ಸುಂಟಿಕೊಪ್ಪ, ಫೆ. 9: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರದ ವಿಶೇಷ ಪ್ಯಾಕೇಜ್‍ನಡಿ, ಜಿ.ಪಂ., ತಾ.ಪಂ. ಅನುದಾನದಡಿ ನಿರ್ಮಿಸಲಾದ ಬಯಲು ರಂಗಮಂದಿರ, ಸಮುದಾಯ ಭವನ ಅಡುಗೆಕೋಣೆ, ಗ್ರಾಮ ವಿಕಾಸ ಯೋಜನೆ ಕಟ್ಟಡದ ಉದ್ಘಾಟನೆ ಹಾಗೂ ವಿವಿಧೆಡೆ ರಸ್ತೆ ತಡೆಗೋಡೆ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿ ಸಿದರು. ಆನಂತರ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯ ಮಂತ್ರಿಯಾದ ನಂತರ ಪ್ರಕೃತಿ ವಿಕೋಪ ಸೇರಿದಂತೆ ಕೊಡಗಿನ ಅಭಿವೃದ್ಧಿಗೆ ಬೇಡಿಕೆ ಮುಂದಿಟ್ಟಾಗ ರೂ. 536 ಕೋಟಿ ಪ್ಯಾಕೇಜ್‍ಗೆ ಒಪ್ಪಿದ್ದು, ರೂ. 100 ಕೋಟಿಯ ಕಾಮಗಾರಿ ನಡೆಯುತ್ತಿದೆ. ಇನ್ನೂ ರೂ. 200 ಕೋಟಿ ಬಿಡುಗಡೆ ಗೊಳಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು. ಪ್ರತಿ ಗ್ರಾಮ ಪಂಚಾಯಿತಿಗೆ ರೂ. 1 ಕೋಟಿ 20 ಲಕ್ಷ ಅನುದಾನ ವಿನಿಯೋಗಿಸ ಲಾಗುತ್ತಿದೆ. ಹಾಲೇರಿಗೆ ತಡೆಗೋಡೆಗೆ ರೂ. 20 ಲಕ್ಷ, ಹೊರೂರು-ಮೋದೂರು ರಸ್ತೆಗೆ ರೂ. 5 ಲಕ್ಷ, ಕೊರ್ತಿಕಾಡು ಆರಿಯನ ಮನೆ ರೂ. 5 ಲಕ್ಷ, ಆರಿಯಮನೆ ಬೀಟಿಕಾಡು ರೂ. 5 ಲಕ್ಷ, ವಿಕ್ರಂ ಬಡಾವಣೆಗೆ ರೂ. 5 ಲಕ್ಷ, ಕಾಂಡನಕೊಲ್ಲಿ ಹಾಲೇರಿ ರಸ್ತೆ ರೂ. 8 ಲಕ್ಷ, ಮೋದೂರು-ಕಡಂದಾಳು ರೂ. 5 ಲಕ್ಷ, ಹಾಲೇರಿ ಪ್ಯಾಲೇಸ್ ರೂ. 5 ಲಕ್ಷ, ಹಾಲೇರಿ ಸೇತುವೆ ರೂ. 8 ಲಕ್ಷ ಸೇರಿದಂತೆ ರೂ. 71 ಲಕ್ಷಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಪ್ರಕೃತಿ ವಿಕೋಪದಿಂದ ಹಾಳಾದ ಪಾಪ್ಲಿಕಾಡು ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರೂ. 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದೆಂದು ಶಾಸಕರು ಹೇಳಿದರು. ಜಿ.ಪಂ. ಸದಸ್ಯ ಕೆ.ಪಿ. ಚಂದ್ರಕಲಾ ಮಾತನಾಡಿ, ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಮಾಡಬಾರದು. ಜಿ.ಪಂ. ಅಧ್ಯಕ್ಷರು, ಸದಸ್ಯರುಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಶಾಸಕರು ಜಿ.ಪಂ. ಅಧ್ಯಕ್ಷರಿಗೆ ಕಿವಿಮಾತು ಹೇಳಿ ಇದನ್ನು ಸರಿಪಡಿಸಬೇಕೆಂದು ಹೇಳಿದರು.
ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ತನ್ನ ಕ್ಷೇತ್ರದಲ್ಲಿ ಗ್ರಾಮಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದರು. ಗ್ರಾ.ಪಂ. ಅಧ್ಯಕ್ಷ ಬಿ.ಎಸ್. ಬಾಲಕೃಷ್ಣ ರೈ ಮಾತನಾಡಿ, ಶಾಸಕರ ನಿಧಿಯಿಂದ ರೂ. 75 ಲಕ್ಷ, 14ನೇ ಹಣಕಾಸು ಅನುದಾನ, ಜಿ.ಪಂ., ತಾ.ಪಂ., ಗ್ರಾ.ಪಂ. ಅನುದಾನದಿಂದ ರಸ್ತೆ, ತಡೆಗೋಡೆ, ಕುಡಿಯುವ ನೀರಿನ ಕೆಲಸ ಮಾಡಲಾಗಿದೆ.