ಮಡಿಕೇರಿ, ಏ. 17: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪುರಸಭೆಯ ವ್ಯಾಪ್ತಿಯಲ್ಲಿ ತರಕಾರಿ ಮಾರಾಟಕ್ಕೆ ಅನುಮತಿ ಹೊಂದಿರುವ ಎರಡು ವಾಹನಗಳು, ನಿಯಮ ಬಾಹಿರವಾಗಿ ಕೊಡಗಿಗೆ ಆಗಮಿಸಿರುವ ಸುಳಿವಿನ ಮೇರೆಗೆ, ಕಡಗದಾಳು ಗ್ರಾ.ಪಂ.ನಿಂದ ದಂಡ ವಿಧಿಸಿ ಸಂಬಂಧಿಸಿದ ವಾಹನವನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ.ನಿನ್ನೆ ಪಿರಿಯಾಪಟ್ಟಣದ ಸೋಮೇಗೌಡ ಎಂಬವರಿಗೆ ಸೇರಿದ ವಾಹನವೊಂದು (ಕೆಎ-12 ಬಿ-2601) ಕಡಗದಾಳು ಮೂಲಕ ಬಂದಾಗ; ಈ ಬಗ್ಗೆ ಗಮನಿಸಿರುವ ಗ್ರಾ.ಪಂ. ಅಧ್ಯಕ್ಷ ಮಾದೇಟಿರ ತಿಮ್ಮಯ್ಯ ಹಾಗೂ ಅಧಿಕಾರಿಗಳು ಗಮನಿಸಿ ದಾಖಲಾತಿ ಬಗ್ಗೆ ವಿಚಾರಿಸಿದ್ದಾರೆ.ಈ ವೇಳೆ ವಾಹನದಲ್ಲಿ ಇದ್ದ ವ್ಯಕ್ತಿ ತಾನು ಈ ಹಿಂದೆ ಕೊಡಗಿನಲ್ಲಿ ಪಾತ್ರೆ ವ್ಯಾಪಾರ ನಡೆಸುತ್ತಿದ್ದು, ಆ ಪರಿಚಯದಂತೆ ಈಗ ತರಕಾರಿ ಮಾರಾಟಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದಾನೆ.ಪಿರಿಯಾಪಟ್ಟಣ- ಕೊಪ್ಪ ಮಾರ್ಗವಾಗಿ ಕುಶಾಲನಗರಕ್ಕೆ ಬಂದು ಇತ್ತ ಆಗಮಿಸಿದ್ದಾಗಿ ಆತ ಹೇಳಿದಾಗ; ಅಚ್ಚರಿಗೊಂಡ ಅಧ್ಯಕ್ಷರು ಕೊಡಗು ಪೊಲೀಸರು ‘ಪಾಸ್’ ರಹಿತ ಬಿಟ್ಟಿರುವ ಬಗ್ಗೆ ಅಸಮಾಧಾನದೊಂದಿಗೆ ಗ್ರಾ.ಪಂ.ನಿಂದ ರೂ. 2 ಸಾವಿರ ದಂಡ ವಿಧಿಸಿ ಕಳುಹಿಸಿದ್ದಾರೆ.
ಇಂದು ಮತ್ತೆ ಅದೇ ಪಿರಿಯಾಪಟ್ಟಣಕ್ಕೆ ಸಂಬಂಧಿಸಿದ ಮತ್ತೊಂದು ತರಕಾರಿ ವಾಹನ (ಕೆಎ-45- 8067) ಆಗಮಿಸಿದ್ದು, ಸರಿಯಾಗಿ ಕನ್ನಡವು ಬಾರದ ಮಂದಿ ವಾಹನ ಚಾಲನೆಯೊಂದಿಗೆ ಎದುರಾಗಿದ್ದಾರೆ.
ಗ್ರಾ.ಪಂ. ಅಧ್ಯಕ್ಷರು ಮತ್ತು ಸಿಬ್ಬಂದಿ ವಿಚಾರಿಸಲಾಗಿ; ಸಮರ್ಪಕ ಉತ್ತರ ನೀಡದೆ, ಅದೇ ಕೊಪ್ಪಗೇಟ್‍ಗಾಗಿ ಬಂದಿರುವುದಾಗಿ ಹೇಳಿಕೊಂಡಿದ್ದಾನೆ.
ವಾಹನಕ್ಕೆ ಸಂಬಂಧಿಸಿದ ದಾಖಲಾತಿ, ಚಾಲನಾ ಪರವಾನಗಿ ಕೂಡ ಇಲ್ಲದ್ದರಿಂದ ಮತ್ತೆ ರೂ. 2 ಸಾವಿರ ದಂಡ ವಿಧಿಸಿ, ಸಂಬಂಧಿಸಿದ ವಾಹನವನ್ನು ಮಡಿಕೇರಿ ಗ್ರಾಮಾಂತರ ಠಾಣೆ ವಶಕ್ಕೆ ಒಪ್ಪಿಸಿದ್ದಾರೆ.
ಪೊಲೀಸ್ ಎಚ್ಚರಿಕೆ : ಸದ್ಯದ ಪರಿಸ್ಥಿತಿಯಲ್ಲಿ ತರಕಾರಿ ಅಥವಾ ರೈತ ಉತ್ಪನ್ನಗಳಿಗೆ ತೊಂದರೆ ನೀಡದಂತೆ ಸರಕಾರದ ಆದೇಶವನ್ನು ಮಧ್ಯವರ್ತಿಗಳು ದುರುಪಯೋಗ ಮಾಡಿಕೊಳ್ಳುತ್ತಿರುವುದು ಈ ಪ್ರಕರಣದಿಂದ
ಬೆಳಕಿಗೆ ಬಂದಿದ್ದು, ಸಂಬಂಧಿಸಿದವರಿಗೆ ಎಚ್ಚರಿಕೆಯೊಂದಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಮತ್ತೆ ಇಂತಹ ಬೆಳವಣಿಗೆ ಕಂಡುಬಂದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.