ಕೊರೊನಾ ಸೋಂಕು ಇದೆಯೇ ? ಮನೆಯಲ್ಲಿ ಯಾರಿಗಾದರೂ ಜ್ವರ, ಕೆಮ್ಮು, ಶೀತದ ಲಕ್ಷ್ಮಣ ವಿದೆಯೇ ? ಯಾರೆಲ್ಲಾ ವಿದೇಶದಿಂದ ಬಂದಿದ್ದಾರೆ ? ಯಾರು ಹೊರಜಿಲ್ಲೆಗಳಿಂದ ಕೊಡಗಿಗೆ ಬಂದಿದ್ದಾರೆ ? ಈ ಎಲ್ಲಾ ಪ್ರಶ್ನೆಗಳನ್ನು ಹೊತ್ತು ಕಳೆದ 30 ದಿನಗಳಿಂದ ಕೊಡಗು ಜಿಲ್ಲೆಯ ಮನೆ-ಮನೆ ಸುತ್ತುತ್ತಿರುವ ಇವರು ನಿಜವಾದ ಅರ್ಥದಲ್ಲಿ ನಡೆದಾಡುವ ದೇವತೆಯರು. ಇವರೇ ಕೊಡಗಿನ ಹೆಮ್ಮೆಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕಿಯರು. ಪ್ರಚಾರದಿಂದ ದೂರವಾಗಿ ಕೊಡಗು ಜಿಲ್ಲೆಯ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಕೊರೊನಾ ಸಂಬಂಧಿತ ಮಾಹಿತಿ ಸಂಗ್ರಹಿಸುವ ಈ ಹೆಮ್ಮೆಯ ಮಹಿಳೆಯರಿಂದಾಗಿಯೇ ಕೊಡಗು ಇಷ್ಟೊಂದು ಸುರಕ್ಷಿತವಾಗಿದೆ. ಇವರು ಹಲವು ಅಪಮಾನ ನುಂಗಿಕೊಂಡಿದ್ದಾರೆ. ಹೀಗಿದ್ದರೂ ತಾಳ್ಮೆ ಕಳೆದುಕೊಳ್ಳದೇ ಸೌಮ್ಯ ವರ್ತನೆ ತೋರಿದ್ದಾರೆ. ಸರ್ಕಾರಕ್ಕೆ ಅತ್ಯಗತ್ಯವಾದ ದಾಖಲೆಗಳನ್ನೆಲ್ಲಾ ದಿನಾ ಸಂಗ್ರಹಿಸಿ ನೀಡುತ್ತಿದ್ದಾರೆ. ಇವರು ನೀಡುವ ಮಾಹಿತಿ ಆಧಾರದಲ್ಲಿಯೇ ಜಿಲ್ಲೆಯಲ್ಲಿನ ಅನಾರೋಗ್ಯ ಪೀಡಿತರನ್ನು ಪತ್ತೆಹಚ್ಚಲಾಗುತ್ತಿದೆ. ಈ ಅಪರೂಪದ ಕಾರ್ಯಕರ್ತೆಯರ ಕಾರ್ಯವೈಖರಿಯತ್ತ ಒಂದು ನೋಟವಿದು.
...........
