ಕಣಿವೆ, ಫೆ. 9: ಕೂಡ್ಲೂರು ಶಾಲೆಯ ಬಳಿ ಕಲ್ಲುಕೋರೆಯಲ್ಲಿ ಕೈಕಾಲು ತೊಳೆಯುವ ವೇಳೆ ಬಾಲಕನೊಬ್ಬ ಆಕಸ್ಮಿಕ ಸಾವಿಗೀಡಾಗಿರುವ ದುರ್ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.
ಕುಶಾಲನಗರದ ಸುಂದರನಗರ ನಿವಾಸಿ ಹಾಗೂ ಕಾರ್ಮಿಕ ರವಿ ಎಂಬವರ ಪುತ್ರ ದಿಗಂತ್ ಮೃತ ದುರ್ದೈವಿ. ಸ್ನೇಹಿತರೊಂದಿಗೆ ಆಟವಾಡುತ್ತಾ, ಕೈಕಾಲು ಮಣ್ಣಾಗಿದ್ದರಿಂದ ಕೋರೆಯಲ್ಲಿ ನಿಂತಿರುವ ನೀರಿನಲ್ಲಿ ತೊಳೆಯುವ ವೇಳೆ ಈ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದು ಪೋಷಕರು ನೀಡಿರುವ ದೂರಿನ ಮೇರೆಗೆ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಮಹೇಶ್, ಗ್ರಾಮಾಂತರ ಠಾಣಾಧಿಕಾರಿ ನಂದೀಶ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು. -ಮೂರ್ತಿ