ಕೂಡಿಗೆ, ಏ. 17 : ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರುಗಳ ಪರ - ವಿರೋಧದಿಂದಾಗಿ ಇಂದು ಕೋಳಿ ಮಾಂಸದ ಅಂಗಡಿಗಳು ತೆರೆಯದೆ ಮಾಂಸ ಪ್ರಿಯರು ಮತ್ತೆ ನಿರಾಶೆ ಅನುಭವಿಸುವಂತಾಯಿತು.ಕೋಳಿ ಅಂಗಡಿ ಮಾಲೀಕನ ಪರವಾನಗಿ ಮಾರ್ಚ್ ತಿಂಗಳಿಗೆ ಕೊನೆಯಾಗಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ಈ ತಿಂಗಳ ಪರವಾನಿಗೆ ಪಡೆಯಲಾಗಿಲ್ಲ.
ಈ ವಿಷಯವಾಗಿ ಗ್ರಾಮ ಪಂಚಾಯಿತಿ ಸದಸ್ಯರುಗಳಲ್ಲಿ ಹೊಂದಾಣಿಕೆ ಇಲ್ಲದೆ ಪರ - ವಿರೋಧದಿಂದಾಗಿ ಅಂಗಡಿ ತೆರೆಯಲು ಸಾಧ್ಯವಾಗಲಿಲ್ಲ. ಕೆಲ ಸದಸ್ಯರು ಈ ತಿಂಗಳ ಅಂತ್ಯದವರೆಗೆ ಮೊದಲಿದ್ದ ಜಾಗದಲ್ಲಿ ಮಾಂಸ ಮಾರಾಟ ಮಾಡಲಿ ಎಂದರೆ, ಇನ್ನೂ ಕೆಲ ಸದಸ್ಯರು ಆ ಜಾಗದಲ್ಲಿ ಶುಚಿತ್ವ ಕಾಪಾಡುತ್ತಿಲ್ಲ. ಅಲ್ಲದೆ ಕಳೆದ ಮಾಸಿಕ ಸಭೆಯಲ್ಲಿ ಗ್ರಾಮಸ್ಥರ ದೂರಿನ ಮೇರೆಗೆ ಬದಲಿ ಜಾಗದಲ್ಲಿ ಮಾಂಸದ ಅಂಗಡಿಯನ್ನು ತೆರೆಯಲಿ ಎಂದು ಸರ್ವ ಸದಸ್ಯರು ನಿರ್ಣಯ ಮಾಡಿರುತ್ತಾರೆ. ಆದರೆ ಬದಲಿ ಜಾಗದಲ್ಲಿ ಮಾಂಸ ಮಾರಾಟ ಮಾಡಲಿ ಎಂದು ಗ್ರಾಮ ಪಂಚಾಯಿತಿ ಆವರಣದಲ್ಲಿ ಪರ- ವಿರೋಧ ಸದಸ್ಯರುಗಳಿಂದ ವ್ಯಕ್ತವಾಯಿತು.(ಮೊದಲ ಪುಟದಿಂದ) ಇದರಿಂದಾಗಿ ಲಾಕ್ಡೌನ್ ಹಿನ್ನೆಲೆಯಲ್ಲಿ ಬೇರೆ ಕಡೆಗೆ ಹೋಗಿ ಗ್ರಾಹಕರು ಮಾಂಸ ತರಲು ಸಾಧ್ಯವಾಗದೆ ನಿರಾಶೆಯಿಂದ ಮರಳುವಂತಾಯಿತು. ಈ ವಿಷಯಕ್ಕೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಲ್ಪಾ ಅವರನ್ನು ಮಾತನಾಡಿಸಿದಾಗ ಕೋಳಿ ಮಾಂಸ ಮಾರಾಟ ಅಂಗಡಿ ವಿಷಯ ಸದಸ್ಯರುಗಳ ಪರ-ವಿರೋಧವಾಗಿರುವ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಗಮನಕ್ಕೆ ತರಲಾಗಿದೆ. ಅವರ ಆದೇಶದಂತೆ ಕಾರ್ಯನಿರ್ವಹಿಸುತ್ತೇವೆ ಎಂದಿದ್ದಾರೆ, ಗ್ರಾಮಸ್ಥರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಕ್ರಮ ವಹಿಸಲು ಸಿದ್ಧರಿದ್ದೇವೆ ಎಂದರು. -ನಾಗರಾಜಶೆಟ್ಟಿ