ಮಡಿಕೇರಿ, ಎ. 17: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಾಂತ ಲಾಕ್‍ಡೌನ್ ಜಾರಿಯಲ್ಲಿದ್ದು; ಕೊಡಗು ಜಿಲ್ಲೆಯಲ್ಲೂ ಮುಂದು ವರೆದಿದೆ. ಲಾಕ್‍ಡೌನ್ ಇರುವ ದರಿಂದ ಸಂಕಷ್ಟಕ್ಕೊಳ ಗಾದವರ ನೆರವಿಗೆ ಧಾವಿಸಲು ಸರಕಾರ ಪರಿಹಾರ ನಿಧಿ ಸ್ಥಾಪನೆ ಮಾಡಿದೆ. ಜಿಲ್ಲೆಯಲ್ಲಿ ಹಸಿದವರ ಹೊಟ್ಟೆ ತಣಿಸಲು ತಣಿವು ಪೆಟ್ಟಿಗೆ ಎಂಬ ಯೋಜನೆ ರೂಪಿಸಿದ್ದು; ಜಿಲ್ಲೆಯ ಸಹೃದಯರಿಂದ ನೆರವು ಹರಿದು ಬರುತ್ತಿದೆ.ಪಡಿತರ ಸಾಮಗ್ರಿ ಹಸ್ತಾಂತರಲಾಕ್‍ಡೌನ್ ಹಿನ್ನೆಲೆ ಜಿಲ್ಲಾಡಳಿತ ವತಿಯಿಂದ ನಿರ್ಮಿಸಲಾಗಿರುವ ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆಗೆ ನಾರ್ನೆ ಹೊಟೇಲ್ ಮತ್ತು ರೆಸಾರ್ಟ್‍ನ ಮಾಲೀಕ ರಾಜಶೇಖರ ರೆಡ್ಡಿ ಅವರು ಸುಮಾರು 1.50 ಲಕ್ಷ ಮೌಲ್ಯದ ಪಡಿತರ ಸಾಮಗ್ರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸುಮನ್ ಡಿ.ಪಿ. ಅವರ ಮುಖಾಂತರ ಹಸ್ತಾಂತರಿಸಿದರು.ನಗರದ ಹಳೆಯ ಖಾಸಗಿ ಬಸ್ ನಿಲ್ದಾಣ ಬಳಿ ಸ್ಥಾಪಿಸಲಾಗಿರುವ ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆಗೆ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಮತ್ತಿತರ ಪಡಿತರ ಸಾಮಗ್ರಿಗಳನ್ನು ರಾಜಶೇಖರ ರೆಡ್ಡಿ ಅವರು ಹಸ್ತಾಂತರಿಸಿದರು. ರಾಜಶೇಖರ್ ರೆಡ್ಡಿ ಅವರ ಸಾಮಾಜಿಕ ಕಳಕಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಮಡಿಕೇರಿ ತಾಲೂಕು ಪಂಚಾಯಿತಿ ಇಒ ಲಕ್ಷ್ಮಿ, ಡಿವೈಎಸ್ಪಿ ದಿನೇಶ್, ಸಿಪಿಐ ಅನೂಪ್ ಮಾದಪ್ಪ, ಮೇದಪ್ಪ ಇತರರು ಇದ್ದರು.

ಶಾಸಕರಿಂದ 1ಲಕ್ಷ ದೇಣಿಗೆ

ಸೋಮವಾರಪೇಟೆ: ಪ್ರಧಾನ ಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ರೂ. 1ಲಕ್ಷ ದೇಣಿಗೆ ನೀಡಿದ್ದಾರೆ.

ದೇಶಾದ್ಯಂತ ಸಾರ್ವಜನಿಕರು ಪ್ರಧಾನಮಂತ್ರಿಗಳ ಮನವಿಗೆ ಸ್ಪಂದಿಸುತ್ತಿದ್ದು, ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಕೋವಿಡ್ ಪರಿಹಾರ ನಿಧಿಗೆ ಸಹಾಯ ನೀಡುತ್ತಿದ್ದಾರೆ. ಭಾರತೀಯ ಜನತಾ ಪಾರ್ಟಿಯಿಂದ ಪ್ರತಿ ಬೂತ್ ಮಟ್ಟದಿಂದಲೇ ಪರಿಹಾರ ನಿಧಿಗೆ ಹಣ ಕೊಡುವ ಯೋಜನೆ ತಯಾರಿಸಲಾಗಿದ್ದು, ಪ್ರತಿ ಬೂತ್‍ನಿಂದ ಕನಿಷ್ಟ 100 ಮಂದಿ, ತಮ್ಮ ಕೈಲಾದಷ್ಟು ದೇಣಿಗೆ ನೀಡುವಂತೆ ಮನವಿ ಮಾಡಲಾಗಿದೆ ಎಂದು ರಂಜನ್ ತಿಳಿಸಿದ್ದಾರೆ.

ಕೋವಿಡ್ ಸೋಂಕು ಹರಡ ದಂತೆ ತಡೆಯಲು ದೇಶದ ಪ್ರಧಾನಿಯಿಂದ ಮೊದಲ್ಗೊಂಡು ಸ್ಥಳೀಯವಾಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಜನಪ್ರತಿನಿಧಿಗಳು ಶ್ರಮಿಸುತ್ತಿದ್ದು, ಸಾರ್ವಜನಿಕರು ಸರ್ಕಾರ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಶಾಸಕ ರಂಜನ್ ಮನವಿ ಮಾಡಿದ್ದಾರೆ.