ಗರ್ಭಿಣಿಯರ ದಾಖಲಾತಿ, ಬಾಣಂತಿ ಆರೋಗ್ಯ ವಿಚಾರಿಸುವುದು, ಹಸುಳೆಗೆ ಲಸಿಕೆ ನೀಡುವುದಕ್ಕಾಗಿ 12 ವರ್ಷಗಳ ಹಿಂದೆ ಪ್ರಾರಂಭವಾದ ಆಶಾ ಕಾರ್ಯಕರ್ತೆಯರ ಕರ್ತವ್ಯ ಇಂದು ಮನೆ-ಮನೆ ಸುತ್ತಿ ಕೊರೊನಾ ಸೋಂಕು ಪೀಡಿತರ ಮಾಹಿತಿ ಸಂಗ್ರಹಿಸುವ ಬೆಟ್ಟದಷ್ಟು ದೊಡ್ಡ ಕೆಲಸಕ್ಕೆ ಬಂದು ನಿಂತಿದೆ. ಕೊಡಗಿನಲ್ಲಿ ಕಳೆದ 1 ತಿಂಗಳಿನಿಂದ ಸುಮಾರು 480 ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಮತ್ತು ಇತ್ತೀಚಿನ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಳಮಟ್ಟದಲ್ಲಿ ಸಕ್ರಿಯ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡಗಿನ ಪ್ರತೀ ಮನೆಗೂ ಈ ಕಾರ್ಯಕರ್ತೆ ಯರು ತೆರಳಿ ಸಮಗ್ರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ವಿದೇಶಗಳಿಂದ ಎಷ್ಟು ಮಂದಿ ಕೊಡಗಿಗೆ ಬಂದಿದ್ದಾರೆ ಎಂದು ರಾಜ್ಯ ಮಟ್ಟದಿಂದ ನಮಗೆ ಮಾಹಿತಿ ಬರುವ ಮುಂಚೆಯೇ ನಮ್ಮ ಆಶಾ ಕಾರ್ಯಕರ್ತೆಯರು ಆ ಮಾಹಿತಿಯನ್ನು ನಮಗೆ ಸಂಗ್ರಹಿಸಿ ನೀಡಿದ್ದರು. ಜಿಲ್ಲೆಯ ಮೂಲೆ-ಮೂಲೆಗಳ ಪ್ರತೀ ಮಾಹಿತಿಯ ದಾಖಲೆ ಸಂಗ್ರಹಿಸುವಲ್ಲಿ ಆಶಾಕಾರ್ಯಕರ್ತೆಯರ ಪಾತ್ರ ನಿರೀಕ್ಷೆಗೂ ಮೀರಿದ್ದು ಎಂದು ಆಶಾ ಉಸ್ತುವಾರಿ ಅಧಿಕಾರಿ ಮತ್ತು ಮಡಿಕೇರಿ ತಾಲೂಕು ಹೆಚ್ಚುವರಿ ಆರೋಗ್ಯಾಧಿಕಾರಿ ಎಸ್. ಗೋಪಿನಾಥ್ ಹೆಮ್ಮೆಯಿಂದ ಸ್ಮರಿಸಿಕೊಂಡರು. ಗುಲಾಬಿ ಸೀರೆಯ ಸಮವಸ್ತ್ರ ಧರಿಸಿ ಬೆಳಗ್ಗೆ ಮನೆ ಬಿಟ್ಟರೆ ಲಾಕ್ಡೌನ್ನ ಈ ದಿನಗಳಲ್ಲಿ ಯಾವುದೇ ವಾಹನವೂ ಇಲ್ಲದೇ ಗ್ರಾಮ ವ್ಯಾಪ್ತಿಯ ಪ್ರತೀ ಮನೆಗೂ ತೆರಳುವ ಈ ತಂಡ ಮನೆ ಮಂದಿಯಿಂದ ಸೂಕ್ತ ಮಾಹಿತಿ ಸಂಗ್ರಹಿಸಬೇಕಾಗಿದೆ. ಸಂಪರ್ಕ ತಡೆಯಲ್ಲಿರುವ ನೂರಾರು ಮಂದಿಯ ಮಾಹಿತಿ ಕಲೆ ಹಾಕುವುದಲ್ಲದೇ ಅವರ ಆರೋಗ್ಯ ತಪಾಸಣೆಯನ್ನೂ ಕೈಗೊಳ್ಳಬೇಕಾಗಿದೆ. ಜತೆಗೆ ಸಂಪರ್ಕ ತಡೆಯ ಅವಧಿಯಲ್ಲಿ ಅವರು ಮನೆಯಲ್ಲಿಯೇ ಇದ್ದಾರೆ ಎಂಬುದನ್ನೂ ಗಮನಿಸಬೇಕಾಗಿದೆ. ಮನೆ ಮನೆಗೆ ತೆರಳುವ ಸಂದರ್ಭ ಲಾಕ್ಡೌನ್ ದಿನಗಳಲ್ಲಿ ಯಾವುದೇ ಬಸ್, ವಾಹನಗಳು ಇವರಿಗೆ ದೊರಕುತ್ತಿಲ್ಲ. ಹೀಗಾಗಿ ಬಹುತೇಕ ಕಡೆ ಬೆವರು ಸುರಿಸುತ್ತಾ ಕಾಲ್ನಡಿಗೆ ಯಲ್ಲಿಯೇ ಸಾಗಬೇಕಾಗಿದೆ. ಬೆಟ್ಟ ಹತ್ತಿ, ಗುಡ್ಡ ಇಳಿದು ಮನೆ-ಮನೆ ಸುತ್ತಿ ತಮ್ಮ ಮನೆಗೆ ಬರಬೇಕಾದರೆ ಹೈರಾಣರಾಗಿರುತ್ತಾರೆ. ಸೂರ್ಯಸ್ತಮಾನ ವಾಗುತ್ತಿದ್ದಂತೆಯೇ ಮನೆ ಸೇರಿಕೊಳ್ಳುವ ಈ ಕಾರ್ಯಕರ್ತೆಯರು ಮತ್ತೆ ಸೂರ್ಯೋದಯವಾಗಿ ಕೆಲಹೊತ್ತಿನಲ್ಲಿಯೇ ಕಾರ್ಯೋನ್ಮುಖರಾಗುತ್ತಾರೆ. ಊರಿನವರ ಹಿತಕಾಯಲು. ಸರ್ಕಾರ ನಮ್ಮ ಕೆಲಸಕ್ಕೆ ವೈದ್ಯಕೀಯ ಸಿಬ್ಬಂದಿಗಳಂತೆ 50 ಲಕ್ಷ ರೂ. ಜೀವವಿಮೆ ನೀಡಿದೆಯಂತೆ. ಯಾರಿಗೆ ಬೇಕು ಸಾರ್ 50 ಲಕ್ಷ. ನಾವೇ ಸತ್ತುಹೋದರೆ ಈ 50 ಲಕ್ಷ ಯಾರಿಗಾಗಿ, ದುಡಿಯೋದು, ಹೈರಾಣಾಗೋದು ನಾವು. ಕೊರೊನಾ ಬಂದು ಸತ್ತರೇ 50 ಲಕ್ಷ ಕುಟುಂಬದವರಿಗಾ ? ಇದರ ಬದಲಿಗೆ ಆಶಾ ಕಾರ್ಯಕರ್ತೆಯರಿಗೆ ಈಗ ನೀಡುತ್ತಿರುವ 4 ರಿಂದ 7 ಸಾವಿರ ರೂ.ಗಳ ವೇತನವನ್ನು ಪ್ರತೀ ತಿಂಗಳು 12 ಸಾವಿರ ರೂ. ಗೆ ಹೆಚ್ಚಿಸಲಿ. ಆಗಲಾದರೂ ಬಹುತೇಕ ಬಡವರೇ ಇರುವ ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಸರ್ಕಾರ ಸೂಕ್ತ ಗೌರವ ನೀಡಿದಂತಾಗುತ್ತದೆ ಎಂದು ಸಲಹೆ ನೀಡಿದ್ದು ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ತೆಕ್ಕಡೆ ಪೂರ್ಣಿಮಾ ಬಸಪ್ಪ. ಊರು ಮತ್ತು ಊರಿನ ಜನ ಆರೋಗ್ಯವಂತರಾಗಿರ ಬೇಕು ಎಂಬುದೇ ನಮ್ಮ ಗುರಿ. ನಮ್ಮ ಜೀವದ ರಕ್ಷಣೆಯೊಂದಿಗೆ ದೇಶದ ಆರೋಗ್ಯ ರಕ್ಷಣೆಯೂ ಮುಖ್ಯ ಎಂಬುದನ್ನು ಕಳೆದ 1 ತಿಂಗಳ ಕೊರೊನಾ ಕರ್ತವ್ಯ ಸಂದರ್ಭ ಪ್ರತೀ ನಿತ್ಯವೂ ತಿಳಿದುಕೊಂಡಿದ್ದೇವೆ. ದೇವರೇ ಕಾಪಾಡಪ್ಪಾ ಎಂದು ಪ್ರಾರ್ಥಿಸಿಯೇ ನಿತ್ಯ ಮನೆ ಬಿಡುತ್ತೇವೆ ಎಂದರು