ಸೋಮವಾರಪೇಟೆ, ಫೆ. 9: ತಾಲೂಕು ಒಕ್ಕಲಿಗರ ಯುವವೇದಿಕೆ ಮತ್ತು ರಾಜ್ಯ ಹಾಗೂ ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ‘ಕಬಡ್ಡಿ ಹಬ್ಬ’ದಲ್ಲಿ, ಜಿಲ್ಲಾಮಟ್ಟದ ಪಂದ್ಯಾಟದಲ್ಲಿ ಕುಶಾಲನಗರದ ಜೆಬಿಎಸ್‍ಸಿ ತಂಡ ಒಕ್ಕಲಿಗರ ಕಬಡ್ಡಿ ಕಪ್‍ನ್ನು ತನ್ನದಾಗಿಸಿಕೊಂಡಿತು.ರಾಜ್ಯಮಟ್ಟದ ಆಟಗಾರರೊಂದಿಗೆ ಸ್ಥಳೀಯ ಕಬಡ್ಡಿ ಕ್ರೀಡಾಪಟುಗಳಿಗೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ಒಕ್ಕಲಿಗರ ಯುವ ವೇದಿಕೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಅಮೋಘ ಆಟ ಪ್ರದರ್ಶಿಸಿದ ಜೆಬಿಎಸ್‍ಸಿ ತಂಡವು, ತೊರೆನೂರಿನ ಟಿಡಿಎಫ್‍ಸಿ ತಂಡದ ವಿರುದ್ಧ ಗೆದ್ದು, ರೂ. 10 ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿಯನ್ನು ಮುಡಿಗೇರಿಸಿ ಕೊಂಡಿತು.

ಇದೇ ಪ್ರಥಮ ಬಾರಿಗೆ ಮ್ಯಾಟ್‍ನಲ್ಲಿ ನಡೆದ ಪಂದ್ಯಾವಳಿಯ ಪ್ರಥಮ ಸೆಮಿಫೈನಲ್‍ನಲ್ಲಿ ಟಿಡಿಎಫ್‍ಸಿ ತಂಡವು ಒಕ್ಕಲಿಗರ ಯುವ ವೇದಿಕೆ ಬಿ. ತಂಡವನ್ನು 14-6 ಅಂಕಗಳ ಅಂತರದಿಂದ ಸೋಲಿಸಿತು. 2ನೇ ಸೆಮಿಫೈನಲ್‍ನಲ್ಲಿ ಒಕ್ಕಲಿಗರ ಯುವ ವೇದಿಕೆ ಎ. ತಂಡವು ಜೆಬಿಎಸ್‍ಸಿ ತಂಡದ ವಿರುದ್ಧ 24-12 ಅಂಕಗಳೊಂದಿಗೆ ಪರಾಭವ ಗೊಂಡಿತು.

ನಂತರ ನಡೆದ ಫೈನಲ್ ಪಂದ್ಯಾಟದಲ್ಲಿ ಜೆ.ಬಿ.ಎಸ್.ಸಿ. ಕುಶಾಲನಗರ ತಂಡವು ಸಂಘಟನಾತ್ಮಕ ಆಟ ಪ್ರದರ್ಶಿಸುವ ಮೂಲಕ ಟಿಡಿಎಫ್‍ಸಿ ತಂಡವನ್ನು 23-15 ಅಂಕಗಳೊಂದಿಗೆ ಮಣಿಸಿ, ಕಬಡ್ಡಿ ಕಪ್‍ನ್ನು ತನ್ನದಾಗಿಸಿಕೊಂಡಿತು.

