ವೀರಾಜಪೇಟೆ, ಫೆ. 9: ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಬೇಸಿಗೆ ಕಾಲದಲ್ಲಿ ನೀರನ್ನು ಮಿತವಾಗಿ ಬಳಸುವುದು ಉತ್ತಮ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.
ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೇರ ಕುಟುಂಬದವರು ದಾನವಾಗಿ ನೀಡಿದ ಜಾಗದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಿಂದ ಕಿರುನೀರು ಯೋಜನೆಯಲ್ಲಿ ಬೋರ್ವೇಲ್ ಮೂಲಕ ಪೈಪ್ ಅಳವಡಿಸಿ ಮನೆಗಳಿಗೆ ನೀರಿನ ಸೌಲಭ್ಯ ನೀಡುವ ಮೋಟರ್ನ್ನು ಉದ್ಘಾಟನೆಗೊಳಿಸಿ ಅವರು ಮಾತನಾಡಿದರು. ಕುಂಜಲಗೇರಿ, ಬೇತ್ರಿ ಹಾಗೂ ಬೊಳ್ಳುಮಾಡು ಗ್ರಾಮಕ್ಕೂ ಕಿರುನೀರು ಯೋಜನೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ನೀಡಲಾಗುವುದು. ಗ್ರಾಮಸ್ಥರು ನೀರನ್ನು ಮಿತವಾಗಿ ಬಳಸುವಂತಾಗಬೇಕು ಎಂದರು.
ಈ ಸಂದರ್ಭ ಕಾಕೋಟುಪರಂಬು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋಹಿನಿ, ಸದಸ್ಯರಾದ ಮಂಡೇಟಿರ ಅನಿಲ್ ಅಯ್ಯಪ್ಪ, ಕಳ್ಳಿರ ಸುಮತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೀಪ, ಗ್ರಾಮಸ್ಥರಾದ ಕಟ್ಟೇರ ಕುಶಾಲಪ್ಪ, ಕಳ್ಳಿರ ಪೂಣಚ್ಚ, ಪ್ರತಾಪ್ ಪೊನ್ನಪ್ಪ, ಮಂಡೇಟಿರ ಪೊನ್ನಪ್ಪ, ಮತ್ತು ಕಾಳಪ್ಪ, ಮುಲ್ಲೇರ ಮಂಜುನಾಥ್, ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು.