ಮಡಿಕೇರಿ, ಏ. 17 : ಕೊರೊನಾ ಸೋಂಕು ಹರಡು ವುದನ್ನು ನಿಯಂತ್ರಿಸಲು ಜಿಲ್ಲೆಯಲ್ಲಿ ಸುಮಾರು 30 ಮಹಿಳೆಯರು ಮುಖಗವಸು ಹೊಲಿಯುವುದರಲ್ಲಿ ನಿರತರಾಗಿದ್ದಾರೆ. ಕೊರೊನಾ ದೇಶದಾದ್ಯಂತ ಹರಡಲು ಆರಂಭವಾದ ಕೂಡಲೇ ಕೆಲವು ಅಂಗಡಿಗಳು ಮುಖಗವಸುಗಳನ್ನು ದುಬಾರಿ ದರದಲ್ಲಿ ಮಾರಾಟ ಮಾಡಲು ಆರಂಭಿಸಿದವು. ಇದರ ವಿರುದ್ಧ ಸಾರ್ವಜನಿಕರ ಆಕ್ರೋಶದ ಮೇರೆಗೆ ಜಿಲ್ಲಾಡಳಿತದಿಂದ ಕ್ರಮ ತೆಗೆದುಕೊಳ್ಳಲಾಯಿತು. ನಂತರ ಕೆಲವು ದಿನಗಳಲ್ಲಿ ಒಳ್ಳೆಯ ಗುಣಮಟ್ಟದ ಮುಖಗವಸಗಳ ಕೊರತೆಯೂ ಉಂಟಾಯಿತು.ಕೊರೊನಾ ವಿರುದ್ಧ ಸದಾ ಹೋರಾಡುತ್ತಿರುವ ವೀರರು ಹಾಗೂ ಕೆಲ ಬಡ ಕುಟುಂಬಗಳಿಗೆ ಇದರ ಅವಶ್ಯಕತೆ ಹೆಚ್ಚಿದ್ದು ಜಿಲ್ಲಾಡಳಿತದ ಪ್ರಾಕೃತಿಕ ವಿಕೋಪ ನಿಧಿಯಿಂದ ರೂ. 1.5 ಲಕ್ಷ ಅನುದಾನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಬಿಡುಗಡೆಯಾಗಿದೆ.10,000 ಗವಸುಗಳನ್ನು ತಯಾರಿಸುವ ಗುರಿ ರೂ.1.5 ಲಕ್ಷ ಅನುದಾನದಲ್ಲಿ ಸುಮಾರು 10,000 ಮುಖಗವಸುಗಳನ್ನು ತಯಾರಿಸುವ ಗುರಿಯಿದೆ. ಕಳೆದ 2 ದಿನಗಳಿಂದ ಮುಖಗವಸುಗಳನ್ನು ತಯಾರಿಸುತ್ತಿದ್ದು ಈಗಾಗಲೇ 300 ಮುಖಗವಸುಗಳನ್ನು ತಯಾರಿಸಲಾಗಿದೆ. ಕಾಟನ್ ಬಟ್ಟೆಯನ್ನು ಉಪಯೋಗಿಸಿ ಮುಖಗವಸುಗಳನ್ನು ತಯಾರಿಸಲಾಗುತ್ತಿದೆ. ಈ ಮುಖಗವಸುಗಳು 3 ಪದರಗಳನ್ನು ಹೊಂದಿರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅರುಂಧತಿ ತಿಳಿಸಿದ್ದಾರೆ.
ಸ್ವಯಂ ಸೇವಕರು, ಸಂಘ ಸಂಸ್ಥೆಗಳ ಪ್ರಯತ್ನ
ಮುಖಗವಸುಗಳ ಹೊಲಿಕೆಯ ಸೇವೆಗೆ ಅನೇಕ ಮಂದಿ ಮಹಿಳೆಯರು ಮುಂದೆ ಬಂದಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟಸಾಧ್ಯವಾದ ಕಾರಣ ಸುಮಾರು 30 ಮಹಿಳೆಯರಿಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಮಹದೇವಪೇಟೆ, ಇಂದಿರಾನಗರ, ಕಡಗದಾಳು, ಸುಂಟಿಕೊಪ್ಪ, ಈ 4 ಕಡೆಗಳಲ್ಲಿ ಒಡಿಪಿ ಸಂಸ್ಥೆ, ಸ್ತ್ರೀ ಶಕ್ತಿ ಸಂಘ, ಸ್ವಸ್ಥ ಸೇರಿದಂತೆ ಸ್ವಯಂ ಸೇವಕರು ಮುಖಗವಸು ತಯಾರಿಸುವಲ್ಲಿ ಭಾಗಿಯಾಗಿದ್ದಾರೆ. ಆರೋಗ್ಯ ತಪಾಸಣೆಯ ನಂತರ ಅವಕಾಶ
ಮುಖಗವಸು ಹೊಲಿಯುವಾಗ ಕೊರೊನಾ ನಿಯಂತ್ರಣ ಸಂಬಂಧಪಟ್ಟ ಎಲ್ಲಾ ಸೂಚನೆಗಳನ್ನು ಪಾಲಿಸಲಾಗುತ್ತಿದೆ. ಹೊಲಿಯುವವರ ಆರೋಗ್ಯ ತಪಾಸಣೆಯ ನಂತರವೇ ಅವರಿಗೆ ಈ ಸೇವೆ ಮಾಡಲು ಅವಕಾಶ ನೀಡಲಾಗುತ್ತಿದೆ. ಸೇವೆ ಸಲ್ಲಿಸುತ್ತಿರುವವರಿಗೆ ಜಿಲ್ಲಾಡಳಿತದ ಅನುದಾನದಿಂದಲೇ ಗೌರವಧನ ನೀಡಲಾಗುತ್ತಿದೆ ಎಂದು ಅರುಂಧತಿ ಮಾಹಿತಿ ನೀಡಿದ್ದಾರೆ.
ಮುಖಗವಸುಗಳನ್ನು ತಯಾರಿಸಿದ ನಂತರ ಕೊರೊನಾ ವಿರುದ್ಧ ಹೋರಾಡುತ್ತಿರುವ ಅನೇಕ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಬಡ ಕುಟುಂಬದವರಿಗೆ ವಿತರಿಸ ಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮುಖಗವಸು ತಯಾರಿಸಲು ಬೇಕಾದ ಬಟ್ಟೆಯನ್ನು ಖರೀದಿಸಲು ದಾನಿಗಳು ನೆರವು ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದ್ದಾರೆ.