ಕೆಲಸದಿಂದ ವಜಾಗೊಳಿಸದಂತೆ ಸೂಚನೆ
ಬೆಂಗಳೂರು, ಏ. 17: ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬೇಡಿ. ಬೇಕಾದರೆ ಅವರ ಸಂಬಳ ಕಡಿತಮಾಡಿ ಎಂದು ರಾಜ್ಯ ಸರ್ಕಾರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ (ಐಟಿ-ಬಿಟಿ) ಕಂಪೆನಿಗಳಿಗೆ ಸೂಚಿಸಿದೆ. ಐಟಿ ಕಂಪೆನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಕಂಪೆನಿಗಳು ಕೆಲಸದಿಂದ ತೆಗೆಯಬಾರದು. ಅದರ ಬದಲು ಅವರ ಸಂಬಳದಲ್ಲಿ ಕಡಿತ ಮಾಡಲಿ. ಇದರಿಂದ ಕಂಪೆನಿಯ ಕಾರ್ಯನಿರ್ವಹಣೆಯ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದ್ದಾರೆ. ಇಂತಹ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವಾಗ ಅವರು (ಉದ್ಯಮ) ಪರಸ್ಪರ ಸಹಕರಿಸಬೇಕು ಮತ್ತು ಸರ್ಕಾರದ ಸಲಹೆಗಳನ್ನು ಪರಿಗಣಿಸಬೇಕು, ನಮ್ಮ ಕಾಳಜಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಡಿಸಿಎಂ ಹೇಳಿದರು. ತಾ. 20 ರ ನಂತರ ಮಾಹಿತಿ ಐಟಿ, ಬಿಟಿ ಕ್ಷೇತ್ರದ ಶೇ. 50 ರಷ್ಟು ಸಿಬ್ಬಂದಿ ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ಅವಕಾಶ ಇರುತ್ತದೆ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.
ಸೋಂಕು ವ್ಯಾಪಕಗೊಳ್ಳಲು ಸರ್ಕಾರ ಕಾರಣ
ಬೆಂಗಳೂರು, ಏ. 17: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರಲು ಸರ್ಕಾರ ಸೋಂಕು ಪತ್ತೆಯಾದ ಆರಂಭದಲ್ಲಿ ತೋರಿಸಿದ ವಿಳಂಬ ನೀತಿಯೇ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಲಾಕ್ಡೌನ್ ಆದ ಬಳಿಕ ಮೊದಲ ಬಾರಿಗೆ ಇಂದು ವಿಧಾನಸೌಧಕ್ಕೆ ಆಗಮಿಸಿ, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಿ ಸರ್ಕಾರ ಕೊರೊನಾ ಹಿನ್ನೆಲೆ ಕೈಗೊಂಡ ವಿವರದ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು, ಅದಕ್ಕಾಗಿ ಮಾಡಿಕೊಂಡಿರುವ ಸಿದ್ಧತೆ, ವೈದ್ಯಕೀಯ ಸಿಬ್ಬಂದಿಗೆ ಒದಗಿಸಿರುವ ಸೌಕರ್ಯ, ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರು, ಕೂಲಿ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು, ಬಡವರ ನೆರವಿಗೆ ಕೈಗೊಂಡಿರುವ ಕಾರ್ಯಕ್ರಮಗಳೇನು ಎಂಬುದನ್ನು ತಿಳಿದುಕೊಳ್ಳಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾಗಿ ತಿಳಿಸಿದರು.
