ಸೋಮವಾರಪೇಟೆ, ಏ. 17: ಅಕ್ರಮ ಮದ್ಯ ಮಾರಾಟದ ಬಗ್ಗೆ ಸ್ಥಳ ತನಿಖೆಗೆ ತೆರಳಿದ್ದ ಸೋಮವಾರಪೇಟೆ ಸಬ್ ಡಿವಿಷನ್‍ನ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಎಕ್ಸೈಜ್ ಅಧಿಕಾರಿ ಶಿವಪ್ಪ ಅವರ ಮೇಲೆ, ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ಅಬಕಾರಿ ಇಲಾಖೆಯ ರೇಂಜ್ ಇನ್ಸ್‍ಪೆಕ್ಟರ್ ನಟರಾಜ್ ಸೇರಿದಂತೆ ನಾಲ್ವರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ.
ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿಗಳ ಸೂಚನೆ ಮೇರೆ ಆಲೂರುಸಿದ್ದಾಪುರದಲ್ಲಿರುವ ವೈಭವ್ ವೈನ್ ಶಾಪ್‍ಗೆ ತೆರಳಿದ ಸೋಮವಾರಪೇಟೆ ಸಬ್ ಡಿವಿಷನ್‍ನ ಡೆಪ್ಯೂಟಿ ಸೂಪರಿಟೆಂಡೆಂಟ್ ಆಫ್ ಎಕ್ಸೈಜ್ ಅಧಿಕಾರಿ ಶಿವಪ್ಪ ಅವರ ಮೇಲೆ, ಅಬಕಾರಿ ರೇಂಜ್ ಇನ್ಸ್‍ಪೆಕ್ಟರ್ ನಟರಾಜ್ ಹೊರಗುತ್ತಿಗೆ ಆಧಾರದಲ್ಲಿರುವ ಚಾಲಕ ಮನೋಹರ್ (ಮನು), ಗಾರ್ಡ್‍ಗಳಾದ ವೀರೇಶ್, ಕಾಂತರಾಜು ಅವರುಗಳು ಹಲ್ಲೆ ನಡೆಸಿದ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.
ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ, ಕೋವಿಡ್-19 ಹಿನ್ನೆಲೆ ಸರ್ಕಾರಿ ಅಭಿಯೋಜಕರ ಆಕ್ಷೇಪಣೆ ಸಲ್ಲಿಕೆಯಿಂದ ವಿನಾಯಿತಿ ನೀಡಿ, ನಾಲ್ವರು ಆರೋಪಿಗಳಿಗೆ ಸೋಮವಾರಪೇಟೆ ಹಿರಿಯ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಕೆಲಸ ಕಳೆದುಕೊಂಡ ಚಾಲಕ: ಅಬಕಾರಿ ಇಲಾಖೆಯ ಉಪ ಅಧೀಕ್ಷಕ ಶಿವಪ್ಪ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಅಬಕಾರಿ ರೇಂಜ್‍ನಲ್ಲಿ ದಿನಗೂಲಿ ನೌಕರನಾಗಿದ್ದ ಚಾಲಕ ಮನೋಹರ್ (ಮನು) ಎಂಬಾತನನ್ನು ಕೆಲಸದಿಂದ ತೆಗೆದುಹಾಕಲಾಗಿದೆ.