ಮಡಿಕೇರಿ, ಫೆ. 9: ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣವಾದ ರಾಜಾಸೀಟು ಉದ್ಯಾನವನದಲ್ಲಿ ತೋಟಗಾರಿಕಾ ಇಲಾಖೆ ಹಾಗೂ ರಾಜಾಸೀಟು ಅಭಿವೃದ್ಧಿ ಸಮಿತಿಯ ಮೂಲಕ ಏರ್ಪಡಿಸಿರುವ ವಾರ್ಷಿಕ ಫಲಪುಷ್ಪ ಪ್ರದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಪುಷ್ಪಪ್ರಿಯರು ಭೇಟಿ ನೀಡುತ್ತಿದ್ದಾರೆ. ಅರಳಿ ನಿಂತಿರುವ ಹೂಗಳು, ವಿವಿಧ ಕತ್ತನೆಗಳ ಮಾದರಿಗಳು, ಈ ಬಾರಿಯ ವಿಶೇಷ ಆಕರ್ಷಣೆಯಾಗಿರುವ ಹೂವಿನಿಂದ ಮಾಡಿರುವ ‘ಐನ್‍ಮನೆ’ಯ ವೀಕ್ಷಣೆಯೊಂದಿಗೆ ಫೋಟೋ, ವೀಡಿಯೋಗಳನ್ನು ಮಾಡುತ್ತಾ ನೆನಪನ್ನು ದಾಖಲಿಸಿಕೊಳ್ಳುತ್ತಿರುವದು ಸಾಮಾನ್ಯ ದೃಶ್ಯವಾಗಿದೆ.ತಾ.7ರ ಸಂಜೆಯಿಂದ ತಾ. 9ರ ತನಕ ಸುಮಾರು 50 ಸಾವಿರದಷ್ಟು ಮಂದಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಶಾಲಾಮಕ್ಕಳು, ಸ್ಥಳೀಯರು ಸೇರಿದಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಿರ ಬಹುದೆಂದು ಅಂದಾಜಿಸಲಾಗಿದೆ.
ಐನ್‍ಮನೆಯ ಎದುರು ಭಾಗ, ಸೆಲ್ಫಿ ಫೋಟೋ ಫ್ರೇಂ.. ಸ್ಥಳದಲ್ಲಿ ಹೆಚ್ಚು ಜನಸಂದಣಿ ಫೋಟೋ ಕ್ಲಿಕ್ಕಿಸಿಕೊಳ್ಳಲು ನಾಮುಂದು, ತಾಮುಂದು ಎಂಬಂತೆ ಮುಗಿಬೀಳುತ್ತಿದ್ದಾರೆ. ವೀರಾಜಪೇಟೆ ಸನಿಹದಲ್ಲಿರುವ ಪುಟ್ಟಿಚಂಡ ಕುಟುಂಬಕ್ಕೆ ಸೇರಿದ ಐನ್‍ಮನೆಯ ಮಾದರಿಯನ್ನು ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ವಿಶೇಷವಾಗಿ ಬಳಸಿಕೊಳ್ಳಲಾಗಿದೆ.
ಗಾಂಧಿ ಮೈದಾನದಲ್ಲಿ ವಿವಿಧ ಬಗೆಯ ಸ್ಟಾಲ್‍ಗಳು ನಿರ್ಮಾಣ ವಾಗಿದ್ದು; ಇಲ್ಲಿಯೂ ಭರ್ಜರಿ ವ್ಯಾಪಾರ ವಹಿವಾಟು ನಡೆದಿದೆ. ಸುಮಾರು 46 ಸ್ಟಾಲ್‍ಗಳ ಪೈಕಿ 20 ಸ್ಟಾಲ್‍ಗಳು ಕೇವಲ ತೋಟಗಾರಿಕೆಗೆ ಸಂಬಂಧಿಸಿದ್ದಾಗಿದ್ದು; ಹೂಗಿಡಗಳು ಸೇರಿದಂತೆ ಇನ್ನಿತರ ನರ್ಸರಿ ಗಿಡಗಳು, ಉಪಕರಣಗಳನ್ನು ಪುಷ್ಪ ಪ್ರಿಯರು ಖರೀದಿಸುತ್ತಿದ್ದಾರೆ. ಕೆಲವಾರು ಸ್ಟಾಲ್‍ಗಳಲ್ಲಿ ಇದ್ದ ವಸ್ತುಗಳು - ಗಿಡಗಳು ಖಾಲಿಯಾಗಿ ನಿನ್ನೆ ರಾತೋರಾತ್ರಿ ಕೇರಳ, ಬೆಂಗಳೂರು ಕಡೆಗಳಿಂದ ಸ್ಟಾಲ್ ಇಟ್ಟಿರುವವರು (ಮೊದಲ ಪುಟದಿಂದ) ತರಿಸಿಕೊಂಡಿರುವದಾಗಿ ಆಯೋಜಕರು ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಸಂಜೆವೇಳೆ ಮುದ ನೀಡುತ್ತಿದ್ದು; ಪ್ರವಾಸಿಗರಿಗೆ ಇದೂ ಕೂಡ ವಿಶೇಷವಾದ ಸಂಭ್ರಮವಾಗಿದೆ. ತಾ. 7 ರಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ತಾ. 8 ರಂದು ಕೊಡವ ಅಕಾಡೆಮಿ, ತಾ. 9 ರಂದು ಅರೆಭಾಷೆ ಅಕಾಡೆಮಿಯ ಮೂಲಕ ಸಾಂಸ್ಕøತಿಕ ಕಾರ್ಯಕ್ರಮ ಜರುಗಿವೆ. ಇದರೊಂದಿಗೆ ಅಂತಿಮವಾಗಿ ಕೊಡವ ವಾಲಗದ ನಿನಾದಕ್ಕೂ ಕಲಾವಿದರೂ, ಪ್ರವಾಸಿಗರು, ಹೆಜ್ಜೆ ಹಾಕುವ ಮೂಲಕ ಉದ್ಯಾನವನದ ವ್ಯಾಪ್ತಿಯಲ್ಲಿ ಹಬ್ಬದ ವಾತಾವರಣ ಮೂಡಿದೆ. ವಾರ್ಷಿಕ ಫಲಪುಷ್ಪ ಪ್ರದರ್ಶನಕ್ಕೆ ತಾ. 10 ರಂದು (ಇಂದು) ತೆರೆಬೀಳಲಿದೆ. -ಶಶಿ