ತಾ. 20 ರಿಂದ ಐಟಿ-ಬಿಟಿ ಕಾರ್ಯಾರಂಭ
ಬೆಂಗಳೂರು, ಏ. 17: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ (ಐಟಿ-ಬಿಟಿ) ಶೇ. 50 ರಷ್ಟು ಸಿಬ್ಬಂದಿ ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡುವ ಬಗ್ಗೆ ತಾ. 20ರ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕೋವಿಡ್-19 ಪ್ರಕರಣ ಕಳೆದ ಮೂರು ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾದ ಹಿನ್ನೆಲೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸರ್ಕಾರದ ಸಂಬಂಧಪಟ್ಟ ಸಚಿವರು, ಹಿರಿಯ ಅಧಿಕಾರಿಗಳು, ತಜ್ಞ ವೈದ್ಯರ ಜೊತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಲಾಕ್ಡೌನ್ ಸಡಿಲಗೊಳಿಸಿದ ನಂತರ ಪ್ರಕರಣ ಹೆಚ್ಚದಂತೆ ನಿಭಾಯಿಸಲು ತೀರ್ಮಾನಿಸಲಾಯಿತು, ಲಾಕ್ಡೌನ್ ಸಡಿಲಿಕೆ ಸಂದರ್ಭದಲ್ಲಿ ಕಂಪೆನಿಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲು ತಜ್ಞರು ಅಭಿಪ್ರಾಯ ಕೊಟ್ಟಿದ್ದು ಅದರಂತೆ ಲಾಕ್ಡೌನ್ ನಂತರ ಯಾವ ರೀತಿ ಮುನ್ನಡೆಯಬೇಕು ಎನ್ನುವ ಕುರಿತು ಮಾರ್ಗಸೂಚಿ ರಚಿಸಲು ತೀರ್ಮಾನಿಸಲಾಯಿತು. ತಾ. 20 ರಂದು ಮತ್ತೊಂದು ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಹಲ್ಲೆ ನಡೆಸಿದ 17 ಮಂದಿಯ ಬಂಧನ
ಲಖನೌ, ಏ. 17: ಮೊರಾದಾಬಾದ್ನಲ್ಲಿ ಪೊಲೀಸರು ಹಾಗೂ ವೈದ್ಯಕೀಯ ತಂಡವೊಂದರ ಮೇಲೆ ಹಲ್ಲೆ ನಡೆಸಿದ ಗುಂಪಿನ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ವಿಶೇಷ ನ್ಯಾಯಾಲಯವೊಂದು ಇಂದು ಬೆಳಿಗ್ಗೆ ಜಾವ 3 ಗಂಟೆ ಸಮಯದಲ್ಲಿ ವಿಚಾರಣೆ ನಡೆಸಿ ಏಳು ಮಹಿಳೆಯರು ಸೇರಿದಂತೆ 17 ಮಂದಿ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಿಮಾಂಡ್ ಆದೇಶದ ನಂತರ, ಬಂಧಿಸಲ್ಪಟ್ಟ ಎಲ್ಲಾ 17 ಜನರನ್ನು ಜೈಲಿಗೆ ಕಳುಹಿಸಲಾಗಿದ್ದು, ಬೆಳಿಗ್ಗೆ 5 ಗಂಟೆ ಸಮಯದಲ್ಲಿ ಪ್ರತ್ಯೇಕ ಬ್ಯಾರಕ್ನಲ್ಲಿ ಇಡಲಾಗಿದೆ. ಇವರೆಲ್ಲರೂ ಹಾಟ್ಸ್ಪಾಟ್ ಮೊರಾದಾ ಬಾದಿಗೆ ಸೇರಿದವರಾಗಿದ್ದಾರೆ. ತಾ. 14 ರಂದು ಟಿಎಂಯು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ವೇಳೆಯಲ್ಲಿ ಕೋವಿಡ್-19 ಸೋಂಕಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಮೃತಪಟ್ಟ ವ್ಯಕ್ತಿಯ ಸಹೋದರ, ಕೋವಿಡ್ ಶಂಕಿತ ವ್ಯಕ್ತಿಯನ್ನು ಕರೆತರಲು ನಾಗ್ಪಾನಿ ಪ್ರದೇಶದತ್ತ ಹೊರಟ್ಟಿದ್ದ ವೈದ್ಯರು, ನರ್ಸ್ಗಳು ಹಾಗೂ ಪೊಲೀಸರ ಮೇಲೆ ಸ್ಥಳೀಯ ಗುಂಪೊಂದು ದಾಳಿ ನಡೆಸಿತ್ತು.
ನಿಖಿಲ್-ರೇವತಿ ಸರಳ ಕಲ್ಯಾಣ
ಬೆಂಗಳೂರು, ಏ. 17: ಕೋವಿಡ್-19 ಲಾಕ್ಡೌನ್ ಮಧ್ಯೆ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕಲ್ಯಾಣ ಸರಳ ರೀತಿಯಲ್ಲಿ ನಡೆಯಿತು. ನಟ ಹಾಗೂ ಯುವ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಇಂದು ರೇವತಿ ಎಂಬವರ ಜೊತೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಕೆ ಕಾಂಗ್ರೆಸ್ನ ಹಿರಿಯ ರಾಜಕಾರಣಿ ಮಾಜಿ ಸಚಿವ ಎಂ. ಕೃಷ್ಣಪ್ಪ ಅವರ ಸೊಸೆ. ಲಾಕ್ಡೌನ್ ಮಧ್ಯೆಯೂ ಇಂದು ಒಳ್ಳೆ ದಿನ ಮತ್ತು ಮುಹೂರ್ತವಿದೆ ಹೀಗಾಗಿ ಮದುವೆ ದಿನಾಂಕ ಮುಂದೂಡುವುದಿಲ್ಲ ಎಂದು ಆರಂಭದಿಂದಲೇ ಹೇಳಿಕೊಂಡು ಬಂದಿದ್ದರು. ರಾಮನಗರ ಜಿಲ್ಲೆಯಲ್ಲಿರುವ ಹೆಚ್.ಡಿ. ಕುಮಾರಸ್ವಾಮಿಯವರ ಫಾರ್ಮ್ಹೌಸ್ನಲ್ಲಿ ಈ ವಿವಾಹ ಸಮಾರಂಭ ನಡೆಯಿತು.