ಮಡಿಕೇರಿ, ಏ. 17: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ತನ್ನ ರೌದ್ರನರ್ತನವನ್ನು ಮುಂದುವರೆಸಿದೆ. ಕೊರೊನಾ ಎಲ್ಲರ ಬದುಕು ಕಿತ್ತುಕೊಂಡಿದೆ. ಅನೇಕ ಉದ್ಯಮಗಳು ನೆಲಕಚ್ಚಿವೆ. ಕೆಲವರ ಬದುಕನ್ನು ಅತಂತ್ರ ಸ್ಥಿತಿಯತ್ತ ಕೊರೊನಾ ಕೊಂಡೊಯ್ಯುತ್ತಿದೆ. ಈ ಪಟ್ಟಿಯಲ್ಲಿ ‘ಛಾಯಾಗ್ರಾಹಕ’ ವೃತ್ತಿ ನಡೆಸುತ್ತಿರುವವರು ಕೂಡ ಸೇರುತ್ತಾರೆ.
ಫೆÇೀಟೋ ಕ್ಲಿಕ್ಕಿಸುವಾಗ ‘ಸ್ಮೈಲ್ ಪ್ಲೀಸ್’ ಎಂದು ಹೇಳುವವರ ಬದುಕಿನಲ್ಲಿ ಕೊರೊನಾ ಸ್ಮೈಲ್ ಇಲ್ಲದಂತೆ ಮಾಡಿದೆ. ಛಾಯಾಗ್ರಾಹಕರಿಗೆ ವರ್ಷದಲ್ಲಿ ಕೆಲವು ತಿಂಗಳುಗಳ ಕಾಲ ಮಾತ್ರ ಕೆಲಸ, ಉಳಿದ ಸಮಯದಲ್ಲಿ ಅಪರೂಪಕ್ಕೊಮ್ಮೆ ಕೆಲಸ ಸಿಕ್ಕರೆ ಸಿಕ್ಕಿತು. ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಛಾಯಾಗ್ರಾಹಕರು ಬಿಡುವಿಲ್ಲದ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ.
ಮಾರ್ಚ್ರಿಂದ ಮೇ ತಿಂಗಳ ಕಾಲ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮದುವೆ ಹಾಗೂ ಇನ್ನಿತರ ಸಭೆ ಸಮಾರಂಭಗಳು ನಡೆಯುವುದು ಸಹಜ. ಆದರೆ ಇದೀಗ ದೇಶಾದ್ಯಂತ ಲಾಕ್ಡೌನ್ ಘೋಷಿಸಿದ ಪರಿಣಾಮ, ಈ ಮೂರು ತಿಂಗಳಲ್ಲಿ ನಡೆಸಲು ನಿರ್ಧರಿಸಿದ್ದ ಹಲವು ಮದುವೆ, ಸಭೆ ಸಮಾರಂಭಗಳು ರದ್ದಾಗಿವೆ.
ಹಲವು ಛಾಯಾಗ್ರಾಹಕರಿಗೆ ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ 25-30 ಮದುವೆ ಹಾಗೂ ಸಮಾರಂಭಗಳು ಬುಕ್ ಆಗಿತ್ತು. ಇದೀಗ ಬಹುತೇಕ ಮದುವೆ ಸಮಾರಂಭಗಳು ಮುಂದೂಡಿದ್ದು, ಅದ್ಧೂರಿಯಾಗಿ ನಡೆಯಬೇಕಾಗಿದ್ದ ಕೆಲವೊಂದು ಮದುವೆ ಸಮಾರಂಭಗಳು ಸರಳ ರೀತಿಯಲ್ಲಿ ನಡೆದಿವೆ. ಇದನ್ನೇ ನಂಬಿಕೊಂಡಿದ್ದ ವೃತ್ತಿನಿರತ ಛಾಯಾಗ್ರಾಹಕರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.
