ವೀರಾಜಪೇಟೆ, ಏ. 18: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದ ರಮೇಶ್ ಎಂಬವರ ಕಾಫಿ ತೋಟದಲ್ಲಿ ಇಂದು ಬೆಳಿಗ್ಗೆ ಚಿರತೆಯಿಂದ ಹತ್ಯೆಗೊಳಗಾದ ಹೋರಿಯ ಕಳೇಬರ ಪತ್ತೆಯಾಗಿದೆ.

ರಮೇಶ್ ನೀಡಿದ ದೂರಿನ ಮೇರೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಮಹಜರು ನಡೆಸಿದಾಗ ನಿನ್ನೆ ರಾತ್ರಿ ತೋಟದಲ್ಲಿದ್ದ ಹೋರಿಯನ್ನು ಚಿರತೆ ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹೋರಿಯ ಹೊಟ್ಟೆಯ ಬಲ ಭಾಗದಲ್ಲಿ ಬಿದ್ದಿರುವ ಹೊಡೆತವನ್ನು ಪರಿಶೀಲಿಸಿದಾಗ ಇದು ಚಿರತೆಯ ಕೃತ್ಯ ಎಂದು ಅರಣ್ಯ ಅಧಿಕಾರಿಗಳು ಗುರುತಿಸಿದ್ದಾರೆ.

ಎರಡು ವರ್ಷ ವಯಸ್ಸಿನ ಹೋರಿ ಐಮಂಗಲ ಗ್ರಾಮದ ಹಮೀದ್ ಎಂಬವರಿಗೆ ಸೇರಿದ್ದು, ಇದು ಅಲೆಮಾರಿಯಾಗಿದ್ದರಿಂದ ಮಗ್ಗುಲ ಗ್ರಾಮದ ತೋಟದಲ್ಲಿದ್ದಾಗ ಚಿರತೆಯಿಂದ ಹತ್ಯೆಗೊಂಡಿದೆ.

ವೀರಾಜಪೇಟೆ ವಲಯ ಅರಣ್ಯಾಧಿಕಾರಿ ರೋಶಿನಿ ಅವರ ಸಮ್ಮುಖದಲ್ಲಿ ವಲಯ ಅರಣ್ಯಾಧಿಕಾರಿ ದಿಲೀಪ್, ಸಹಾಯಕ ಅಧಿಕಾರಿ ಸಚಿನ್ ಮಹಜರು ನಡೆಸಿದರು. ವೀರಾಜಪೇಟೆ ವಿಭಾಗದ ಪಶು ವೈದ್ಯಕೀಯ ಶಾಲೆಯ ವೈದ್ಯರು ಹೋರಿಯ ವೈದ್ಯಕೀಯ ಪರೀಕ್ಷೆ ನಡೆಸಿದರು.