ಸೋಮವಾರಪೇಟೆ, ಏ.17: ಅಕ್ರಮ ಕಳ್ಳಭಟ್ಟಿ ತಯಾರಿಕೆಯಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಸೋಮವಾರಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮದ ಟಿ.ಟಿ.ರಾಜು, ಗಣೇಶ್, ನಂಜರಾಯಪಟ್ಟಣದ ಎಚ್.ಎನ್. ಮಂಜುನಾಥ್, ಕೆ.ಬಿ.ಸುರೇಶ್ ಬಂಧಿತ ಆರೋಪಿಗಳು.
ತೋಳೂರುಶೆಟ್ಟಳ್ಳಿಯ ನಿವಾಸಿ ಟಿ.ಟಿ.ರಾಜು ತನ್ನ ಮನೆಯಲ್ಲಿ ಕಳ್ಳಭಟ್ಟಿ ತಯಾರಿಸಿ ನಂಜರಾಯಪಟ್ಟಣದ ಆರೋಪಿಗಳಿಗೆ ಮಾರಾಟ ಮಾಡಿದ್ದ. ಮಾರುತಿ-800 ವಾಹನದಲ್ಲಿ 20 ಲೀಟರ್ ಕಳ್ಳಭಟ್ಟಿಯನ್ನು ಸಾಗಿಸುವ ಸಂದರ್ಭ ಪಟ್ಟಣದ ನ್ಯಾಯಾಲಯ ಸಮೀಪದ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನವನ್ನು ತಡೆದು, ಆರೋಪಿಗಳನ್ನು ಬಂಧಿಸಿದ್ದಾರೆ. ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಗಣೇಶ್ ಬಳಿಯಿದ್ದ 5ಸಾವಿರ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣಾಧಿಕಾರಿ ಶಿವಶಂಕರ್, ಪ್ರೊಬೆಷನರಿ ಎಸ್.ಐ. ಕರಿಬಸಪ್ಪ, ಪೇದೆಗಳಾದ ಶಿವಕುಮಾರ್, ಪ್ರವೀಣ್, ನವೀನ್, ಜಗದೀಶ್ ಹಾಗೂ ಚಾಲಕ ಕುಮಾರ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.