ಅಂದು ಪ್ರಕೃತಿ ವಿಕೋಪ... ಇಂದು ಕೊರೊನಾ
ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸತತವಾಗಿ ಪ್ರಕೃತಿ ವಿಕೋಪ ಸಂಭವಿಸಿದೆ. ಪ್ರಕೃತಿ ವಿಕೋಪದ ಪರಿಣಾಮ ಜಿಲ್ಲೆಯಲ್ಲಿ ನಡೆಯಬೇಕಾಗಿದ್ದ ವಿವಿಧ ಕಾರ್ಯಕ್ರಮಗಳು ರದ್ದುಗೊಂಡಿತ್ತು. ಇದರಿಂದ ದೊಡ್ಡ ಹೊಡೆತಕ್ಕೆ ಛಾಯಾಗ್ರಾಹಕರು ಒಳಗಾಗಿದ್ದರು. ಆದರೆ ಇದೀಗ ಕೊರೊನಾ ವೈರಸ್ನಿಂದ ಲಾಕ್ಡೌನ್ ಜಾರಿಯಲ್ಲಿದ್ದು, ಜಿಲ್ಲೆಯ ಛಾಯಾಗ್ರಾಹಕರಿಗೆ ಮತ್ತೊಂದು ಆಘಾತ ಉಂಟಾದ ಹಾಗೆ ಇದೆ.
ಶಾಸಕ ರಂಜನ್ ಅವರಿಗೆ ಮನವಿ ಸಲ್ಲಿಕೆ
ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳವರೆಗೆ ನಮಗೆ ಅನೇಕ ಕಾರ್ಯಕ್ರಮಗಳು ಬುಕ್ ಆಗಿತ್ತು. ಲಾಕ್ಡೌನ್ನಿಂದ ಮೊದಲು ಬುಕ್ ಆಗಿದ್ದ ಎಲ್ಲಾ ಕಾರ್ಯಕ್ರಮಗಳು ರದ್ದುಗೊಂಡಿರುವುದರಿಂದ ನಾವು ಸಂಕಷ್ಟ್ಟಕ್ಕೆ ಒಳಗಾಗಿದ್ದೇವೆ. ಮುಂದೆ ಬರುತ್ತಿರುವುದು ಮಳೆಗಾಲವಾಗಿದೆ. ಯಾವ ಛಾಯಾಗ್ರಾಹರಿಗೂ ಸರಿಯಾಗಿ ಕೆಲಸವಿರುವುದಿಲ್ಲ. ಅಂಗಡಿಗಳಿಗೆ ಬಾಡಿಗೆ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ದೇಶದಾದ್ಯಂತ 40 ದಿನಗಳ ಲಾಕ್ಡೌನ್ ಹೇರಲಾಗಿದ್ದು, ಸ್ಟುಡಿಯೋಗಳನ್ನು ಮುಚ್ಚಿರುವ ಛಾಯಾಚಿತ್ರಗಾರರಿಗೆ ಜೀವನ ನಿರ್ವಹಣೆಯ ಸಮಸ್ಯೆ ಎದುರಾಗಿದೆ. ಈ ಅವಧಿಯಲ್ಲಿ ಮದುವೆ ಮತ್ತಿತರ ಸಮಾರಂಭಗಳು ಜರುಗುತ್ತಿದ್ದು, ಜೀವನ ನಿರ್ವಹಣೆಗೆ ಒಂದಷ್ಟು ಕೆಲಸ ಕಾರ್ಯಗಳು ಸಿಗುತ್ತಿತ್ತು. ಅದಕ್ಕೆ ಅಡ್ಡಿಯಾಗಿದೆ. ಲಾಕ್ಡೌನ್ ತೆರವುಗೊಳಿಸಿದರೂ ಬಳಿಕ ಮಳೆಗಾಲ ಪ್ರಾರಂಭವಾಗುವುದರಿಂದ ಕೊಡಗಿನಲ್ಲಿ ಸಮಾರಂಭಗಳು ಜರುಗುವುದು ಇಳಿಮುಖವಾಗಲಿದ್ದು, ಛಾಯಾಚಿತ್ರಕಾರರು ಸಮಾರಂಭಗಳನ್ನು ನಿರೀಕ್ಷಿಸಬೇಕಾದರೆ ಮುಂದಿನ ನವೆಂಬರ್ ಬರಬೇಕು. ಈ ಅವಧಿಯಲ್ಲಿ ಪರ್ಯಾಯ ದುಡಿಮೆ ಏನು ಎಂಬುದು ಪ್ರಶ್ನಾರ್ಥಕವಾಗಿದೆ. ಈಗಾಗಲೇ ಸ್ಟುಡಿಯೋ ಬಂದ್ ಮಾಡಿರುವ ಹಲವು ಛಾಯಾಚಿತ್ರಕಾರರು ಕಾಫಿಯ ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಮತ್ತೆ ಕೆಲವರು ಕ್ಯಾಮರಾ ಬದಿಗಿಟ್ಟು ಪಟ್ಟಣದಲ್ಲಿ ಆಟೋ ಓಡಿಸುತ್ತಿದ್ದಾರೆ.
