ಕುಶಾಲನಗರ, ಏ. 17: ಕೊರೊನಾ ಲಾಕ್‍ಡೌನ್ ನಡುವೆ ಜಿಲ್ಲೆಯ ಜೀವನದಿ ಕಾವೇರಿ ಬಹುತೇಕ ಸ್ವಚ್ಛವಾಗುವುದರೊಂದಿಗೆ ಗುಣಮಟ್ಟ ವೃದ್ಧಿಸಿಕೊಂಡು ಕಾವೇರಿ ಶುದ್ಧ ಜಲದೊಂದಿಗೆ ತನ್ನ ಮೂಲ ಸ್ವರೂಪಕ್ಕೆ ಹಿಂತಿರುಗುತ್ತಿರುವ ಬಗ್ಗೆ ವರದಿಗಳು ಹೊರಬಿದ್ದಿವೆ. ಕಳೆದ ಕೆಲವು ವರ್ಷಗಳಿಂದ ಕಾವೇರಿ ನದಿಯ ನೀರಿನ ಗುಣಮಟ್ಟ ‘ಬಿ’ ಯಿಂದ ‘ಸಿ’ ದರ್ಜೆಗೆ ತಲುಪಿದ ಬಗ್ಗೆ ದಾಖಲೆಗಳು ಕಂಡುಬಂದಿದ್ದು ಇದೀಗ ಕೆಲವು ಕೇಂದ್ರಗಳಲ್ಲಿ ‘ಎ’ ದರ್ಜೆ ಗುಣಮಟ್ಟದಲ್ಲಿ ಹರಿಯುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯಲ್ಲಿ ದಾಖಲಾಗುತ್ತಿರುವುದು ಆಶ್ಚರ್ಯ ವಾದರೂ ನಿಜ. ಲಾಕ್‍ಡೌನ್ ನಿಂದಾಗಿ ಪ್ರಾಕೃತಿಕ ಅಸಮತೋಲನ ನಿವಾರಣೆಗೊಂಡು ಸಮತೋಲನಕ್ಕೆ ಬಂದಂತಾಗಿದೆ. ಜಿಲ್ಲೆಯ ಭಾಗಮಂಡಲ, ನಾಪೋಕ್ಲು, ದುಬಾರೆ, ಕುಶಾಲನಗರ ಸೇರಿದಂತೆ 5 ಕಡೆಗಳಲ್ಲಿ ಪ್ರತಿ ತಿಂಗಳು ನದಿ ನೀರಿನ ಹರಿವಿನ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತದೆ. ಅದರ ಅನ್ವಯ ಇತ್ತೀಚಿನ ದಿನಗಳಲ್ಲಿ ಪಟ್ಟಣ, ಗ್ರಾಮಗಳ ಕಲುಷಿತ ತ್ಯಾಜ್ಯದ ಹರಿವು ಸ್ಥಗಿತಗೊಂಡಿದ್ದು ಇದಕ್ಕೆ ಕಾರಣ ಎನ್ನಲಾಗಿದೆ.ಪಟ್ಟಣ ಮತ್ತು ಗ್ರಾಮಗಳ ತ್ಯಾಜ್ಯ ಸಮರ್ಪಕವಾಗಿ ಇಲ್ಲದೆ ಇರುವ ಹಿನ್ನೆಲೆ ನದಿಗೆ ಕೆಲವೆಡೆ ನೇರವಾಗಿ ತ್ಯಾಜ್ಯಗಳು ಸೇರುತ್ತಿದ್ದು ಇದರಿಂದ ನದಿ ನೀರಿನ ಗುಣಮಟ್ಟ ಏರುಪೇರಾಗಲು ಕಾರಣ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಅಧಿಕಾರಿ ಜಿ.ಆರ್. ಗಣೇಶನ್ ‘ಶಕ್ತಿ’ ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೋಮವಾರಪೇಟೆಯ ಚಿಣ್ಣಪ್ಪ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಲಾಕ್‍ಡೌನ್‍ನಿಂದಾಗಿ ಪ್ರವಾಸಿಗರು ಬಾರದಿರುವದರಿಂದ, ನದಿ ದಂಡೆÀಗೆ ಯಾರೂ ತೆರಳದಿರುವದರಿಂದ ಹಾಗೂ ಹೊಟೇಲ್ ಇತ್ಯಾದಿ ಉದ್ಯಮಗಳ ತ್ಯಾಜ್ಯಗಳು ಮಾಯ ವಾಗಿರುವದರಿಂದ ಕಾವೇರಿ ನದಿ ಸ್ವಚ್ಛಗೊಳ್ಳಲು ಅವಕಾಶ ಒದಗಿದಂತಾಗಿದೆ. ಕನಿಷ್ಟ ಆರು ತಿಂಗಳಿಗೊಮ್ಮೆ ಒಂದು ವಾರ ಲಾಕ್‍ಡೌನ್ ಜಾರಿಗೊಂಡರೆ ನದಿ ಮಾಲಿನ್ಯತೆಯನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸ್ವಚ್ಛತಾ ಶ್ರಮದಾನ
ಈ ನಡುವೆ ಕೊರೊನಾ ಲಾಕ್‍ಡೌನ್ ನಡುವೆ ಕಾವೇರಿ ನದಿ ಸ್ವಚ್ಛತಾ
(ಮೊದಲ ಪುಟದಿಂದ) ಅಭಿಯಾನದ ಪ್ರಮುಖರು ಎರಡು ಬಾರಿ ಸ್ವಚ್ಛತಾ ಕಾರ್ಯ ಕೈಗೊಂಡು ನದಿಯಲ್ಲಿ ಎಸೆಯಲಾಗಿದ್ದ ಬಟ್ಟೆ ಬರೆ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ತೆರವುಗೊಳಿಸುವಲ್ಲಿ ತೊಡಗಿಸಿಕೊಂಡರು. ಕುಶಾಲನಗರ ಕೊಪ್ಪ ಕಾವೇರಿ ನದಿ ಸೇತುವೆ ಕೆಳಭಾಗ ಮತ್ತು ಅಯ್ಯಪ್ಪಸ್ವಾಮಿ ದೇವಾಲಯ ಬಳಿ ನದಿ ಸ್ವಚ್ಛತಾ ಕಾರ್ಯಕ್ರಮ ಎರಡು ದಿನಗಳ ಕಾಲ ನಡೆಯಿತು. ಸ್ವಚ್ಛತಾ ಅಭಿಯಾನದ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ಕೆ.ಜಿ. ಮನು, ನಿಡ್ಯಮಲೆ ದಿನೇಶ್, ತೋರೇರ ಉದಯಕುಮಾರ್, ಕೊಡಗಿನ ಹರ್ಷ, ಕುಲ್ಲಚ್ಚನ ಹೇಮಂತ್, ಕಡವಡಿರ ವಿವೇಕ್ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.