ಮಡಿಕೇರಿ, ಫೆ. 9: ನಿತ್ಯ ಹರಿದ್ವರ್ಣದಿಂದ ಕೂಡಿರುವ ಪ್ರಕೃತಿ ರಮಣೀಯ ಗಿರಿಕಂದರ ನಡುವೆ; ಅಪರೂಪದ ಶಿವಾಲಯವೊಂದು; ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಬೆಸೆದುಕೊಂಡಿರುವ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಲ್ಲುವಿನಲ್ಲಿ ಗೋಚರಿಸುತ್ತದೆ. ಇಲ್ಲಿ ಸ್ವಯಂ ಉದ್ಭವ ಶಿವಲಿಂಗದೊಂದಿಗೆ; ಸಹಸ್ರಮಾನಗಳ ಇತಿಹಾಸದಲ್ಲಿ ಈ ವನಮೂರ್ತಿಗೆ ಬ್ರಾಹ್ಮಣರು ಪೂಜೆಗೈಯ್ಯುವದರೊಂದಿಗೆ; ಅಲ್ಲಿನ ಪಂಚಲಿಂಗೇಶ್ವರ ದೇವಾಲಯಕ್ಕೆ ಅವಿನಾಭಾವ ಸಂಬಂಧ ಕಂಡುಬರುತ್ತದೆ.ಕಾಲಚಕ್ರ ಉರುಳುವದ ರೊಂದಿಗೆ; ಶಿವಾಲಯವು ಬ್ರಾಹ್ಮಣ ಸಂತತಿಯ ಅಳಿವಿನೊಂದಿಗೆ; ನಿತ್ಯಪೂಜೆ ನಿಂತುಹೋಗಿದೆ. ಪರಿಣಾಮ ಒಂದೊಮ್ಮೆ ಸಂಪೂರ್ಣ ಕಾಡುಪಾಲಾಗಿದ್ದು; ಅಲ್ಲಿ ಕ್ಷೇತ್ರ ದೇವನಾದ ಶ್ರೀ ಅಯ್ಯಪ್ಪನಿಗೆ ಅರಣ್ಯವಾಸಿಗಳು ಪೂಜಿಸುತ್ತಾ ಬಂದಿರುವ ವಿಚಾರ ತಿಳಿಯಲಿದೆ. ಈ ಅಪರೂಪದ ದೇವನೆಲೆಯಲ್ಲಿ; ಕೊಡಗು ಜಿಲ್ಲೆಯ ಗಾಳಿಬೀಡು ನಿವಾಸಿಗಳಾದ

(ಮೊದಲ ಪುಟದಿಂದ) ಪಾಂಡಿರ ಕೊಡವ ಕುಟುಂಬದ ತಕ್ಕಾಮೆಯೊಂದಿಗೆ ಅಯ್ಯಪ್ಪ ದೇವರ ಉತ್ಸವಾದಿಗಳು ಜರುಗಲಿದೆ. ಅಂತೆಯೇ ಕುಡಿಯ ಕುಟುಂಬವು ದೇವರ ಭಂಡಾರವನ್ನು ಕಾಯ್ದಿರಿಸಿಕೊಂಡು; ದೇವರ ದರುಶನ (ತಿರುವಾಳ) ನೀಡುತ್ತಾ ಬರುತ್ತಿರುವದು ಕಂಡು ಬರಲಿದೆ. ಮತ್ತಷ್ಟು ವಿಶೇಷವೆಂದರೆ; ಸಂಪಾಜೆ ಘಟ್ಟಸೀಮೆಯ ಕುಪ್ಪೇಟಿಮನೆ ಗೌಡ ಕುಟುಂಬಸ್ಥರು ಈ ದೇವರಿಗೆ ಮಾಸಿಕ ಹಾಗೂ ವಾರ್ಷಿಕ ಪೂಜೆ ನೆರವೇರಿಸುತ್ತಿರುವದಾಗಿದೆ.