ಸರ್ಕಾರ ಛಾಯಾಚಿತ್ರಕಾರರನ್ನು ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿಸಿದೆ. ಆದರೆ ಕಾರ್ಮಿಕ ವರ್ಗಕ್ಕೆ ಸಿಗುವ ಯಾವ ಸೌಲಭ್ಯವೂ ಇವರಿಗೆ ದೊರೆಯುತ್ತಿಲ್ಲ. ಪುಟ್ಟ ಜಿಲ್ಲೆಯ ಸಣ್ಣ ಸಣ್ಣ ಊರುಗಳಲ್ಲಿ ಸ್ಟುಡಿಯೋ ತೆರೆದು ಜೀವನ ನಿರ್ವಹಣೆ ಮಾಡುತ್ತಿದ್ದ ಛಾಯಾಚಿತ್ರಕಾರರು ಇದೀಗ ಲಾಕ್ಡೌನ್ನಿಂದಾಗಿ ಕೆಲಸವೂ ಇಲ್ಲದೆ ಅತ್ತ ಬಾಡಿಗೆ ನೀಡಲಾರದೆ ಸಾಲಸೋಲ ಮಾಡಿ ಕ್ಯಾಮರಾ ಖರೀದಿಸಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸ್ಟುಡಿಯೋ ಮುಚ್ಚುವ ಹಂತಕ್ಕೆ ಬಂದಿದ್ದಾರೆ. ಛಾಯಾಚಿತ್ರಕಾರರ ಸಮಸ್ಯೆಯನ್ನು ಪರಿಹರಿಸುವವರು ಯಾರು? ಎಂಬ ಪ್ರಶ್ನೆ ಪ್ರಶ್ನಾರ್ಥಕವಾಗಿ ಉಳಿದಿದೆ.
ಸರ್ಕಾರ ಇದನ್ನು ಮನಗಂಡು ಛಾಯಾಗ್ರಾಹಕರಿಗೆ ಸೂಕ್ತ, ಪರಿಹಾರ ಒದಗಿಸಬೇಕೆಂದು ಜಿಲ್ಲಾ ಹಾಗೂ ತಾಲೂಕು ಛಾಯಾಗ್ರಾಹಕರ ಸಂಘದಿಂದ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಜಿಲ್ಲಾ ಛಾಯಾಗ್ರಾಹಕ ಸಂಘದ ಅಧ್ಯಕ್ಷ ವಿ. ಗುಡ್ಡೆಮನೆ ವಿಶ್ವಕುಮಾರ್, ಮಡಿಕೇರಿ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಲೂಯಿಸ್, ಕುಶಾಲನಗರ ಕಾವೇರಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಶಾಂತಪ್ಪ, ಕೆಪಿಎ ನಿರ್ದೇಶಕ ಸಲೀಮ್ ಸುಂಟಿಕೊಪ್ಪ ಹಾಗೂ ಜುಬೈರ್ ಇದ್ದರು.