ಸಿಡಿಲು ಬಡಿದು ಮೂವರು ಸಾವು

ಚಿಕ್ಕಮಗಳೂರು, ಏ. 18: ಮೂಡಿಗೆರೆ ತಾಲೂಕಿನ ಕಳಸ ಬಾಳೆಹೊಳೆ ಹಿತ್ಲುಮಕ್ಕಿ ಎಂಬಲ್ಲಿ ಸಿಡಿಲು ಬಡಿದು ಮೂವರು ಮಹಿಳಾ ಕೂಲಿ ಕಾರ್ಮಿಕರ ಸಾವನ್ನಪ್ಪಿದ್ದಾರೆ. ಜೋತಿ (28), ಮಾದಮ್ಮ (65), ಮಾರಿ (27) ಮೃತಪಟ್ಟವರು. ಇವರು ತಮಿಳುನಾಡಿನ ಸೇಲಂ ಧರ್ಮಪುರಿ ಜಿಲ್ಲೆಯ ಪಾಪರೆಟ್ಟಿ ಪಟ್ಟಿ ತಾಲೂಕಿನವರಾಗಿದ್ದಾರೆ.

ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ಕೆನ್ನೆ ಕೊಯ್ದ ಪುಂಡರು

ಹಾಸನ, ಏ. 18: ಕೊರೊನಾ ಲಾಕ್‍ಡೌನ್ ನಡುವೆಯೂ ಹಾಸನದಲ್ಲಿ ಪುಂಡರು ಅಟ್ಟಹಾಸ ಮೆರೆದಿದ್ದು ಮನೆ ಬಳಿ ಗಲಾಟೆ ಮಾಡುತ್ತಿದ್ದ ಯುವಕರಿಗೆ ಬುದ್ಧಿವಾದ ಹೇಳಿದ್ದಕ್ಕೆ ಚಾಕುವಿನಿಂದ ಕೊಯ್ದು ಪರಾರಿಯಾಗಿದ್ದಾರೆ. ಹಾಸನದ ಬೇಲೂರು ರಸ್ತೆಯ, ಈಶ್ವರ ದೇವಾಲಯ ಬಳಿ ಆಟೋ ಚಾಲಕ ನವೀನ್ ಮನೆಯಿದ್ದು, ಅಲ್ಲಿ ಮೂವರು ಯುವಕರು ಸಿಗರೇಟ್ ಸೇದುತ್ತಾ ಕೂಗಾಡುತ್ತಿದ್ದರು. ಇದನ್ನು ನೋಡಿದ ನವೀನ್, ಯಾರು ನೀವು, ಯಾಕೆ ಹೀಗೆ ಕೂಗಾಡುತ್ತಿದ್ದೀರಿ. ದೇವಾಲಯದ ಬಳಿ ಸಿಗರೇಟ್ ಸೇದಬಾರದು ಎಂದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೆರಳಿದ ಯುವಕರು ನೀನ್ಯಾವನೋ ಕೇಳೋಕೆ ಎಂದು ಏಕಾಏಕಿ ಚಾಕು ಬೀಸಿದ್ದಾರೆ. ನವೀನ್ ತಕ್ಷಣ ಹಿಂದೆ ಸರಿದಿದ್ದರಿಂದ ಚಾಕು ಕುತ್ತಿಗೆ ಕೊಯ್ಯುವ ಬದಲು ಕೆನ್ನೆಯನ್ನು ಕೊಯ್ದಿದೆ. ಈ ಘಟನೆ ಸಂಬಂಧ ಹಾಸನ ಪೆನ್ಷನ್ ಮೊಹಲ್ಲ ಠಾಣೆಗೆ ನವೀನ್ ದೂರು ನೀಡಿದ್ದಾರೆ.

ನಿಖಿಲ್ ವಿವಾಹ : ಮುಖ್ಯಮಂತ್ರಿ ಸ್ಪಷ್ಟನೆ

ಬೆಂಗಳೂರು, ಏ.18 : ಎಚ್.ಡಿ.ಕುಮಾರಸ್ವಾಮಿ ಅವರದ್ದು ದೊಡ್ಡ ಕುಟುಂಬ. ಆದರೆ ನಿಖಿಲ್ ಮತ್ತು ರೇವತಿ ವಿವಾಹ ಸರಳವಾಗಿ ನಡೆದಿದೆ. ಈ ಬಗ್ಗೆ ಚರ್ಚೆ ಅನಗತ್ಯ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಏಪ್ರಿಲ್ 20ರ ಬಳಿಕ ರಾಜ್ಯದಲ್ಲಿ ಹೇರಲಾಗಿರುವ ಲಾಕ್ ಡೌನ್ ವೇಳೆ ಯಾವೆಲ್ಲಾ ಕ್ಷೇತ್ರದಲ್ಲಿ ವಿನಾಯಿತಿ ನೀಡಬೇಕು ಎಂಬ ವಿಚಾರದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿದರು. ಈ ವೇಳೆ ಸುದ್ದಿಗಾರರೊಬ್ಬರು ನಿಖಿಲ್ ಕುಮಾರಸ್ವಾಮಿ-ರೇವತಿ ವಿವಾಹ ವಿಚಾರ ಪ್ರಸ್ತಾಪಿಸಿ ವಿವಾಹದ ವೇಳೆ ಲಾಕ್ ಡೌನ್ ನಿಯಮ ಉಲ್ಲಂಘನೆ ಕುರಿತು ಪ್ರಶ್ನಿಸಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಕುಮಾರಸ್ವಾಮಿ ಮತ್ತು ದೇವೇಗೌಡರದ್ದು ದೊಡ್ಡ ಕುಟುಂಬ. ಆದರೂ ತುಂಬಾ ಸರಳವಾಗಿ ವಿವಾಹ ನಡೆಸಿದ್ದಾರೆ. ವಿವಾಹದ ವೇಳೆ ಕಾನೂನು ಉಲ್ಲಂಘನೆಯಾಗಿಲ್ಲ. ಕಾನೂನಿನಡಿಯಲ್ಲೇ ವಿವಾಹ ಜರುಗಿದ್ದು, ಈ ಬಗ್ಗೆ ಅನಗತ್ಯ ಚರ್ಚೆ ಬೇಡ. ನೂತನ ವಧು-ವರರಿಗೆ ನಾನು ಶುಭಾಶಯ ಕೋರುತ್ತೇನೆ ಎಂದು ಹೇಳಿದರು.

ಮದುವೆ ಮುಂದೂಡಿದ ಡಿವೈಎಸ್ಪಿ

ಮಂಡ್ಯ, ಏ.18 : ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಪೃಥ್ವಿ ಹಾಗೂ ಮೂಲತಃ ದಾವಣಗೆರೆಯ ಐಆರ್ ಎಸ್ ಡಿಸಿಯಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದ್ಯಾಮಪ್ಪ ಅವರು ತಮ್ಮ ವಿವಾಹವನ್ನು ಮುಂದೂಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಎಂ.ಪೃಥ್ವಿ ಮತ್ತು ದ್ಯಾಮಪ್ಪ ಅವರ ವಿವಾಹ ಏ.4 ಮತ್ತು 5 ರಂದು ಧಾರವಾಡದ ಡಿ.ಬಿ.ಪಾಟೀಲ್ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಬೇಕಿತ್ತು, ಏ.10 ರಂದು ಮೈಸೂರಿನ ಪೋಲೀಸ್ ಭವನದಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಕೂಡ ಆಯೋಜನೆ ಮಾಡಿಕೊಳ್ಳಲಾಗಿತ್ತು.