, ಉಳಿದಿರುವ 73 ಮಂದಿಗೆ ಸಾಲಮನ್ನಾ ಯೋಜನೆಯನ್ನು ವಿಸ್ತರಿಸಲು ಸಹಕಾರ ಸಚಿವರೊಂದಿಗೆ ಮಾತುಕತೆ ನಡೆಸುವದಾಗಿ ರಂಜನ್ ಭರವಸೆ ನೀಡಿದರು.

ಹಂಡ್ಲಿ ಪಂಚಾಯಿತಿಯ ಮಣಗಲಿ-ತಾಳೂರು ರಸ್ತೆಯನ್ನು 8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಒಳಪಡಿಸಲಾಗಿದೆ. ಮುಂದಿನ ಏಪ್ರಿಲ್‍ನಲ್ಲಿ ಜಿಲ್ಲೆಗೆ ಹೆಚ್ಚುವರಿ 100 ಕೋಟಿ ಅನುದಾನ ಬರಲಿದ್ದು, ಆದ್ಯತೆಯ ಮೇರೆಗೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸಲಾಗುವದು ಎಂದರು.

ಸಹಕಾರ ಸಂಘಗಳು ರಾಜಕೀಯ ರಹಿತವಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ತಮ್ಮ ಸಂಘದ ಸದಸ್ಯರ ಹಿತ ಕಾಪಾಡುವ ದರೊಂದಿಗೆ ಸಂಘವನ್ನೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು. ಸಹಕಾರ ಸಂಘಗಳು ಉಳಿದರೆ ಮಾತ್ರ ರೈತರು ಉಳಿಯಲು ಸಾಧ್ಯ ಎಂಬದನ್ನು ಮನಗಾಣಬೇಕು ಎಂದು ಶಾಸಕರು ಕಿವಿಮಾತು ನುಡಿದರು. ನಂತರ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ 5 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ಕಿತ್ತೂರು ಮುಖ್ಯರಸ್ತೆಯಿಂದ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ, ಕೊರಕಲು ಓಣಿಯಿಂದ ಸೋಮೇಶ್ವರ ದೇವಾಲಯ ರಸ್ತೆ, ಮಣಗಲಿ ರಸ್ತೆ, ಹೆಬ್ಬುಲುಸೆ ದೇವಸ್ಥಾನ ರಸ್ತೆ, ಹಿಪ್ಲಿ ಗೇಟ್‍ನಿಂದ ಸಂಪಿಗೆದಾಳು ರಸ್ತೆ, ಸಿಡಿಗಳಲೆ ಲಿಂಗರಾಜು ಮನೆಯಿಂದ ಮಠದ ರಸ್ತೆ, ಗುಡುಗಳಲೆ ಮುಖ್ಯರಸ್ತೆಯಿಂದ ಊರೊಳಗಿನ ರಸ್ತೆ, ಮಳೆಯಿಂದ ಹಾನಿಗೀಡಾದ ಕಾಂತರಾಜ್ ಮನೆ ರಸ್ತೆ, ಹಿಪ್ಲಿ ಗೇಟ್ ಸಮೀಪದ ಮಳೆಯಿಂದ ಹಾನಿಗೀಡಾದ ರಸ್ತೆ (8ಲಕ್ಷ) ಮತ್ತು ತಲಾ 10 ಲಕ್ಷ ವೆಚ್ಚದಲ್ಲಿ ಮಣಗಲಿ ಮತ್ತು ಹಂಡ್ಲಿ ಅಂಗನವಾಡಿ ದುರಸ್ತಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.

ಈ ಸಂದರ್ಭ ಹಂಡ್ಲಿ ಪಿಎಸಿಎಸ್ ಅಧ್ಯಕ್ಷ ವೀರೇಂದ್ರ, ಗ್ರಾ.ಪಂ. ಅಧ್ಯಕ್ಷ ಸಂದೀಪ್, ತಾ.ಪಂ. ಸದಸ್ಯ ಕುಶಾಲಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಸ್ಥಾನೀಯ ಸಮಿತಿ ಅಧ್ಯಕ್ಷ ನಿರಂಜನ್, ಪ್ರಮುಖರಾದ ವಿನೂತ್ ಶಂಕರ್, ಕೆ.ವಿ. ಪರಮೇಶ್, ಪುಟ್ಟಸ್ವಾಮಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.