ಮಡಿಕೇರಿ, ಏ. 18: ಇಂದು ಬೆಳಿಗ್ಗೆಯಿಂದ ಮುಸ್ಸಂಜೆಯ ತನಕ ಕಾಫಿ ತೋಟದೊಳಗೆ ಸುಳಿದಾಡುತ್ತಿರುವ ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟಲು ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಸುಸ್ತು ಹೊಡೆಸಿದೆ. ಅರಣ್ಯ ವಲಯಾಧಿಕಾರಿ ಸುಬ್ರಾಯ ಅವರ ನೇತೃತ್ವದಲ್ಲಿ 15 ಮಂದಿ ಸಿಬ್ಬಂದಿಗಳು ಬೆಳಿಗ್ಗೆ 8 ಗಂಟೆ ಸುಮಾರಿಗೆ ಕಾರ್ಯಾಚರಣೆ ಕೈಗೊಂಡಿದ್ದರು.

ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ವ್ಯಾಪ್ತಿಯ ಅತ್ತಿಮಂಗಲ, ನೆಲ್ಲಿಹುದಿಕೇರಿ, ವಾಲ್ನೂರು ಸುತ್ತಮುತ್ತ ನಿರಂತರ ದಾಂಧಲೆ ನಡೆಸುತ್ತಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವಂತೆ ಸುತ್ತಮುತ್ತಲಿನ ಸಾರ್ವಜನಿಕರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿ ಅಗತ್ಯ ಕ್ರಮಕ್ಕೆ ಒತ್ತಾಯಿಸಿದ್ದರು.ಆ ಮೇರೆಗೆ ಇಂದು ಅರಣ್ಯಾಧಿಕಾರಿಗಳು 15 ಮಂದಿ ಸಿಬ್ಬಂದಿ ಸಹಿತ ಕಾರ್ಯಾಚರಣೆ ಕೈಗೊಂಡಾಗ, ಅಲ್ಲಿನ ಮೇರಿಲ್ಯಾಂಡ್ ತೋಟದೊಳಗೆ ಒಂದು ಒಂಟಿ ಸಲಗ ಸಹಿತ ನಾಲ್ಕು ಮರಿಗಳೊಂದಿಗೆ ಇತರ ಹದಿನೇಳು ಆನೆಗಳು ಕಣ್ಣಿಗೆ ಎದುರಾಗಿವೆ.ಈ ಇಪ್ಪತ್ತೆರಡು ಕಾಡಾನೆಗಳ ಹಿಂಡನ್ನು ತೋಟದಿಂದ ಹೊರಗಟ್ಟುವಲ್ಲಿ ನಡೆಸಿದ ಎಲ್ಲ ಪ್ರಯತ್ನ ವಿಫಲವಾಗಿದ್ದು, ಈ ಗಜಪಡೆಯು ಮರಿಗಳನ್ನು ಬಿಟ್ಟು ತೋಟದಿಂದ ಹೊರಗೆ ತೆರಳುತ್ತಿಲ್ಲ ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಅಧಿಕಾರಿ ಸುಬ್ರಾಯ ಸ್ಪಷ್ಟಪಡಿಸಿದ್ದಾರೆ.ಗಾಳಿಯಲ್ಲಿ ಬೆದರುಗುಂಡು, ಪಟಾಕಿ ಇತ್ಯಾದಿ ಶಬ್ಧಗಳಿಗೆ ಅಂಜದ ಗಜಪಡೆ; ಕಾಫಿ ತೋಟದ ನಡುವೆ ಮರಗಳನ್ನು ಸುತ್ತುವರಿಯುತ್ತಾ, ಮತ್ತೆ ಮತ್ತೆ ಒಂದೆಡೆಯಿಂದ ಇನ್ನೊಂದು ಕಡೆಗೆ ಸುಳಿದಾಡುತ್ತಿರುವುದಾಗಿ ಪ್ರತಿಕ್ರಿಯಿಸಿದ್ದಾರೆ. ಈ ಹಿಂಡನ್ನು ಕಾಫಿ ತೋಟದಿಂದ ಕಾವೇರಿ ಹೊಳೆ ದಾಟಿಸಿ ಮಾಲ್ದಾರೆ ರಕ್ಷಿತಾರಣ್ಯಕ್ಕೆ ಸೇರಿಸುವ ಪ್ರಯತ್ನ ಕೈಗೂಡಲಿಲ್ಲ ಎಂದು ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಇಂದು ಸಂಜೆಗತ್ತಲೆ ನಡುವೆ ಸಾಕಷ್ಟು ದಣಿದಿರುವ ಇಲಾಖಾ ಸಿಬ್ಬಂದಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಒಂದು ವೇಳೆ ಹಗಲಿಡೀ ಈ ಕಾರ್ಯಾಚರಣೆಯಿಂದ ಬಳಲಿರುವ ಕಾಡಾನೆ ಹಿಂಡು ತಾವಾಗಿಯೇ ರಾತ್ರಿ ವೇಳೆ ಅರಣ್ಯದತ್ತ ತೆರಳುವ ಸಾಧ್ಯತೆಯೂ ಇರುವುದಾಗಿ ಅವರು ಅನಿಸಿಕೆ ಹಂಚಿಕೊಂಡಿದ್ದಾರೆ.ಒಂದು ವೇಳೆ ಮತ್ತೆ ತೋಟದಲ್ಲೇ ಬೀಡು ಬಿಟ್ಟಿರುವುದು ಗಮನಕ್ಕೆ ಬಂದರೆ; ಮತ್ತೆ ಇಲಾಖೆಯಿಂದ ಮೇಲಧಿಕಾರಿಗಳ ಅನುಮತಿ ಯೊಂದಿಗೆ ಮುಂದೆ ದಿನಾಂಕವನ್ನು ನಿಗದಿಗೊಳಿಸಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಿ ಕಾರ್ಯಾಚರಣೆ ಕೈಗೊಳ್ಳ ಲಾಗುವುದು ಎಂದು ಅಧಿಕಾರಿ ಸುಬ್ರಾಯ ಮಾಹಿತಿ ನೀಡಿದ್ದಾರೆ.ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಚರಣ್, ರವಿ ಇತರರು ಪಾಲ್ಗೊಂಡಿದ್ದರು.

ಚಿತ್ರ, ವರದಿ: ವಾಸು