ಭಗಂಡ ಕ್ಷೇತ್ರವಾಗಿ ರೂಪುಗೊಂಡ ಪುಣ್ಯ ಸ್ಥಳ ಸ್ಕಂದವನ

ಸ್ಕಾಂದ ಪುರಾಣಾಂತರ್ಗತ ಶ್ರೀ ಕಾವೇರಿ ಮಾಹಾತ್ಮೈಯ ಪ್ರಥಮ ಅಧ್ಯಾಯ ಹೀಗೆ ಪ್ರಾರಂಭವಾಗುತ್ತದೆ:-

ಯಸ್ಯಾ ಮಧ್ಯೇ ಹರಿಶ್ಯೇತೇ ಯನ್ಮೂಲಂ ಬ್ರಹ್ಮಣಾಶ್ರಿತಂ

ಪಾಶ್ರ್ವದ್ವಯಂ ಶಿವೈರ್ಜುಷ್ಟಂ ತಸ್ಯೈ ಸಹ್ಯಭುವೇ ನಮಃ

ಯಾವ ಕಾವೇರಿಯ ಮಧ್ಯಭಾಗವು ನಾರಾಯಣನಿಗೆ ಶಯನಸ್ಥಾನ ವಾಗಿಯೂ, ಮೂಲಭಾಗವು ಬ್ರಹ್ಮನಿಂದ ಆಶ್ರಿತವಾಗಿಯೂ, ಇಬ್ಬದಿಗಳು ಶಿವನ ಲಿಂಗಗಳಿಂದ ಸೇವಿತವಾಗಿಯೂ ಇದೆಯೋ, ಅಂತಹ ಕಾವೇರಿಗೆ ವಂದಿಸುವೆನು.

ನಮೋಸ್ತು ಗುಣಪೂರ್ಣಾಯ ದೋಷ ಶೂನ್ಯಾಯ ವಿಷ್ಣವೇ

ಸಮಸ್ತ ಜಗತಾಂ ಮುಖ್ಯ ಹೇತವೇ ಧರ್ಮಸೇತವೇ

ಜಗತ್ಕಾರಣನೂ, ಧರ್ಮರಕ್ಷಕನೂ, ಗುಣ ಪೂರ್ಣನೂ, ನಿರ್ದೋಷಿಯೂ ಆದ ವಿಷ್ಣುವನ್ನು ನಮಿಸುವೆನು.

ನಮಾಮ್ಯುಮಾಂ ಶಂಕರವಲ್ಲಭಾಂ ತಾಂ

ಯಸ್ಯಾಃ ಪ್ರಸಾದಾತ್ಕವಯೋ ಭವಂತಿ

ಯಾರ ಅನುಗ್ರಹದಿಂದ ಕವಿತಾ ಶಕ್ತಿಯು ಲಭಿಸುವದೋ, ಅಂತಹ ಶಿವ ಶಂಕರನ ಮಡದಿಯಾದ ಉಮಾಳಿಗೆ(ಪಾರ್ವತಿ) ನಮಸ್ಕರಿಸುವೆನು.

ಭಕ್ತಪ್ರಿಯಾಂ ಜ್ಞಾನಮಯೀಂ ಸರಸ್ವತೀಂ ಭವಾಬ್ಧಿಮಗ್ನೋ

ದ್ಧರಣೈಕದಕ್ಷಾಂ ಅಂಬಿಕೇ ತ್ವಾಂ ನಮಸ್ಯಾಮಿ ವರದೇ ಕಾಮರೂಪಿಣಿ

ಭಕ್ತಪ್ರಿಯಳೂ, ಜ್ಞಾನಸ್ವರೂಪಿಣಿಯೂ, ಸಂಸಾರವೆಂಬ ಕಡಲಿನಲ್ಲಿ ಮುಳುಗಿದವರನ್ನು ಉದ್ಧರಿಸಲು ನಿಪುಣೆಯೂ ಆದ ಸರಸ್ವತಿಯನ್ನು ವಂದಿಸುವೆನು.