ಕಬಡ್ಡಿ ಪಂದ್ಯಾಟದ ತೀರ್ಪುಗಾರ ರಾಗಿ ಕೊಡಗು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‍ನ ತೀರ್ಪುಗಾರ ರಾದ ಗೌಡಳ್ಳಿ ಪ್ರವೀಣ್, ತಾಕೇರಿ ಅಮೃತ್, ಬಳಗುಂದ ರಮೇಶ್, ಶನಿವಾರಸಂತೆ (ಮೊದಲ ಪುಟದಿಂದ) ಆದರ್ಶ್, ಶಿರಂಗಾಲ ಮಧು, ತೊರೆನೂರು ನಿಶಾಂತ್, ಜಿ.ಎಸ್.ಶೈಲ, ಬಿ.ಜಿ. ರಾಗಿಣಿ ಅವರುಗಳು ಕಾರ್ಯನಿರ್ವಹಿಸಿದರು.

ಫೈನಲ್ ಪಂದ್ಯಾಟಕ್ಕೆ ಚಾಲನೆ: ಫೈನಲ್ ಪಂದ್ಯಾಟಕ್ಕೆ ಆದಿಚುಂಚನಗಿರಿ ಹಾಸನ ಶಾಖಾ ಮಠಾಧೀಶರಾದ ಶ್ರೀಶಂಭುನಾಥ ಸ್ವಾಮೀಜಿ ಚಾಲನೆ ನೀಡಿದರು.

ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಜೆಬಿಎಸ್‍ಸಿ ತಂಡಕ್ಕೆ ಪ್ರಥಮ ಬಹುಮಾನವಾಗಿ 10 ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಟಿಡಿಎಫ್‍ಸಿ ತಂಡಕ್ಕೆ 5 ಸಾವಿರ ನಗದು ಮತ್ತು ಟ್ರೋಫಿ ವಿತರಿಸಲಾಯಿತು.

ಈ ಸಂದರ್ಭ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್, ಗೌಡಳ್ಳಿ ಪಿಎಸಿಎಸ್ ಅಧ್ಯಕ್ಷ ಹೆಚ್.ಆರ್. ಸುರೇಶ್, ವೇದಿಕೆಯ ಪದಾಧಿಕಾರಿಗಳಾದ ಪಿ.ಕೆ. ರವಿ. ಹೆಚ್.ಕೆ. ಪ್ರಸ್ಸಿ, ಪ್ರೀತಮ್, ಡಿವೈಎಸ್‍ಪಿ ಶೈಲೇಂದ್ರ, ಕುಶಾಲನಗರದ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ರಾಜ್ಯಮಟ್ಟದ ಪಂದ್ಯಾಟದಲ್ಲಿ: ಸಂಜೆ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಪಂದ್ಯಾಟದಲ್ಲಿ ಒಕ್ಕಲಿಗರ ಯುವ ವೇದಿಕೆ ತಂಡವನ್ನು ಧಾರವಾಡದ ಜಿಲ್ಲಾ ತಂಡ 12-7 ಅಂಕಗಳೊಂದಿಗೆ ಮಣಿಸಿತು. ಶಿವಮೊಗ್ಗ ತಂಡದ ವಿರುದ್ಧ ಹೆಚ್‍ಎಂಟಿ ಕಾಲೋನಿ ಬಾಯ್ಸ್ ಬೆಂಗಳೂರು ತಂಡ 19-15 ಅಂಕಗಳೊಂದಿಗೆ ಸೋಲನುಭವಿಸಿತು. ಎಸ್‍ಡಿಎಂ ಉಜಿರೆ ಮತ್ತು ಭೂಮಿ ತುಮಕೂರು ತಂಡಗಳ ನಡುವಿನ ಪಂದ್ಯಾಟದಲ್ಲಿ ಉಜಿರೆ ತಂಡ 31-21 ಅಂಕಗಳಿಂದ ಜಯ ಗಳಿಸಿತು. ಹಾಸನದ ಹಾಸನಾಂಭ ಮತ್ತು ಚಿಕ್ಕಮಗಳೂರು ತಂಡಗಳ ನಡುವಿನ ಪಂದ್ಯಾಟದಲ್ಲಿ 29-18 ಅಂಕಗಳೊಂದಿಗೆ ಚಿಕ್ಕಮಗಳೂರು ಜಿಲ್ಲೆ ವಿಜಯ ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದವು.