ಕೂಡಿಗೆ, ಏ. 18: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಟಾಸ್ಕ್‍ಫೋರ್ಸ್ ಸಭೆಯು ಪಂಚಾಯಿತಿ ಆವರಣದಲ್ಲಿ, ಅಧ್ಯಕ್ಷೆ ಲಕ್ಷ್ಮಿರವಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಕೊರೊನಾ ವೈರಸ್ ಹಾಗೂ ಲಾಕ್‍ಡೌನ್ ವಿಷಯಗಳ ಕುರಿತು ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆಗಳು ನಡೆದವು.

ಸದಸ್ಯ ಮಹೇಶ್ ಸಭೆಯಲ್ಲಿ ಈ ವ್ಯಾಪ್ತಿಯ ದಿನಸಿ ಅಂಗಡಿಗಳಲ್ಲಿ ದಿನಸಿ ವಸ್ತುಗಳಿಗೆ ಮನಬಂದಂತೆ ದರ ವಿಧಿಸುತ್ತಿದ್ದು, ಅಂತಹ ಅಂಗಡಿಯ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ಸರ್ವ ಸದಸ್ಯರು ಹಾಗೂ ಟಾಸ್ಕ್ ಫೆÇೀರ್ಸ್ ಸಮಿತಿಯ ಸದಸ್ಯರು ಸಹಮತ ಸೂಚಿಸಿದರು.

ಒಂದು ಮದುವೆ ಕಾರ್ಯಕ್ರಮ ಇರುವುದರಿಂದ ಸಂಬಂಧಿಸಿದವರಿಂದ ಅನುಮತಿ ಪತ್ರವನ್ನು ತೆಗೆದುಕೊಂಡು ನಂತರದಲ್ಲಿ ನಿಯಮಾನುಸಾರ ನಡೆದುಕೊಳ್ಳುವಂತೆ ಅವರಿಗೆ ತಿಳಿಸುವಂತೆ ಅಶಾ ಕಾರ್ಯಕರ್ತೆ ಯರಿಗೆ ಸೂಚನೆ ನೀಡಲಾಯಿತು.

ಶುಚಿತ್ವಕ್ಕೆ ಸಂಬಂಧಿಸಿದಂತೆ ಮಾಹಿತಿ, ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಎಲ್ಲಾ ಸಮಿತಿಯವರಿಗೆ ಅಭಿವೃದ್ಧಿ ಅಧಿಕಾರಿ ಅಯಿಷಾ ಮಾಹಿತಿ ನೀಡಿದರು.

ಪ್ರೌಢಶಾಲಾ ಶಿಕ್ಷಕರು, ಆರೋಗ್ಯ ಇಲಾಖೆಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಸದಸ್ಯೆ ಶಿಲ್ಪಾ, ಮಹೇಶ ಕಾಳಪ್ಪ ಸೇರಿದಂತೆ ವಿವಿಧ ಸಮಿತಿಯ ಸದಸ್ಯರುಗಳು ಹಾಜರಿದ್ದರು.