ಪೂರ್ಣಿಮ. ದಿನಾ ಊಟ, ತಿಂಡಿ, ನೀರು ಸಿಗದೆ ಹೊಟ್ಟೆ ಒಣಗಿಸಿಕೊಂಡು ಕರ್ತವ್ಯ ಮಾಡುತ್ತಿದ್ದೇವೆ. ಹೊಸ-ಹೊಸ ಮಾಹಿತಿ ಸಂಗ್ರಹದ ಕೆಲಸವೂ ನಮಗೆ ಬರುತ್ತಿದೆ. ಹೀಗಿದ್ದರೂ ಗೊಣಗದೇ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಕಾರ್ಯಕರ್ತೆಯೋರ್ವರು ಹೇಳಿದರು. ಸಂಪರ್ಕ ತಡೆಯಲ್ಲಿದ್ದ ಸಂದರ್ಭ ಕೆಲವರು ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೇಲೆ ರೇಗಿದ್ದೂ ಇದೆ. ಕೈಗೆ ನಿಯಮದಂತೆ ಸೀಲ್ ಹಾಕಿಸಿಕೊಳ್ಳದೇ ಅಸಹಕಾರದ ವರ್ತನೆ ತೋರಿದ್ದೂ ಇದೆ. ಆಗೆಲ್ಲಾ ಪೆÇಲೀಸರ ನೆರವಿನೊಂದಿಗೆ ತಕ್ಕ ಪಾಠ ಕಲಿಸಿ ಅಗತ್ಯ ಮಾಹಿತಿ ಸಂಗ್ರಹಿಸಲಾಗಿದೆಯಂತೆ. ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರಿಲ್ಲದ ಕಡೆ ಅಂಗನವಾಡಿ ಕಾರ್ಯಕರ್ತೆ ಯರೂ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಮನೆ-ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದ ಜಿಲ್ಲೆಯ ಅಂಗನವಾಡಿಗಳ 836 ಕಾರ್ಯಕರ್ತೆಯರನ್ನು ಕೊರೊನಾ ಲಾಕ್ಡೌನ್ ಸಂದರ್ಭ ಜಿಲ್ಲೆಯಲ್ಲಿ ಮಾಹಿತಿ ಸಂಗ್ರಹಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ ತಿಳಿಸಿದರು. ಲಾಕ್ಡೌನ್ ದಿನಗಳಲ್ಲಿ ಎಲ್ಲರೂ ಮನೆಯಲ್ಲಿಯೇ ಉಳಿದರೆ ಈ ಕಾರ್ಯಕರ್ತೆ ಯರು ಮಾತ್ರ ಮನೆಯಲ್ಲಿ ಉಳಿದವರ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ನೀವು ಮನೆಯಲ್ಲಿಯೇ ಇರಿ, ಆರೋಗ್ಯವಂತರಾಗಿರಿ ಎಂದು ಉಭಯಕುಶಲೋಪರಿ ವಿಚಾರಿಸುತ್ತಿದ್ದಾರೆ. ಎಲ್ಲರೂ ಲಾಕ್ಡೌನ್ ಸಂದರ್ಭದ ಅನಿವಾರ್ಯ ರಜೆಯ ಕಾಲ ಕಳೆಯುತ್ತಿದ್ದರೆ ಈ ಕಾರ್ಯಕರ್ತೆಯರು ಮಾತ್ರ ಯಾವುದೇ ರಜೆಯಿಲ್ಲದೇ ತಿಂಗಳಿಡೀ ವಿರಾಮರಹಿತರಾಗಿ ಮನೆ-ಮನೆ ಬೇಟಿ ನೀಡಿ ಹೇಗಿದೆ ಆರೋಗ್ಯ ಎಂದು ಕೇಳುತ್ತಿದ್ದಾರೆ.