ಅಜೋಪಿ ಯತ್ಕ್ರಿಯಾಯೋಗಾನ್ನಾರಾಯಣ ಇತೀರಿತಃ

ತ್ರಿಗುಣಾಯ ತ್ರಿವೇದಾಯ ನಮಸ್ತಸ್ಮೈ ಸ್ವಯಂಭುವೇ

ಸೃಷ್ಟಿ ಸ್ಥಿತಿ ಲಯಾತ್ಮಕ ಕ್ರಿಯೆಗಳಿಂದ ಬ್ರಹ್ಮ ವಿಷ್ಣು ಶಿವಾಭಿಧಾನವನ್ನು ತಾಳಿದ, ಸತ್ವರಜಸ್ತಮೋಗುಣಗಳಿಂದ ಕೂಡಿದ ಹಾಗೂ ಋಗ್ಯಜುಸ್ಸಾಮ ವೇದಗಳ ರೂಪಿಯೂ, ತಾನಾಗಿ ಹುಟ್ಟಿದವನೂ ಆದ ಪರಬ್ರಹ್ಮನನ್ನು ವಂದಿಸುವೆನು.

ನೈಮಿಷಾರಣ್ಯವಾಸಿಗಳಾದ ಮುನಿಗಳು ದಿವ್ಯ ಚರಿತ್ರೆಯ ವಿಷಯ ವಾಗಿ ಸೂತನೊಂದಿಗೆ ಈ ರೀತಿ ನುಡಿದರು:-“ನಿನ್ನ ಅನುಗ್ರಹದಿಂದ ಹೇಳಲ್ಪಟ್ಟ ಗಂಗಾದೇವಿಯ ಮಾಹಾತ್ಮೈಯನ್ನು ಕೇಳಿದೆವು. ಮಹಾ ಬುದ್ಧಿವಂತನೂ, ಸರ್ವಜ್ಞನೂ ಆದ ಸೂತನೇ, ಈಗ ಶ್ರೀ ಕಾವೇರಿಯ ಮಾಹಾತ್ಮೈಯನ್ನು ಹೇಳುವಂತಹವನಾಗು. ಅಮೃತ ಸಮಾನವಾದ ಇತರ ತೀರ್ಥಗಳ ವಿಷಯವನ್ನೂ ಕೇಳಲು ಅಪೇಕ್ಷಿಸುತ್ತೇವೆ. ಅಲ್ಲದೆ, ಸಕಲ ತೀರ್ಥಗಳಿಗೂ ಆಶ್ರಯವಾಗಿರುವ ಕಾವೇರಿಯ ಸಕಲ ವಿಷಯ ಗಳನ್ನೂ ಕೇಳಲು ಬಯಸುತ್ತೇವೆ” ಎನ್ನುತ್ತಾರೆ. ಇದಕ್ಕೆ ಸೂತನು ಹೇಳುತ್ತಾನೆ:-“ಇಲ್ಲಿ ಸೇರಿರುವ ತಪಸ್ವಿಗಳಾದ ಸಕಲ ಋಷಿಗಳೇ ಕೇಳಿ. ಪಾರ್ವತೀ ಪರಮೇಶ್ವರರ ಸಂವಾದ ರೂಪವಾದ ಇತಿಹಾಸವೊಂದನ್ನು ನಿಮಗೆ ಹೇಳುತ್ತೇನೆ. ಕೈಲಾಸ ಶಿಖರದಲ್ಲಿ ಕುಳಿತ ದೇವಾಧಿಪನೂ, ಮಹೇಶ್ವರನೂ ಆದ ಶಂಕರನನ್ನು ಕುರಿತು ಪಾರ್ವತಿಯು ಕರಜೋಡಿಸಿ ಪ್ರೀತಿಯಿಂದ ಕೇಳುತ್ತಾಳೆ:-“ ಪೂಜ್ಯನೂ, ಜೀವಿಗಳಿಗೆ ಕ್ಷೇಮಕಾರಕನೂ, ಜೀವಿಗಳ ಸುಖ ದುಃಖಗಳ ಹಾಗೂ ಪಾಪ ಪುಣ್ಯಗಳ ಜ್ಞಾನಿಯೂ, ಸುಖಕರನೂ ಒಡೆಯನೂ ಆದ ಈಶ್ವರನೇ, ನನಗೆ ಕಾವೇರಿ ತೀರ್ಥದ ಮಾಹಾತ್ಮೈಯನ್ನು ಹೇಳು”. ಈಶ್ವರನು ಹೇಳುತ್ತಾನೆ:-“ದಕ್ಷಿಣ ದಿಕ್ಕಿನಲ್ಲಿ ಸಹ್ಯವೆಂಬ ಬೆಟ್ಟವೊಂದಿದೆ. ಆ ಸಹ್ಯ ಪರ್ವತದ ಶಿಖರವಾದ ಬ್ರಹ್ಮಗಿರಿಯು ಬ್ರಹ್ಮನ ಇನ್ನೊಂದು ಶರೀರದಂತೆ ಕಂಗೊಳಿಸುತ್ತಿದೆ. ಪಾರ್ವತಿಯೇ, ಸರ್ವ ಕಾಲದಲ್ಲಿಯೂ ಸಪ್ತ ಋಷಿಗಳು ಆ ಬ್ರಹ್ಮಗಿರಿಯ ಶಿಖರದಲ್ಲಿ ಇರುವರು. ಆ ಬ್ರಹ್ಮಗಿರಿಯ ಸನಿಹದಲ್ಲಿಯೇ ದಾರಿದ್ರ್ಯ ನಾಶಕಳಾದ, ಸರ್ವ ಪ್ರಾಣಿಗಳ ಕಲ್ಯಾಣ ವನ್ನು ಬಯಸುವ ಕಾವೇರಿಯು ಇರುವಳು.

