ಗಂಗೇಚ ಯಮನೇ ಚೈವ, ಗೋದಾವರಿ ಸರಸ್ವತೀ ನರ್ಮದೇ
ಸಿಂಧು ಕಾವೇರಿ ಜಲೈಸ್ಮಿನ್ ಸನ್ನಿಧಿಂ ಕುರುಂ ಎಂದು ಧಾರ್ಮಿಕ ಕ್ಷೇತ್ರಗಳಲ್ಲಾಗಲಿ, ಮನೆ-ಮಠಗಳಲ್ಲಾಗಲೀ ಸಪ್ತ ನದಿಗಳನ್ನು ಆವಾಹಿಸಿಕೊಂಡು ಯಾವದೇ ಶುಭ-ಅಶುಭ ಸಮಾರಂಭಗಳನ್ನು ಪ್ರಾರಂಭಿಸುವುದು ಸಂಪ್ರದಾಯ ಮತ್ತು ಭಾರತೀಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ಪುಣ್ಯವಾಹಿನಿಯಾಗಿ ಕಂಗೊಳಿಸುತ್ತಿರುವ ಶ್ರೀ ಕಾವೇರಿ ದಕ್ಷಿಣ ಭಾರತದ ಜನ ಜೀವನದಲ್ಲಿ ಅತೀ ಪ್ರಭಾವ ಬೀರಿರುವುದು ಎಲ್ಲರಿಗೂ ವೇದ್ಯವಾದ ವಿಚಾರ. ಶ್ರೀ ಮೂಲ ಕಾವೇರಿ ಕ್ಷೇತ್ರವು ಮಾನವನ ಶ್ರೇಯೋಭಿವೃದ್ಧಿಯನ್ನು ಕಲ್ಪಿಸಿಕೊಡಬಲ್ಲ ತೀರ್ಥಕ್ಷೇತ್ರ ವಾಗಿರುತ್ತದೆ. ಅದೆಷ್ಟೋ ಎಕರೆ ಭೂಮಿಯನ್ನು ಫಲವತ್ತಾಗಿ ಮಾಡಿರುವ ಕಾವೇರಿ ಈ ಭೂಮಿಯಲ್ಲಿ ಪ್ರಸಿದ್ಧಳಾಗಿದ್ದಾಳೆ. ಅದೇ ರೀತಿ ಕೋಟಿ ಜನರು ಕಾವೇರಿಯ ಪುಣ್ಯತೀರ್ಥದಲ್ಲಿ ತೀರ್ಥಸ್ನಾನ ಮಾಡಿ ಭವರೋಗವನ್ನು ನಿವಾರಿಸಿಕೊಂಡಿದ್ದಾರೆ. ತಲಕಾವೇರಿಯಿಂದ ಮುಂದೆ ಹರಿಯುವ ಕಾವೇರಿಯ ಎಡಬಲಗಳಲ್ಲೂ ಅನೇಕ ಪುಣ್ಯ ಕ್ಷೇತ್ರಗಳನ್ನು ನಾವು ಕಾಣಬಹುದು. ಸುಮಾರು 765 ಕಿ. ಮೀ. ಹರಿಯುವ ಕಾವೇರಿಯು ದೊಡ್ಡನದಿಯಾಗಿ ಭಕ್ತರ ಪಾಲಿಗೆ ಜೀವನದಿಯಾಗಿ ಇಂದಿಗೂ ಬೆಳಗುತ್ತಿದ್ದಾಳೆ.