ಕೊನೇ ಹನಿ
....
ಮೊದಲೆಲ್ಲಾ ಮನೆ-ಮನೆಗೆ ಭೇಟಿ ನೀಡುತ್ತಿದ್ದ ಸಂದರ್ಭ ಕಾಫಿ, ಟೀ ಊಟ, ಹಣ್ಣು ನೀಡಿ ಉಪಚರಿಸುತ್ತಿದ್ದ ಅನೇಕರು ಈಗ ಆಶಾ ಕಾರ್ಯಕರ್ತೆ ಯರನ್ನೇ ಸಂಶಯದಿಂದ ನೋಡುತ್ತಿದ್ದಾರಂತೆ. ನಿಮಗೆ ಕೊರೊನಾ ಸೋಂಕು ತಗುಲಿಲ್ಲ ಎಂಬುದಕ್ಕೆ ಗ್ಯಾರಂಟಿಯೇನು ? ನೀವು ತಪಾಸಣೆ ಮಾಡಿದ್ದಕ್ಕೆ ದಾಖಲೆ ಇದೆಯೇ ಎಂಬೆಲ್ಲಾ ಪ್ರಶ್ನೆಗಳು ಬರುತ್ತಿವೆಯಂತೆ. ಕೆಲವೊಂದು ಮನೆಗಳಲ್ಲಿ ಹೊಸ್ತಿಲು ತುಳಿಯಲೂ ಬಿಡದೇ ಮನೆಯಿಂದ ಮಾರು ದೂರ ನಿಲ್ಲಿಸಲಾಗುತ್ತಿದೆ. ನೀವು ಅಲ್ಲಿಯೇ ಇರಿ. ಮನೆ-ಮನೆ ಸುತ್ತಾಡುವ ನಿಮಗೆ ಸೋಂಕಿಲ್ಲ ಎಂದು ಹೇಳುವುದು ಹೇಗೆ ? ಹತ್ತಿರವೇ ಬರಬೇಡಿ ಎನ್ನುವವರೂ ಇದ್ದಾರೆ. ಇಂಥವರಿಂದ ಒಂದು ಲೋಟ ನೀರು ನಿರೀಕ್ಷಿಸಲಾದೀತೇ ?
ಜನರ ಮನೆ ಬಾಗಿಲಿಗೆ ಹೋಗಿ ಆರೋಗ್ಯ ಸೇವೆ ನೀಡುತ್ತಿರುವ ನಮ್ಮನ್ನೇ ಚುಚ್ಚುವಂತೆ ಪ್ರಶ್ನೆ ಮಾಡುತ್ತಾರೆ. ಅಂಥವರ ಮನೆಯಿಂದ ಮರಳುವಾಗ ಎಂಥ ಪರಿಸ್ಥಿತಿಗೆ ನಮ್ಮನ್ನು ತಂದುಬಿಟ್ಟೆ ದೇವರೇ ಎಂದು ಅತ್ತದ್ದೂ ಇದೆ ಎಂದು ನೋವಿನಿಂದ ಹೇಳಿದ ಆ ಆಶಾ ಕಾರ್ಯಕರ್ತೆಯ ಕಣ್ಣಲ್ಲಿ ನೀರು ಹರಿಯುತ್ತಲೇ ಇತ್ತು. ಇಂಥ ನೋವಿನ ನಡುವೇ ಕೊಡಗನ್ನು ಕೊರೊನಾ ಮುಕ್ತವನ್ನಾಗಿಸಲು ತಳಮಟ್ಟದಲ್ಲಿ ಶ್ರಮವಹಿಸುತ್ತಲೇ ಇರುವ ಕೊರೊನಾ ಸಮರ ವೀರಮಣಿಯರಿಗೆ ಇರಲಿ ನಮ್ಮೆಲ್ಲರ ಹೆಮ್ಮೆಯ ನಮನ.