ಹರಪಳ್ಳಿ ರವೀಂದ್ರ ನೆರವು

ಸೋಮವಾರಪೇಟೆ: ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‍ಡೌನ್ ವಿಧಿಸ ಲಾಗಿರುವ ಪ್ರಸ್ತುತತೆಯಲ್ಲಿ ಕೂಲಿ ಕಾರ್ಮಿಕ ಬಡ ಕುಟುಂಬಗಳು ಹಾಗೂ ವಿಕಲ ಚೇತನ ಕುಟುಂಬಗಳು ತೀರಾ ಸಂಕಷ್ಟಕ್ಕೆ ಸಿಲುಕಿದ್ದು, ಸುಮಾರು 50 ಕುಟುಂಬಗಳಿಗೆ ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ಆಹಾರ ಧಾನ್ಯಗಳ ಕಿಟ್ ವಿತರಿಸಿದರು.

ತಮ್ಮ ಮನೆಯ ಮುಂಭಾಗದಲ್ಲಿ ಪಟ್ಟಣ ವ್ಯಾಪ್ತಿಯ 50 ಮಂದಿ ಬಡ ಕೂಲಿ ಕಾರ್ಮಿಕರು ಹಾಗೂ ವಿಕಲಚೇತನರಿಗೆ ಕಿಟ್ ವಿತರಿಸಿ ಮಾತನಾಡಿದ ಅವರು, ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಶಕ್ತಿಮೀರಿ ಶ್ರಮಿಸುತ್ತಿದ್ದು, ಸಮಾಜದ ಬಡವರ್ಗದ ನೆರವಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.

(ಮೊದಲ ಪುಟದಿಂದ) ಈ ಹಿನ್ನೆಲೆ ಆಯ್ದ ಫಲಾನುಭವಿಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗಿದೆ ಎಂದರು.

ಮೋದಿ ಅವರ ಮನವಿಯಂತೆ ಪಿ.ಎಂ. ಕೇರ್ಸ್ ಫಂಡ್‍ಗೆ ವೈಯುಕ್ತಿಕವಾಗಿ 50 ಸಾವಿರ ದೇಣಿಗೆ ನೀಡಲಾಗಿದೆ. ಸಮಾಜದಲ್ಲಿರುವ ಸ್ಥಿತಿವಂತರು ತಮ್ಮ ಕೈಲಾದಷ್ಟು ಪ್ರಧಾನ ಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಪರಿಹಾರ ಕಾರ್ಯಗಳಲ್ಲಿ ಕೈಜೋಡಿಸಬೇಕು ಎಂದು ರವೀಂದ್ರ ಅವರು ಮನವಿ ಮಾಡಿದರು. ಈ ಸಂದರ್ಭ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎನ್. ನಾಗರಾಜು ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪರಿಹಾರ ಚೆಕ್ ಹಸ್ತಾಂತರ

ಮಡಿಕೇರಿ: ಕೊಡಗು ಜಿಲ್ಲಾ ಕೃಷಿಕ ಸಮಾಜದ ಪರವಾಗಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಾಚೇಟ್ಟಿರ ಚೋಟು ಕಾವೇರಪ್ಪ ಅವರ ನೇತೃತ್ವದಲ್ಲಿ 1 ಲಕ್ಷ ರೂ, ಮಡಿಕೇರಿ ತಾಲೂಕು ಕೃಷಿಕ ಸಮಾಜದ ಪರವಾಗಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಖಾದಿರ ಉಮೇಶ್ ಪಳಂಗಪ್ಪ ಅವರ ನೇತೃತ್ವದಲ್ಲಿ 50 ಸಾವಿರ ರೂ., ಹಾಗೂ ಪಾಲಿಬೆಟ್ಟದ ಆಶಾ ಕ್ಲಿನಿಕ್ ಮಾಲೀಕ ಡಾ.ಸುಧಾಕರ ಶೆಟ್ಟಿ ಅವರು 1 ಲಕ್ಷ ರೂ ಚೆಕ್ ನ್ನು ಶಾಸಕ ಕೆ.ಜಿ.ಬೋಪಯ್ಯ ಅವರ ಮೂಲಕ ಮುಖ್ಯಮಂತ್ರಿ ಅವರ ಕೋವಿಡ್ ಪರಿಹಾರ ನಿಧಿಗೆ ಹಸ್ತಾಂತರಿಸಿದರು.

ವೀರಾಜಪೇಟೆ ತಾಲೂಕು ಕೃಷಿಕ ಸಮಾಜದ ಪರವಾಗಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪಟ್ರಪಂಡ ರಘು ನಾಣಯ್ಯ ರವರ ನೇತೃತ್ವದಲ್ಲಿ 50,000 ರೂ. ಗಳ ಚೆಕ್‍ನ್ನು ಶುಕ್ರವಾರ ಶಾಸಕ ಕೆ.ಜಿ. ಬೋಪಯ್ಯ ಅವರ ಮೂಲಕ ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿಗೆ ನೀಡಲಾಯಿತು. ಈ ವೇಳೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ ಹರೀಶ್ ಇತರರು ಇದ್ದರು.