ಈಗಷ್ಟೇ ಕುಂಟಾರು ವಾಸುದೇವತಂತ್ರಿ ಹಾಗೂ ರವೀಶ್ ತಂತ್ರಿಗಳ ನೇತೃತ್ವದಲ್ಲಿ; ಅರೆಕಲ್ಲುವಿನ ಕಾನನದೊಳಗೆ; ನೆಲೆಸಿರುವ ಈ ದೇವರಿಗೆ; ಪುನರ್ ಪ್ರತಿಷ್ಠ್ಠೆಯೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರುಗಿದ್ದು; ಶ್ರೀ ಅರೆಕಲ್ಲು ಅಯ್ಯಪ್ಪ ಹಾಗೂ ಪರಿವಾರ ದೈವಗಳಿಗೆ ವಿಭಿನ್ನ ಇತಿಹಾಸದ ಕತೆಗಳಿವೆ.

ದೇವಸೃಷ್ಟಿ : ಸಾಕ್ಷಾತ್ ಕಾಲಾತೀತನಾದ ಶಿವನು ಕಿರಾತರೂಪದಲ್ಲಿ ಕಾನನ ನಡುವೆ ಕೃತಯುಗದಲ್ಲಿ; ಈ ಭೂ ಪ್ರದೇಶದೊಳಗೆ ಸಂಚರಿಸುವದರೊಂದಿಗೆ; ಋಷಿಮುನಿಗಳಿಂದ ಪೂಜೆಗೊಂಡು; ಸಂಪ್ರೀತನಾಗಿ ಅರೆಕಲ್ಲುವಿನ ಸುಂದರ ತಾಣದಲ್ಲಿ ಲಿಂಗರೂಪಿಯಾಗಿ ನಿಂತನೆಂಬ ಪ್ರತೀತಿಯಿದೆ. ಅಂತೆಯೇ ಶಿವನೊಂದಿಗೆ ಕ್ಷೇತ್ರದೇವನಾಗಿ ಅಯ್ಯಪ್ಪನೂ ನೆಲೆಸುತ್ತಾ; ಭಕ್ತರನ್ನು ಅನುಗ್ರಹಿಸತೊಡಗಿದ್ದಾಗಿದೆ. ಮಾತ್ರವಲ್ಲದೆ ದೈವಗಳಾದ ವಿಷ್ಣುಮೂರ್ತಿ, ಅನತಿ ದೂರದ ಬನದಲ್ಲಿ ಚಾಮುಂಡಿಯೂ ನೆಲೆಸಿರುವ ಪ್ರತೀತಿಯಿದೆ.

