ಗೋಣಿಕೊಪ್ಪಲು, ಏ. 18 : ಮೈಸೂರು ಜಿಲ್ಲೆಯಿಂದ ಕೊಡಗಿಗೆ ಆಗಮಿಸುವವರನ್ನು ಕಡ್ಡಾಯವಾಗಿ ಕ್ಯಾರಂಟೈನ್‍ಗೆ ಒಳಪಡಿಸಿ ಬಳಿಕ ಬಿಡುಗಡೆ ಮಾಡಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದರು.ಆನೆಚೌಕೂರು ಅರಣ್ಯ ಗೇಟ್‍ಗೆ ಭೇಟಿ ನೀಡಿ ಪೊಲೀಸರೊಂದಿಗೆ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಮೈಸೂರಿನಿಂದ ಬಂದವರಿಗೆ ಪ್ರವೇಶ ನೀಡಬೇಡಿ. ಒಂದು ವೇಳೆ ಅನಿವಾರ್ಯವಾದಲ್ಲಿ ಅವರಿಗೆ ಸೀಲ್ ಹಾಕಿ ಮೊದಲು ಕ್ವಾರಂಟೈನ್‍ಗೆ ಒಳಪಡಿಸಿ ಎಂದು ಸ್ಥಳದಲ್ಲಿದ್ದ ಸಿಪಿಐ ರಾಮರೆಡ್ಡಿ ಹಾಗೂ ಎಸ್‍ಐ ಸುರೇಶ್ ಬೋಪಣ್ಣ ಅವರಿಗೆ ಕಟ್ಟು ನಿಟ್ಟಾಗಿ ಸೂಚಿಸಿದರು.
ಜಿಲ್ಲೆಯು ಒಂದು ಪ್ರಕರಣದಿಂದ ಮುಕ್ತವಾಗಿ ಇದೀಗ ಚೇತರಿಸಿಕೊಳ್ಳುತ್ತಿದೆ. ಹೊರ ಜಿಲ್ಲೆಯವರಿಗೆ ಪ್ರವೇಶ ನೀಡಿ ಮತ್ತೆ ಪ್ರಕರಣ ಬೆಳೆಯುವುದಕ್ಕೆ ಅವಕಾಶ ನೀಡಬೇಡಿ. ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಬಹಳಷ್ಟು ನೌಕರರು ತಮ್ಮ ವಾಹನದಲ್ಲಿ ನಿತ್ಯವೂ ಹೊರ ಜಿಲ್ಲೆಯಿಂದ ಆಗಮಿಸುತ್ತಿರುವುದು ಕಂಡು ಬಂದಿದೆ. ಅಂತಹ ನೌಕರರು ಇಂದಿನಿಂದಲೇ ಕಡ್ಡಾಯವಾಗಿ ಕೇಂದ್ರ ಕಚೇರಿಯಲ್ಲಿ ತಂಗಬೇಕು. ಜಿಲ್ಲೆಯಿಂದ ಹೊರಗೆ ಓಡಾಡಿ ಮತ್ತೆ ಗಂಡಾಂತರ ತರುವುದು ಬೇಡ. ಜಿಲ್ಲೆಯಲ್ಲಿಯೇ ಉಳಿಯುವುದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಪಿರಿಯಾಪಟ್ಟಣ, ಪಂಚವಳ್ಳಿ ಕಡೆಯಿಂದ ಗೋಣಿಕೊಪ್ಪಲಿಗೆ ಬರುವ ತರಕಾರಿ ವಾಹನಗಳಲ್ಲಿ ಚಾಲಕ ಸೇರಿದಂತೆ ಕೇವಲ ಇಬ್ಬರು ಮಾತ್ರ ಇರಬೇಕು. ಮೂರನೆ ಯವರಿದ್ದರೆ ಅದಕ್ಕೆ ಅವಕಾಶ ನೀಡಬೇಡಿ ಎಂದು ಹೇಳಿದರು. ತಿತಿಮತಿ ಉಪ ಪೊಲೀಸ್ ಠಾಣೆಗೆ ಭೇಟಿ ನೀಡಿ ಹೆಡ್ ಕಾನ್ಸ್‍ಸ್ಟೇಬಲ್ ಸುರೇಂದ್ರ ಅವರೊಂದಿಗೆ ಮಾತನಾಡಿದ ಬೋಪಯ್ಯ ಅನಗತ್ಯವಾಗಿ ಬೈಕ್‍ನಲ್ಲಿ ಓಡಾಡುವವರನ್ನು ಹಿಡಿದು ಒಳಗೆ ಹಾಕಿ ಅವರ ಮೇಲೆ ಮೊಕದ್ದಮೆ ದಾಖಲಿಸಿ ಸರಕಾರದ ಆದೇಶವನ್ನು ಚಾಚು ತಪ್ಪದೆ ಪಾಲಿಸಿ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಅರುಣ್ ಭೀಮಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಹಾಜರಿದ್ದರು.
-ಎನ್.ಎನ್.ದಿನೇಶ್