ಈ ನಮ್ಮ ಕೊಡಗು ಜಿಲ್ಲೆಯಲ್ಲಿ ಹುಟ್ಟಿದ ಕಾವೇರಿಯ ಬಗ್ಗೆ ಕಾವೇರಿ ಕಥನದ ರೂಪದಲ್ಲಿ ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರಿಂದ ಪ್ರತಿ ಭಾನುವಾರದ ಸಂಚಿಕೆಯಲ್ಲಿ ಅತ್ಯಂತ ಆಕರ್ಷಣೀಯವಾಗಿ ಪ್ರಕಟಗೊಳ್ಳುತ್ತಿದ್ದು, ಜಿಲ್ಲೆಯ ಮಂದಿಗೆ ಸಂತೋಷತಂದಿದೆ. ಇದರ ಹಿಂದೆ ಇರುವ ಪರಿಶ್ರಮವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕಾಗಿದೆ. ಲೇಖಕರು ಅಭಿನಂದನಾರ್ಹರು. ಇದೇ ಕೊಡಗಿನಲ್ಲಿ ಹುಟ್ಟಿ ಬೆಳೆದು ಕಾವೇರಿಯ ಬಗ್ಗೆ ತೀವ್ರ ಸಂಶೋಧನೆ ಮಾಡುವುದು ಅತ್ಯಂತ ಕಠಿಣ ಕೆಲಸವೇ ಆಗಿದೆ. ರಾಮಾಯಣ, ಮಹಾಭಾರತ ವೇದ ಪುರಾಣಗಳನ್ನು ಪರಿಶೀಲಿಸಿಕೊಂಡು ಪ್ರತಿವಾರವೂ ಪ್ರಕಟಿಸುವ ‘‘ಶಕ್ತಿ’’ಗೆ ಚಿರಋಣಿಯಾಗಿರಬೇಕು ಓದುಗರಾದ ನಾವೆಲ್ಲ. ಈ ಹಿಂದೆ ಕಾವೇರಿ ವೈಭವ ಗ್ರಂಥವನ್ನು ಬರೆದ ಭಾಗಮಂಡಲದ ಎದುರ್ಕಳ ಶಂಕರನಾರಾಯಣ ಭಟ್ಟರು ಶ್ರೀಕಾವೇರಿಯ ಬಗ್ಗೆ (ಪೂರ್ಣ ಅಲ್ಲದಿದ್ದರೂ) ಸಂಕ್ಷಿಪ್ತವಾಗಿ ಕಾವೇರಿ ಹರಿದು ಪೂಂಪೂಹಾರ್ ಎಂಬಲ್ಲಿ ಬಂಗಾಳ ಸಮುದ್ರದೊಡನೆ ಸೇರುವ ತನಕ ಬರೆದು ಕಾವೇರಿಯ ಪುಣ್ಯ ಕಥೆಯನ್ನು ಪ್ರಕಟಿಸಿ ‘ಕಾವೇರಿ ಮಹಾತ್ಮೆ’ ಪ್ರಖ್ಯಾತವಾಗಿದೆ. ಆದರೆ ಕಾವೇರಿಯ ಮಹಿಮೆ ಇಷ್ಟು ಮಾತ್ರವಲ್ಲ, ಇನ್ನಷ್ಟು ಸಂಶೋಧನೆಯನ್ನು ಶ್ರೀಯುತ ರಾಜೇಂದ್ರರವರು ‘ಕಾವೇರಿಯ ಕಥನ’ ಎಂಬ ಶೀರ್ಷಿಕೆಯಡಿ ಪ್ರಕಟಗೊಂಡು ಶಕ್ತಿ ಪತ್ರಿಕೆಯ ಹಿರಿಮೆ, ಗರಿಮೆಯನ್ನು ಹೆಚ್ಚಿಸಿ ಓದುಗರು ಪ್ರತೀ ವಾರವೂ ಇದಕ್ಕಾಗಿ ಹಾತೊರೆಯುತ್ತಿದ್ದಾರೆ. ಸ್ಕಾಂದ ಪುರಾಣಗಳಲ್ಲಿ ಬರುವ ಲೋಪಾಮುದ್ರೆ, ಕವೇರ ಮುನಿ, ಅಗಸ್ತ್ಯ ಮಹರ್ಷಿಗಳ ಬಗ್ಗೆ ಅತ್ಯಂತ ಜಾಗರೂಕತೆಯಿಂದ ಸಂಸ್ಕøತವನ್ನು ಅರ್ಥೈಸಿಕೊಂಡು ಹಾಗೂ ಪಂಡಿತ ರೊಂದಿಗೆ ವಿಮರ್ಶಿಸಿ ಜನರಿಗೆ ಪತ್ರಿಕೆಯ ಮೂಲಕ ನೀಡುವದಕ್ಕೆ ಆಭಾರಿ ಯಾಗಬೇಕಾಗಿದೆ. ಕಾವೇರಿಯ ಬಗ್ಗೆ ಆಗಲಿ, ಮಹರ್ಷಿಗಳ ಬಗ್ಗೆಯಾಗಲೀ ಸಂಶೋಧನೆ ಮಾಡುವುದು ಅತ್ಯಂತ ಕಷ್ಟದ ಕೆಲಸವೇ ಸರಿ. ಮುಂದಿನ ಪೀಳಿಗೆಗೆ ಇದೊಂದು ಮಾರ್ಗದರ್ಶನ ನೀಡಿದಂತಾಗಿದೆ ಮತ್ತು ನಮ್ಮ ಸಂಸ್ಕøತಿಯ ಪ್ರತೀಕವನ್ನು ನಾವು ಜನರಿಗೆ ಕೊಟ್ಟಂತಾಗುತ್ತದೆ ಎಂದು ನನ್ನ ಅಭಿಪ್ರಾಯವಾಗಿದೆ. ‘ಹಿತ್ತಲಗಿಡ ಮದ್ದಲ್ಲ’ವೆಂಬುದನ್ನು ನಾವು ಉಪೇಕ್ಷಿಸು ವಂತಿಲ್ಲ. ಈ ಹಿಂದೆ ರಾಜೇಂದ್ರ ಅವರ ಪಿತಾಶ್ರೀಯವರಾದ ದಿ. ಬಿ. ಎಸ್. ಗೋಪಾಲಕೃಷ್ಣ ಅವರು ಉಪನಿಷತ್, ಮಹಾಭಾರತದ ಭೀಮ, ಮತ್ತಿತರ ಮಹತ್ತರ ರಾಮಾಯಣ ಪಾತ್ರಗಳನ್ನು ಅತ್ಯಂತ ಮನೋಜ್ಞವಾಗಿ ಬರೆದು ಪ್ರಕಟಿಸಿರುವುದನ್ನು ನಾವು ಕಾಣಬಹುದು. ಶ್ರೀಯುತರು ಬರೆದ ಭೀಮ ಅಥವಾ ಇನ್ಯಾವುದೇ ಗ್ರಂಥಗಳ ಪಾತ್ರಗಳನ್ನು ವಿಮರ್ಶೆ ಮಾಡಿ ಸದ್ವಿಚಾರವನ್ನು ಜನತೆಗೆ ನೀಡಿರುವುದನ್ನು ನಾವು ಸ್ಮರಿಸಿಕೊಳ್ಳಬೇಕಾಗುತ್ತದೆ. ಅಂತೆಯೇ ಕಾವೇರಿ ಕಥನದಲ್ಲಿ ಬರುವ ಅಗಸ್ತ್ಯ ಮಹರ್ಷಿಗಳ ಬಗ್ಗೆ ಬರೆದಿರುವ ಅಗಸ್ತ್ಯರಿಂದ ಶ್ರೀರಾಮರಿಗೆ ವಿಶ್ವಕರ್ಮ ನಿರ್ಮಿತ ದಿವ್ಯಾಭರಣ ಅರ್ಪಣೆ ಎಂಬ ಶೀರ್ಷಿಕೆಯಡಿ ಬರೆದಿರುವ ಕಥನ ಚೆನ್ನಾಗಿ ಮೂಡಿ ಬಂದಿದೆ. ಸಪ್ತರ್ಷಿಗಳಾದ ಗೌತಮ, ವಿಶ್ವಾಮಿತ್ರ, ಜಮದಗ್ನಿ, ಅತ್ರಿ, ಭಾರದ್ವಾಜ, ವಸಿಷ್ಟ, ಕಶ್ಯಪರ ವಿಚಾರವನ್ನು ಪರಾಮರ್ಶಿಸಿ, ಅಗಸ್ತ್ಯ ಮಹರ್ಷಿಗಳ ಬಗ್ಗೆ ರಾಮಾಯಣದ ಪ್ರಸ್ತಾಪವನ್ನು ಮಾಡಿದ್ದಾರೆ. ಭಾರತ ದೇಶದ ಮಹಿಮಾನ್ವಿತರಾದ ಮಹರ್ಷಿಗಳಲ್ಲಿ ಅಗಸ್ತ್ಯ ಮಹರ್ಷಿಗಳೂ ಒಬ್ಬರು. ಇವರು ವಿಷ್ಣುವಿನ ಅಂಶದಿಂದ ಹುಟ್ಟಿದವರು. ಇವರ ಬಗ್ಗೆ ಇತಿಹಾಸ ಪುರಾಣಾದಿಗಳಲ್ಲಿ ಮಹತ್ತರವಾದ ಅಂಶಗಳು ದೊರಕುತ್ತದೆ. ಅಗಸ್ತ್ಯರು ಎಲ್ಲಾ ವಿದ್ಯೆಗಳಲ್ಲೂ ಪಾರಂಗತರು, ಅಸ್ತ್ರಶಸ್ತ್ರ ವಿದ್ಯೆಗಳನ್ನೂ ಬಲ್ಲವರಾಗಿದ್ದರು. ಅಗಸ್ತ್ಯರ ಬಗ್ಗೆ ಸಾಕಷ್ಟು ಕಥೆಗಳಿರುವುದು ಕಂಡು ಬಂದರೂ ಕಾವೇರಿ ಕಥನದಲ್ಲಿ ಇನ್ನು ಕೂಡಾ ಅವರ ಪುರಾಣ ಕಥೆಗಳನ್ನು ಪ್ರಕಟಿಸಬೇಕೆಂದು ಆಗ್ರಹ. ಅಗಸ್ತ್ಯರ ಪತ್ನಿಯಾಗಿ ಕಾವೇರಿಯು ಈ ಭೂಮಿಯಲ್ಲಿ ಸಂಚಲನಗೊಂಡಿರುವುದು ನಿಜವಾದರೂ ಅಗಸ್ತ್ಯರೊಡನೆ ಲೋಪಾಮುದ್ರೆಯ ವಿವಾಹ, ಅಗಸ್ತ್ಯರಿಂದ ಸಮುದ್ರ ಶೋಷಣೆ ಮತ್ತು ಕಾಲೇಯರ ವಿನಾಶ, ನಹುಷನಿಗೆ ಸರ್ಪವಾಗುವಂತೆ ಅಗಸ್ತ್ಯರ ಶಾಪ, ಅಗಸ್ತ್ಯರಿಂದ ವಿಂಧ್ಯ ಪರ್ವತದ ಬೆಳೆಯುವಿಕೆ ನಿಗ್ರಹ, ಅಗ್ನಿದೇವನೇ ಅಗಸ್ತ್ಯರಾಗಿ ಹುಟ್ಟಿದುದು, ಪಾರ್ವತಿ ಪರಮೇಶ್ವರರ ವಿವಾಹದಲ್ಲಿ ಅಗಸ್ತ್ಯರ ಉಪಕಾರ, ಪಾಂಡ್ಯ ರಾಜನಿಗೆ ಅಗಸ್ತ್ಯರ ಶಾಪ, ಶ್ರೀರಾಮನಿಗೆ ಆದಿತ್ಯ ಹೃದಯದ ಮಂತ್ರ ಉಪದೇಶ, ಕ್ರೌಂಚನಿಗೆ ಪರ್ವತವಾಗುವಂತೆ ಅಗಸ್ತ್ಯರ ಶಾಪ, ಅಗಸ್ತ್ಯರ ಕಮಂಡಲು ಸದಾ ಜಲಪೂರ್ಣ ಊರ್ವಶಿ, ಜಯಂತ ಮತ್ತು ನಾರದರಿಗೆ ಅಗಸ್ತ್ಯರ ಶಾಪ, ಅಗಸ್ತ್ಯರಿಂದ ದುಷ್ಯಂತನ ಶಾಪ ವಿಮೋಚನೆ, ಅಗಸ್ತ್ಯರು ಚಿನ್ನದ ಬಳೆಯನ್ನು ಸಂಪಾದಿಸಿದುದು, ಅಗಸ್ತ್ಯರು ಕುಬೇರ ಮತ್ತು ಅವನ ಸಂಗಡಿಗರಿಗೆ ಶಾಪವನ್ನು ಕೊಡುವುದು, ಅಗಸ್ತ್ಯರೊಡನೆ ಇಂದ್ರನ ಸಂಘರ್ಷಗಳ ಕಥೆಗಳು ಇರುವುದನ್ನು ನಾವು ಕಾಣಬಹುದು. ಅಗಸ್ತ್ಯರು ಭಾರತದ ಉತ್ತರ-ದಕ್ಷಿಣದ ಎಲ್ಲಾ ಆಶ್ರಮಗಳಿಗೂ ಹೋಗಿ ಅಲ್ಲಿರುವ ಅನೇಕ ಮಹರ್ಷಿಗಳ ಸಂದರ್ಶನವನ್ನು ಮಾಡಿದವರು ಉಲ್ಲೇಖಾರ್ಹ. ಇವರನ್ನು ಕುಳ್ಳ ಮುನಿಯೆಂದೇ ವರ್ಣಿಸಲಾಗಿದೆ. ಇವರು ತಮ್ಮ ತಪೋ ಮಹಿಮೆಯಿಂದ ಮಾಡಿದ ಅದ್ಭುತ ಕಾರ್ಯಗಳನ್ನು ಜನರು ಈಗಲೂ ಕೊಂಡಾಡುವರು. ಇವರು ಪರಶಿವನ ಮತ್ತು ಷಣ್ಮುಖನ ಪರಮ ಭಕ್ತರು. ಇವರು ಹೋದ ಕಡೆ ಮತ್ತು ಕಾವೇರಿ ನದಿದಂಡೆಗಳಲ್ಲಿ ಶಿವಲಿಂಗಗಳನ್ನು ಸ್ಥಾಪನೆ ಮಾಡಿದರೆಂದು ಐತಿಹ್ಯವುಂಟು. ದಕ್ಷಿಣ ದೇಶಕ್ಕೆ ಬಂದ ಮೊದಲ ಋಷಿಗಳು ಅಗಸ್ತ್ಯರು. ಹಾಗಾಗಿ ದಕ್ಷಿಣ ದಿಕ್ಕನ್ನು ಅಗಸ್ತ್ಯ ದಿಕ್ಕೆಂದು ಕರೆಯುವ ವಾಡಿಕೆ ಇದೆ. ಲಲಿತಾ ಸಹಸ್ರನಾಮದ ಅಪ್ರತಿಮ ಕೊಡುಗೆ ನೀಡಿದವರು ಅಗಸ್ತ್ಯರು. ಮಂತ್ರಶಾಸ್ತ್ರ, ತಂತ್ರಶಾಸ್ತ್ರಗಳೆರಡನ್ನು ಬಲ್ಲವರಾಗಿರುವ ಮಹಾಮಹಿಮರು ಲೋಪಾಮುದ್ರೆಯ ಪತಿಯಾಗಿ ಕಾವೇರಿ ಭೂಮಿಯಲ್ಲಿ ಅವರ ಸಂಚಾರವಾಗಿರುವದು ಆ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು.