ಪವಿತ್ರವಾದ ನೀರುಳ್ಳ ಕನಕೆಯು ಕಾವೇರಿಗೆ ಸಂಗಮವಾಗಿರುವಳು. ಆ ಎರಡು ನದಿಗಳ ಮಧ್ಯಭಾಗದಲ್ಲಿ ಸ್ಕಂದವನವೆಂಬ ಮಹಾಕ್ಷೇತ್ರ ವಿರುವದು. ಅಲ್ಲಿ ಪೂಜ್ಯ ನಾದ ಸ್ಕಂದನು ಸರ್ವ ಕಾಲದಲ್ಲಿಯೂ ಎಲ್ಲರಿಗೂ ಹಿತವನ್ನುಂಟು ಮಾಡಲು ನೆಲೆಸಿರುವನು. ಇಬ್ಬದಿ ಗಳಲ್ಲಿರುವ ವಿಷ್ಣು ಹಾಗೂ ಈಶ್ವರನಿಂದ ಕೂಡಿಕೊಂಡು ಸ್ಕಂದನು ಸರ್ವಕಾಲ ದಲ್ಲಿಯೂ ಮಾನವರಿಗೆ ಮೋಕ್ಷ ಪ್ರದಾಯಕ ನಾಗಿರುವನು. ಈ ಸ್ಕಂದ ಕ್ಷೇತ್ರದಲ್ಲಿ ಭಗಂಡ ನೆಂಬ ಮುನಿಯು ಸಮಸ್ತ ಪಾಪ ಗಳನ್ನೂ ಕಳೆದುಕೊಂಡವ ನಾಗಿ ಕಠಿಣ ತಪಸ್ಸನ್ನುಗೈದು ವಿಶೇಷವಾದ ಜ್ಞಾನವನ್ನುಗಳಿಸಿದ್ದಾನೆ. ಷಣ್ಮುಖ ಸ್ವಾಮಿಯ ಶಿಷ್ಯನಾದ ಅಗಸ್ತ್ಯನೂ ಅದೇ ಸ್ಥಳದಲ್ಲಿ ಶಿವಜ್ಞಾನವನ್ನು ಹೊಂದಿರುವನು. ಪೂರ್ವ ಪಶ್ಚಿಮ ಸಮುದ್ರಗಳಿಗೆ ಸೇರುವ ಗಂಗಾದಿ ಸಪ್ತ ನದಿಗಳೂ ಕಾವೇರಿಯ ಪ್ರಭಾವದಿಂದ ಪಾಪಶೂನ್ಯಗಳಾಗುವವು. ಪರಶಿವನು ಈ ಕುರಿತು ಹೇಳುತ್ತಿದ್ದಂತೆ ಲೋಕಮಾತೆಯಾದ ಪಾರ್ವತಿಯು ಪುಣ್ಯಪ್ರದವಾದ ಸ್ಕಂದವನದ ಮಹತ್ವವನ್ನು ಕೇಳಿ ಅದನ್ನು ನೋಡಲು ತವಕಗೊಂಡಳು. ಈ ಬಗ್ಗೆ ಶಿವನೊಂದಿಗೆ ಆಕೆ ಬಿನ್ನವಿಸಿ ಕೊಳ್ಳುತ್ತ “ನನ್ನ ಪುತ್ರ ಸುಬ್ರಹ್ಮಣ್ಯನ ಮೇಲಿನ ಪ್ರೀತಿಯಿಂದಲೂ, ಮಾನವರ ಪಾಪಗಳನ್ನು ಪರಿಹರಿಸುವ ಇಚ್ಚೆಯಿಂದಲೂ ದೇವಾಧಿಪನೇ ಸರ್ವೊತ್ತಮವಾದ ಸ್ಕಂದ ಕ್ಷೇತ್ರವನ್ನು ನಾನು ಈಗಲೇ ನೋಡ ಬಯಸುತ್ತೇನೆ. ಅಲ್ಲದೆ ಕ್ಷೇತ್ರ ಮಾಹಾತ್ಮ್ಯದ ಕುರಿತೂ ತಿಳಿದುಕೊಳ್ಳುವ ಕುತೂಹಲವಿದೆ” ಎಂದಳು. ಪಾರ್ವತಿಯ ವಿಜ್ಞಾಪನೆಯನ್ನು ಆಲಿಸಿದ ಶಿವನು ತನ್ನ ವಾಹನ ಗೋವುಗಳ ಒಡೆಯ ನಾದ ನಂದಿಕೇಶ್ವರನ ಮೇಲೆ ಪಾರ್ವತಿ ಸಹಿತನಾಗಿ ಕುಳಿತು ಸ್ಕಂದ ಕ್ಷೇತ್ರಕ್ಕೆ ತೆರಳಿದನು. ಆ ಸಂದರ್ಭ ಶಿವ ಪಾರ್ವತಿಯರೊಂದಿಗೆ ಶಿವನ ಪ್ರಮಥಗಣಗಳೂ, ಇಂದ್ರಾದಿ ದೇವತೆಗಳೂ ಸಹ್ಯ ಪರ್ವತಕ್ಕೆ ತೆರಳಿದರು. ಅಲ್ಲಿ ಶಿವನು ಅಶೋಕವೃಕ್ಷವೊಂದರ ಬುಡದಲ್ಲಿ ನಂದಿಕೇಶ್ವರನನ್ನು ನಿಲ್ಲಿಸಿ ಪಾರ್ವತಿಗೆ ಸ್ಕಂದ ಕ್ಷೇತ್ರವನ್ನು ತೋರಿಸಿದನು. ಪತ್ನಿ ಪಾರ್ವತಿಗೆ ಕ್ಷೇತ್ರದ ಕುರಿತು ಪ್ರತ್ಯಕ್ಷವಾಗಿ ವಿವರಿಸುತ್ತಾ “ಪಾರ್ವತಿಯೇ, ಈ ಸ್ಥಳವನ್ನು ನನ್ನ ಮೂಲ ಸ್ಥಾನವೆಂದು ತಿಳಿ. ಮೋಕ್ಷಾಪೇಕ್ಷಿಗಳಾದ ಜೀವಿಗಳಿಗೆ ಮುಕ್ತಿಯು ಇಲ್ಲಿಯೇ ಸಿದ್ಧಿಸು ತ್ತದೆ. ಇಲ್ಲಿಯೇ ತಪಸ್ಸಿದ್ಧಿಯೂ, ಮಂತ್ರ ಸಿದ್ಧಿಯೂ ಲಭಿಸುತ್ತದೆ. ಕಾಂತಿ ಯಿಂದೊಪ್ಪುವ ಸ್ಕಂದವನವೂ ಇದೇ ಆಗಿದೆ. ಇಲ್ಲಿಯೇ ಸ್ಕಂದನು ಇರುವನು. ಷಣ್ಮುಖ ಸ್ವಾಮಿಯ ದರ್ಶನವು ಪುಣ್ಯಕರ ವೆಂದೂ, ಪಾಪಪರಿಹಾರಕ ವೆಂದೂ ಹೇಳಲ್ಪಟ್ಟಿದೆ. ಇಲ್ಲಿ ಮತ್ತೊಂದೆಡೆ ಮಾನವರ ಪಾಪ ಪರಿಹಾರಕನಾದ ಭಗಂಡೇಶ್ವರನಿ ದ್ದಾನೆ. ಇನ್ನೊಂದೆಡೆ ಮಾನವರನ್ನು ಸಂಸಾರ ಬಂಧನದಿಂದ ಬಿಡಿಸುವ ಜನಾರ್ದನನಿದ್ದಾನೆ (ಮಹಾವಿಷ್ಣು). ಇಲ್ಲಿ ಅಗಸ್ತ್ಯನ ಆಶ್ರಮವಿದೆ. ಇನ್ನೊಂದೆಡೆ ಭಗಂಡ ಮುನಿಯ ಆಶ್ರಮವಿದೆ. ಎಲೈ, ಮಂಗಳೆಯೇ, ಇದು ತಕ್ಷಕವನವು, ಅದು ಪ್ರೇತಾರಣ್ಯವು ಎಂದು ಈಶ್ವರನು ಆಯಾ ಸ್ಥಳಗಳಲ್ಲಿ ಪ್ರತ್ಯಕ್ಷವಾಗಿ ತೋರಿಸಿ ವಿವರಿಸಿದನು. ಬಳಿಕ, ಕಾವೇರಿಯನ್ನು, ಕನಕೆಯನ್ನು, ಅಗ್ನಿಗಿರಿಯನ್ನೂ, ಸಪ್ತರ್ಷಿಗಳ ಆವಾಸಸ್ಥಾನವಾದ ಬ್ರಹ್ಮಗಿರಿಯನ್ನೂ ಹಾಗೂ ಬೇರೆ-ಬೇರೆ ಆಶ್ರಮ ಗಳನ್ನೂ ಒಂದೊಂದಾಗಿ ತೋರಿಸಿದನು. ಚಂದ್ರಭೂಷಣನಾದ ಮಹೇಶ್ವರನು ಮತ್ತೆ ಕಾವೇರಿ ಮಾಹಾತ್ಮೈಯನ್ನು ಮುಂದುವರಿಸುತ್ತಾ “ಎಲೈ ಮಂಗಳೆಯೇ, ಕನಕ ಸಂಗಮವೆಂಬ ತೀರ್ಥವು ತೀರ್ಥಗಳಲ್ಲೆಲ್ಲಾ ಸರ್ವೋತ್ತಮವಾಗಿದೆ. ಕನಕಾ ಸಂಗಮವು ಸರ್ವ ಪಾಪಗಳನ್ನೂ ಪರಿಹರಿಸುತ್ತದೆ. ಅಲ್ಲದೆ ಪವಿತ್ರವಾದುದಾಗಿದೆ. ಸರ್ವ ತೀರ್ಥಗಳ ಫಲವನ್ನೂ ಕೊಡುತ್ತದೆ. ಮಾನವನು ಗಂಗಾ-ಯಮುನಾ ಸಂಗಮದಿಂದ ಹೊಂದುವ ಫಲಕ್ಕಿಂತ ಕೋಟಿಪಾಲು ಅಧಿಕವಾದ ಫಲವನ್ನು ಕಲಿಯುಗದಲ್ಲಿ ಕನಕಾ ಸಂಗಮದಲ್ಲಿ ಹೊಂದುತ್ತಾನೆ. ಕಾವೇರೀ- ಕನಕೆಯರ ಸಂಗಮವು ಪುಣ್ಯಪ್ರದಾಯಕವಾಗಿದೆ. ಪಾರ್ವತಿಯೇ, ಮುನಿವರ್ಯರು ಈ ಕಾವೇರಿ ಕನಕಾ ಸಂಗಮದಲ್ಲಿ ಮಿಂದು ವೈಕುಂಠಪದವನ್ನು ಹೊಂದಿರುವರು. ಮೊದಲು ಇದು ಸ್ಕಂದವನ ವಾಗಿದ್ದು ಈಗ ಭಾಗಂಡಕ್ಷೇತ್ರವೆಂದು (ಭಗಂಡ) ಹೇಳಲ್ಪಡುತ್ತಿದೆ. ಕ್ಷೇತ್ರಗಳಲ್ಲಿ ಭಾಗಂಡವೆಂಬ ಕ್ಷೇತ್ರವು ಸರ್ವೋತ್ತಮವಾಗಿರುವದು. ಕಾವೇರಿ, ಕನಕೆ, ಗಂಗೆ, ಯಮುನೆ, ಸರಸ್ವತಿ, ತಾಮ್ರಪರ್ಣಿ ಹಾಗೂ ಗೌತಮಿ- ಈ ಏಳು ನದಿಗಳನ್ನೂ ಪುಣ್ಯ ನದಿಗಳೆಂದು ಹೇಳುತ್ತಾರೆ. ಗಂಗೆಯು ಕಾವೇರಿಯೆಂದೂ, ಯಮುನೆಯು ಕನಕೆಯೆಂದೂ, ಕಾವೇರಿ ಕನಕೆಯರ ಸಂಗಮವು ಪ್ರಯಾಗವೆಂದೂ ಹೇಳುವರು. ಪತಿಯ ಈ ಮಾತನ್ನು ಕೇಳಿದ ಪಾರ್ವತಿಯು ಕೇಳುತ್ತಾಳೆ:-“ಒಡೆಯನೇ, ಸ್ಕಂದವನವು ಭಾಗಂಡ ಕ್ಷೇತ್ರವಾಗಿ ಮಾರ್ಪಡಲು ಕಾರಣವೇನು ? ಇದನ್ನೆಲ್ಲಾ ನನಗೆ ವಿವರವಾಗಿ ಹೇಳು” ಪೂಜ್ಯನಾದ ಮಹೇಶ್ವರನು ಲೋಕಕಲ್ಯಾಣಕ್ಕಾಗಿ ಪವಿತ್ರವಾದ ಕತೆಯನ್ನು ಹೇಳಲುಪಕ್ರಮಿಸಿದನು:-”ಪಾರ್ವತಿಯೇ, ಪೂರ್ವದಲ್ಲಿ ತೀರ್ಥಸ್ನಾನಾಭಿಲಾಷಿಯೂ, ಸಹನಾಶೀಲನೂ, ಸತ್ಯಸಂಧನೂ, ಅಸೂಯೆಯಿಲ್ಲದವನೂ, ವೇದಾಧ್ಯಯನ ಸಂಪನ್ನನೂ, ಸದಾ ಧರ್ಮಾಸಕ್ತಿಯುಳ್ಳವನೂ, ಇಂದ್ರಿಯ ನಿಗ್ರಹಿಯೂ, ತಪಸ್ವಿಯೂ, ಧರ್ಮಜ್ಞನೂ, ವಿಷ್ಣುಭಕ್ತನೂ ಆದ ಭಗಂಡನೆಂಬ ಓರ್ವ ಮುನಿಶ್ರೇಷ್ಠ ನಿದ್ದನು. ಧಾತ್ರೀಗ್ರಾಮದ ಒಡೆಯನಾದ ಹಾಗೂ ದೇವಾಧಿಪನಾದ ವಿಷ್ಣುವನ್ನು ಆರಾಧಿಸಿ ಜ್ಞಾನ ಸಂಪತ್ತನ್ನು ಗಳಿಸಿ ಸ್ಕಂದವನಕ್ಕೆ ಪ್ರಯಾಣ ಮಾಡಿದನು. ಅಲ್ಲಿ ಆ ಭಗಂಡನು ವ್ರತಬದ್ಧನಾಗಿ ಬಹುಕಾಲ ಕಠಿಣ ತಪಸ್ಸುಗೈದನು. ಈತನ ತಪಸ್ಸಿಗೆ ಒಲಿದ ಸ್ಕಂದನು ಅವನಿಗೆ ಅನುಗ್ರಹ ತೋರಿದನು. ತನ್ನ ಸ್ವಕೀಯವಾದ ಈ ಕ್ಷೇತ್ರವನ್ನು ಸ್ಕಂದನು ಭಗಂಡನಿಗೆ ಕೊಟ್ಟಂದಿನಿಂದ ಸ್ಕಂದವನದ ಬದಲು ತತ್ವದರ್ಶಿಗಳಾದ ಮುನಿಗಳು ಭಗಂಡಕ್ಷೇತ್ರವೆಂದು (ಈಗಿನ ಭಾಗಮಂಡಲ) ಕರೆದರು. ಮುನಿಶ್ರೇಷ್ಠನಾದ ಭಗಂಡನು ಷಣ್ಮುಖಸ್ವಾಮಿಯ ಅನುಗ್ರಹದಿಂದ ಸಮಸ್ತ ಜೀವಿಗಳ ಕ್ಷೇಮಕ್ಕಾಗಿ ಅಲ್ಲಿ ಶಿವಲಿಂಗವನ್ನು ಸ್ಥಾಪನೆಗೈದನು. ಬಳಿಕ ಆ ಭಗಂಡ ಮುನಿಯು ಸ್ನೇಹದಿಂದ ಇಲ್ಲಿಯೇ ವಾಸವಾಗಿರುತ್ತಾನೆ. ಇಂದ್ರಾದಿ ದೇವತೆಗಳು ಇನ್ನೂ ತಮ್ಮ-ತಮ್ಮ ಸ್ಥಾನಗಳಿಗೆ ತೆರಳಿರುವದಿಲ್ಲ. ಎಲೈ, ಭುವನಾಧಿಪಳೆ, ನಾನೂ ಋಷಿಗಳ ಸಹಿತನಾಗಿ ಇಲ್ಲಿಯೇ ವಾಸ ಮಾಡುವೆನು. ಈ ಕ್ಷೇತ್ರವನ್ನು ಸರ್ವ ಪುಣ್ಯ ಫಲವನ್ನು ಕೊಡುವ ನನ್ನ ಕ್ಷೇತ್ರವೆಂದು ತಿಳಿ.

(ಪ್ರಥಮೋಧ್ಯಾಯವು ಮುಗಿಯಿತು. ಕೃಪೆ; ದಿ. ಟಿ.ಪಿ ನಾರಾಣಾಯಣಾಚಾರ್ಯ ಅವರು ಮೂಲ ಸಂಸ್ಕøತ ಗ್ರಂಥದಿಂದ ಕನ್ನಡಕ್ಕೆ ಅನುವಾದಿಸಿದ ಸ್ಕಾಂದ ಪುರಾಣಾಂತರ್ಗತ ಶ್ರೀ ಕಾವೇರಿ ಮಾಹಾತ್ಮೈ. ಮುಂದಿನ ವಾರ: ದ್ವಿತೀಯೋಧ್ಯಾಯ.)