ಭಕ್ತನಿಗೂ ಸ್ಥಾನ : ಇನ್ನೊಂದು ಉಪಕತೆಯ ಪ್ರಕಾರ; ಗಾಳಿಬೀಡುವಿನ ತಕ್ಕಾಮೆ ಕುಟುಂಬದ ಸೌಂದರ್ಯವತಿ ಅರಸಿಯೊಬ್ಬಳನ್ನು ಲಿಂಗಾಯಿತನೊಬ್ಬ ವರಿಸಿದ್ದು; ಆಕೆಯ ಮೇಲೆ ಕಣ್ಣಿರಿಸಿದ ಬಲ್ಲಾಳÀ ಅರಸ; ಪತಿಯನ್ನು ಕೊಲ್ಲುವ ಸಂಚು ನಡೆಸಿದ್ದಾಗಿ ತಿಳಿದು ಬರಲಿದೆ. ಈ ವೇಳೆ ಅರೆಕಲ್ಲುವಿನ ಕಾಡಿನ ನಡುವೆ ಜೀವನ್ಮರಣ ಸ್ಥಿತಿಯಲ್ಲಿದ್ದ ಆ ಲಿಂಗಾಯಿತನನ್ನು ರಕ್ಷಿಸಿರುವ ಅಯ್ಯಪ್ಪ; ಕಾಲಾಂತರದಲ್ಲಿ ಅವನಿಗೊಂದು ನೆಲೆ ಕಲ್ಪಿಸಿದ್ದರಿಂದ; ‘ನೈದ ಪಾಂಡಿ ಪೂವತ್ತಮಾರ್’ ಹೆಸರಿನಲ್ಲಿ ಸ್ಮರಣೆಗೊಳ್ಳುತ್ತಿರುವದಾಗಿ ಭಕ್ತರ ನಂಬಿಕೆ. ಅಂತೆಯೇ ತುಳುನಾಡಿನ ಪುರುಷರಾಯ ದೈವಕ್ಕೂ ಅರೆಕಲ್ಲುವಿನಲ್ಲಿ ಸ್ಥಾನ ಕಲ್ಪಿಸಲಾಗಿದೆ. ಈ ಎಲ್ಲಾ ವಿಶೇಷತೆಗಳೊಂದಿಗೆ ತುಳುನಾಡು ಹಾಗೂ ಕೊಡಗಿನ ಸಂಬಂಧಗಳನ್ನು ಬೆಸೆದುಕೊಂಡಿರುವ ಅರೆಕಲ್ಲುವಿನಲ್ಲಿ ವಿಭಿನ್ನ ಸಂಪ್ರದಾಯದ ಭಕ್ತರು ಒಗ್ಗೂಡಿ ದೇವತಾರಾಧನೆ ಕೈಗೊಳ್ಳುವಂತಾಗಿದೆ ಎಂಬದು ವಿಶೇಷ.

ದೇಗುಲ ಮಾರ್ಗ : ಸಂಪಾಜೆಯಿಂದ 7 ಕಿ.ಮೀ. ರಸ್ತೆ ಮಾರ್ಗವಾಗಿ ಅರಣ್ಯದ ಮೂಲಕ ಅರೆಕಲ್ಲುವಿಗೆ ಸುಗಮ ಹಾದಿ ಇದೆ. ಅಲ್ಲಲ್ಲಿ ಅರಣ್ಯ ಇಲಾಖೆ ಮಾರ್ಗ ಬದಿ ಫಲಕ ಅಳವಡಿಸಿ; ಕಾಡಾನೆಗಳ ಕುರಿತು ಎಚ್ಚರಿಸಿದೆ. ಇಂತಹ ಕಾಡಿನೊಳಗೆ ಗಾಳಿಬೀಡುವಿನಿಂದ ದೇವರ ಭಂಡಾರವನ್ನು ಸುಮಾರು 28 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ಕೊಂಡೊಯ್ಯುವದು ಈ ದೇವರ ಮಹಿಮೆಯೊಂದಿಗೆ ಭಕ್ತಿಗೂ ಸಾಕ್ಷಿ ಎನ್ನಬಹುದು. ಪ್ರತಿ ತಿಂಗಳು ಸಂಕ್ರಮಣದಂದು ಇಲ್ಲಿ ಮಾಸಿಕ ಪೂಜೆಯಿದೆ. ಅಂತೆಯೇ ಮಾರ್ಚ್ 2 ರಿಂದ 18ರ ತನಕ ಪ್ರತಿವರ್ಷ ಕೊಡಗು - ದಕ್ಷಿಣ ಕನ್ನಡದ ಗ್ರಾಮೀಣ ಭಕ್ತರು ಶ್ರೀ ಅರೆಕಲ್ಲು ಅಯ್ಯಪ್ಪ ದೇವರ ವಾರ್ಷಿಕೋತ್ಸವವನ್ನು ನಡೆಸಿಕೊಂಡು ಬರುತ್ತಿರುವದು ಐತಿಹಾಸಿಕ ಸತ್ಯವಷ್ಟೆ, ಅದು ದೈವ ಲೀಲೆಯೇ ಸರಿ.

- ಶ್ರೀಸುತ