ಕೊಡಗಿನವರಾದ ಸದ್ಗುರು, ದಿವಂಗತ ಬಿ. ಕೆ. ಸುಬ್ಬಯ್ಯ ರವರು ಅಗಸ್ತ್ಯ ಮಹರ್ಷಿಗಳ ಹಿರಿಮೆಯ ಬಗ್ಗೆ ಸಾಕಷ್ಟು ಸಲ ಶಿಷ್ಯರೊಂದಿಗೆ ವಿಚಾರವಿನಿಮಯ ವನ್ನು ಮಾಡಿದ್ದು ಅಗಸ್ತ್ಯರೆಂದರೆ ಸಾಮಾನ್ಯ ಋಷಿಯಲ್ಲವೆಂದು ಹಲವು ಬಾರಿ ವಾಖ್ಯಾನಿಸಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಬೇಕಾಗುತ್ತದೆ. ಕಾವೇರಿ ವೈಭವದ ಗ್ರಂಥಕರ್ತರಾದ ಶ್ರೀ ಎದುರ್ಕಳ ಶಂಕರನಾರಾಯಣ ಭಟ್ಟರು ಕೂಡಾ ತಮ್ಮ ಗ್ರಂಥದಲ್ಲಿ ‘‘ಅಗಸ್ತ್ಯಮಹರ್ಷಿಗಳ ಬಗ್ಗೆ ಪ್ರಸ್ತಾಪ ವೇದಗಳು ಮತ್ತು ಪುರಾಣ ಇತಿಹಾಸದಲ್ಲಿ ಬಂದಿದೆ. ಶ್ರೀ ಅಗಸ್ತ್ಯ ಮಹರ್ಷಿಗಳು ಒಬ್ಬರೇ. ಅವರು ವೇದಕಾಲದಿಂದ ಪುರಾಣ ಇತಿಹಾಸ ಕಾಲಗಳ ತನಕ ಸಾಗಿ ಬಂದವರು ಆಗಿರುತ್ತಾರೆ. ಅವರು ಯೋಗಸಿದ್ಧಿಯ ಮಹಾಪುರುಷರು. ಮಹರ್ಷಿ ಅಗಸ್ತ್ಯರು ತಮ್ಮ ಅವತಾರ ಕಾರ್ಯವನ್ನು ಭೂಮಿಯಲ್ಲಿ ಮುಗಿಸಿ ನಕ್ಷತ್ರ ಲೋಕದಲ್ಲಿ ನೆಲೆಗೊಂಡು ದಿವ್ಯ ಶಕ್ತಿಯಿಂದ ವ್ಯಾಪಕವಾಗಿ, ಮಹಾ ಮಹಿಮರಾಗಿ ಬೆಳಗು ತ್ತಿದ್ದಾರೆ. ನಂಬಿ ಕರೆದವರ ಪಾಲಿಗೆ ಅಭಯ, ಆಶೀರ್ವಾದಗಳನ್ನು ನೀಡುತ್ತಾರೆ. ಎಂಬದಾಗಿ ನಂಬಿ ಅನುಭವ ಹೊಂದಿದವರು ಪ್ರಾಚೀನ ಕಾಲದಿಂದ ಆಧುನಿಕ ಕಾಲದ ತನಕ ಅನೇಕ ಮಂದಿ ಆಗಿ ಹೋಗಿದ್ದಾರೆ. ಶ್ರೀ ಅಗಸ್ತ್ಯ ಮಹರ್ಷಿಗಳ ಬಗೆಗೆ ಇರುವ ಪರಂಪರಾಗತ ನಂಬಿಕೆ, ಅಭಿಮಾನರ ಸಂಗತಿ ಇದಾಗಿದೆ ಎಂದು ಉಲ್ಲೇಖಿಸಿರುವದನ್ನು ನೆನೆಪಿಸಿಕೊಳ್ಳಬೇಕಾಗಿದೆ. ವೇದಕಾಲ ದಿಂದ ಪುರಾಣ ಇತಿಹಾಸ ಕಾಲದ ತನಕ ದಿವ್ಯಶಕ್ತಿಯಿಂದ ಕೂಡಿ ವಿವಿಧೆಡೆ ಗಳಲ್ಲಿ ಅವಕಾಶ ಕಾರ್ಯವನ್ನು ನಡೆಸಿ ಕೊನೆಗೆ ಈ ಲೋಕದಿಂದ ಕಣ್ಮರೆಯಾಗಿ ನಕ್ಷತ್ರಲೋಕದಲ್ಲಿ ನೆಲೆಗೊಂಡಿರುತ್ತಾರೆ. ಎಂಬ ನಂಬಿಕೆ ಪಾರಮಾರ್ಥಿಕ ನೆಲೆಯಿಂದ ಸ್ಪಷ್ಟವಾಗುವದರಿಂದ ಕಾವೇರಿ ಕಥನದಲ್ಲಿ ಅಗಸ್ತ್ಯ ಮಹರ್ಷಿಗಳ ಬಗ್ಗೆ ಇನ್ನು ಹೆಚ್ಚಿನ ವಿಚಾರಗಳು ಹೊರಬರಲೆಂದು ಆಶಯ’’ ಎಂದು ಬರೆದಿದ್ದಾರೆ.
ದಿ. ಎದುರ್ಕಳ ಶಂಕರನಾರಾಯಣಭಟ್ಟರು ಕಾವೇರಿ ವೈಭವ ಗ್ರಂಥವನ್ನು ತಲಕಾವೇರಿಯಲ್ಲಿ ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ಪೂಜ್ಯ ಗುರುಗಳಾದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಬ್ರಹ್ಮಗಿರಿಯ ತಪ್ಪಲಿನಲ್ಲಿರುವ ಈ ಶ್ರೀ ತಲಕಾವೇರಿ ಯಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಗ್ರಂಥವು ಮಹರ್ಷಿ ಅಗಸ್ತ್ಯರ ಪುಣ್ಯ ನೆಲದಲ್ಲಿ ಸಮರ್ಪಿಸಿರುವದು ಅತ್ಯಂತ ಸಂತೋಷ ತಂದಿದೆ ಎಂದು ವ್ಯಾಖ್ಯಾ ನಿಸಿರುವದನ್ನು ಈಗ ನೆನಪಿಸಬೇಕಾಗುತ್ತದೆ. ಕಾವೇರಿ ಕಥನದ ಈ ಲೇಖನವು ಜಿಲ್ಲೆಯ ಭಕ್ತರಿಗೆ ಜ್ಞಾನ ದೀವಿಗೆ ಯಾಗಿದ್ದು ಇದನ್ನೇ ಆಧಾರವಾಗಿಟ್ಟುಕೊಂಡು ಪಿಹೆಚ್‍ಡಿಯನ್ನು ಮಾಡಬಹುದು ಎಂದು ನನ್ನ ಅನಿಸಿಕೆ ಯಾಗಿದೆ, ಅಲ್ಲದೆ ಟಿ.ವಿ. ಧಾರಾವಾಹಿಯನ್ನು ಕೂಡ ಮಾಡಿದಲ್ಲೂ ಜನಮೆಚ್ಚುಗೆ ಪಡೆಯಬಹುದು ಈ ಕಥಾ ಲೇಖನವು ವಿಸ್ತಾರವಾಗಿ ಪ್ರಕಟವಾದ ನಂತರ ಯೋಗ್ಯ ರೀತಿಯಲ್ಲಿ ಗ್ರಂಥವನ್ನು ಪ್ರಕಟಿಸುವಂತೆ ನಮ್ಮೆಲ್ಲರ ಆಶಯವಾಗಿದೆ. ?ಎಸ್. ಎಸ್. ಸಂಪತ್‍ಕುಮಾರ್, ಮಡಿಕೇರಿ.